ಸೌಂದರ್ಯವರ್ಧಕಗಳ ಜಾಹೀರಾತು ನಿಷೇಧಿಸುವಂತೆ ರಾಜ್ಯಸಭೆಯಲ್ಲಿ ಆಗ್ರಹ

Update: 2016-07-26 18:18 GMT

ಹೊಸದಿಲ್ಲಿ, ಜು.26: ಸೌಂದರ್ಯ ವರ್ಧಕ ಕ್ರೀಂಗಳ ಜಾಹೀರಾತುಗಳಿಗೆ ನಿಷೇಧ ಹೇರಬೇಕೆಂಬ ಬೇಡಿಕೆ ಇಂದು ರಾಜ್ಯಸಭೆಯಲ್ಲಿ ಮಾರ್ದನಿಸಿದೆ. ಅಂತಹ ಉತ್ಪನ್ನಗಳು ಹಾಗೂ ಅವುಗಳ ಪ್ರಚಾರ ಮಹಿಳೆಯರನ್ನು ಅವಮಾನಿಸುತ್ತವೆಂದು ಸದಸ್ಯರು ಆರೋಪಿಸಿದ್ದಾರೆ.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ವಿಪ್ಲವ್ ಠಾಕೂರ್, ಫೇರ್ ಆ್ಯಂಡ್ ಲೌಲಿ ಹಾಗೂ ಪಾಂಡ್ಸ್ ಫೇಸ್ ಕ್ರೀಂಗಳಂತಹ ಉತ್ಪನ್ನಗಳ ಜಾಹೀರಾತುಗಳು ಮಹಿಳೆಯರ ಗೌರವಕ್ಕೆ ಕುಂದಾಗಿವೆ ಎಂದರು.
ಪ್ರತಿಯೊಂದು ಕ್ರೀಂ ಸಹ ಮಹಿಳೆಯರನ್ನು ಸುಂದರಿ ಯರನ್ನಾಗಿಸುವ ಭರವಸೆ ನೀಡುತ್ತದೆ. ಆದರೆ, ಅಂತಹ ಪ್ರತಿಪಾದನೆ ಫಲಿತಾಂಶವನ್ನು ಎಂದೂ ಪರೀಕ್ಷಿಸಲಾಗಿಲ್ಲವೆಂದು ಅವರು ಹೇಳಿದರು.
ಅಂತಹ ಜಾಹೀರಾತುಗಳನ್ನು ನಿಲ್ಲಿಸಬೇಕು ಹಾಗೂ ಅವುಗಳನ್ನು ನಿಷೇಧಿಸಬೇಕೆಂದು ಠಾಕೂರ್ ಆಗ್ರಹಿಸಿದರು.
ಮಹಿಳೆಯರು ಅಂತಹ ಜಾಹೀರಾತುಗಳ ಕಾರಣದಿಂದ ಕೀಳರಿಮೆ ಬೆಳೆಸಿಕೊಳ್ಳುವಂತಾಗಿದೆಯೆಂದು ಅವರು ದೂರಿದರು.
ಅಂತಹ ಉತ್ಪನ್ನಗಳು ಮಾರುಕಟ್ಟೆಗೆ ಪ್ರವೇಶಿಸುವ ಮೊದಲು ಸಂಬಂಧಿತ ಸಂಸ್ಥೆಗಳು ನಿಜವಾಗಿಯೂ ಅವುಗಳ ಪರೀಕ್ಷೆ ನಡೆಸಿವೆಯೇ? ಎಂದು ಪ್ರಶ್ನಿಸಿದ ಠಾಕೂರ್, ಇಂತಹ ಜಾಹೀರಾತುಗಳ ಮೂಲಕ ನೀಡಲಾಗುತ್ತಿರುವ ‘ಸುಳ್ಳು ಭರವಸೆಗಳ’ ಬಗ್ಗೆ ಸರಕಾರ ಗಮನಹರಿಸಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News