ಗೆಳೆಯನನ್ನು ಮದುವೆಯಾಗಲು ನಕಲಿ ಎಎಸ್ಸೈ ಆದ ಯುವತಿ!

Update: 2016-07-26 10:58 GMT

ಗುರುದಾಸ್‌ಪುರ, ಜುಲೈ 26: ಒಂದು ಮದುವೆಗಾಗಿ ಇಂದು ಏನೆಲ್ಲ ವೇಷ ಕಟ್ಟಬೇಕೋ? ತನ್ನ ಗೆಳೆಯನ್ನನ್ನು ಮದುವೆಯಾಗಲಿಕ್ಕಾಗಿ ನಕಲಿ ಎಎಸ್ಸೈಯಂತೆ ವರ್ತಿಸುತಿದ್ದ ಯುವತಿಯೊಬ್ಬಳನ್ನು ಪಂಜಾಬ್‌ನ ಗುರುದಾಸ್ ಪುರ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ತನ್ನ ಬಾಯ್‌ಫ್ರೆಂಡ್‌ನ್ನು ವಿವಾಹ ಮಾಡಿಕೊಳ್ಳಲಿಕ್ಕಾಗಿ ಯುವತಿ ಎಎಸ್ಸೈಯ ವೇಷ ಧರಿಸಿದ್ದಳೆನ್ನಲಾಗಿದೆ.

ಕಳೆದ ಎರಡು ವರ್ಷಗಳಿಂದ ಈ ಯುವತಿ ನಕಲಿ ಸಹಾಯಕ ಇನ್‌ಸ್ಪೆಕ್ಟರ್ ಎಂದು ತನ್ನಮೊಹಲ್ಲಾ ಮತ್ತು ತನ್ನ ಬಾಯ್‌ಫ್ರೆಂಡ್‌ನ್ನು ಬಹಳ ಸುಲಭವಾಗಿ ನಂಬಿಸಿದ್ದಳು. ತಾನು ಮದುವೆಯಾಗ ಬಯಸುತ್ತಿದ್ದ ಯುವಕನಿಗೆ ಮನೆಯವರು ಸರಕಾರಿ ಉದ್ಯೋಗಿಯಾದ ವಧುವನ್ನೇ ತರುವುದಾಗಿ ಹೇಳಿದ್ದರು. ಆದ್ದರಿಂದ ತಾನು ಪೋಲಿಸಪ್ಪಳ ವೇಷ ಹಾಕಬೇಕಾಯಿತು ಎಂದು ಅವಳು ನಿಜವಾದ ಪೊಲೀಸರಿಗೆ ತಿಳಿಸಿದ್ದಾಳೆನ್ನಲಾಗಿದೆ.

  ಯುವತಿ ತನ್ನ ಪ್ರಿಯಕರನನ್ನು ಕರೆದುಕೊಂಡು ಪೊಲೀಸ್ ಲೈನ್‌ಗೆ ಹೋಗಿದ್ದೇ ಅವಳಿಗೆ ಮುಳುವಾಗಿತ್ತು. ಅಲ್ಲಿದ್ದ ಅಸಲಿ ಪೊಲೀಸರಿಗೆ ಈ ಪೊಲೀಸ್ ಅಧಿಕಾರಿಣಿಯ ಬಗ್ಗೆ ಸಂದೇಹವಾಗಿ ಪರಿಚಯ ಕಾರ್ಡ್‌ನ್ನು ಕೇಳಿದ್ದರು. ಅದು ಅವಳ ಬಳಿ ಇಲ್ಲ ಎಂದು ತಿಳಿದಾಗ ಪೊಲೀಸ್ ಟ್ರೈನಿಂಗ್ ಎಲ್ಲಿ ನಡೆಯಿತು ?ಯಾರು ಟ್ರೈನರ್ ಎಂದೆಲ್ಲ ವಿಚಾರಿಸಿದ್ದಾರೆ. ಆಗ ಅವಳ ಸುಳ್ಳು ಬಯಲಾಗಿತ್ತು. ಈ ನಕಲಿ ಎಎಸ್ಸೈ ಕುಂವಲ್‌ಜಿತ್‌ಳ ವಿರುದ್ಧ ಗುರುದಾಸ್‌ಪುರ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News