ಕಳೆದ ಮೂರು ವರ್ಷಗಳಲ್ಲಿ ಎನ್‌ಜಿಒಗಳಿಗೆ 50,000 ಕೋ.ರೂ.ಗೂ ಅಧಿಕ ವಿದೇಶಿ ಹಣ

Update: 2016-07-26 18:18 GMT

ಹೊಸದಿಲ್ಲಿ, ಜು.26: ಕಳೆದ ಮೂರು ವರ್ಷಗಳಲ್ಲಿ ಸರಕಾರೇತರ ಸಂಸ್ಥೆ(ಎನ್‌ಜಿಒ) ಗಳು 50,000 ಕೋ.ರೂ.ಗೂ ಹೆಚ್ಚಿನ ವಿದೇಶಿ ಹಣವನ್ನು ಸ್ವೀಕರಿಸಿವೆ ಎಂದು ಸಹಾಯಕ ಗೃಹಸಚಿವ ಕಿರಣ್ ರಿಜಿಜು ಅವರು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.

 ಎನ್‌ಜಿಒಗಳಿಂದ ವಿದೇಶಿ ದೇಣಿಗೆಯ ಸ್ವೀಕೃತಿ ಮತ್ತು ಬಳಕೆಯು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ) 2010ರ ವ್ಯಾಪ್ತಿಗೊಳಪಡುತ್ತದೆ. ಈವರೆಗೆ ಎಫ್‌ಸಿಆರ್‌ಎ ಅಡಿ 33,091 ಎನ್‌ಜಿಒಗಳು ನೋಂದಾಯಿಸಿಕೊಂಡಿವೆ ಮತ್ತು ಕಳೆದ ಮೂರು ವರ್ಷಗಳಲ್ಲಿ ಮತ್ತು ಈವರ್ಷದಲ್ಲಿ ಅವು ಒಟ್ಟು 50,944.54 ಕೋ.ರೂ.ವಿದೇಶಿ ದೇಣಿಗೆಗಳನ್ನು ಸ್ವೀಕರಿಸಿವೆ ಎಂದು ರಿಜಿಜು ಲಿಖಿತ ಉತ್ತರದಲ್ಲಿ ತಿಳಿಸಿದರು.
ಎಫ್‌ಸಿಆರ್‌ಎ ಅಡಿ ನೋಂದಾಯಿಸಿಕೊಳ್ಳದೆ ವಿದೇಶಿ ದೇಣಿಗೆಗಳನ್ನು ಸ್ವೀಕರಿಸಿದ ಅಪರಾಧಕ್ಕಾಗಿ 2011ರಲ್ಲಿ 24 ಎನ್‌ಜಿಒಗಳಿಗೆ 60 ಲ.ರೂ.,2015ರಲ್ಲಿ 71 ಸಂಸ್ಥೆಗಳಿಗೆ 80.11 ಲ.ರೂ. ಮತ್ತು 2016ರಲ್ಲಿ ಈವರೆಗೆ ಎಂಟು ಸಂಸ್ಥೆಗಳಿಗೆ 32.78 ಲ.ರೂ ದಂಡವನ್ನು ವಿಧಿಸಲಾಗಿದೆ ಎಂದು ಅವರು ವಿವರಿಸಿದರು.
  ಸತತ ಮೂರು ವರ್ಷಗಳ ಕಾಲ ವಾರ್ಷಿಕ ರಿಟರ್ನ್‌ಗಳನ್ನು ಸಲ್ಲಿಸದಿದ್ದಕ್ಕಾಗಿ 2012ರಲ್ಲಿ 4,138 ಮತ್ತು 2015ರಲ್ಲಿ 10,020 ಎನ್‌ಜಿಒಗಳ ನೋಂದಣಿಯನ್ನು ರದ್ದುಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News