ನಿಮ್ಮ ಜನರನ್ನು ನೀವು ರಕ್ಷಿಸಿ, ಅವರನ್ನು ಅಂಗವಿಕಲರಾಗಿಸಬೇಡಿ

Update: 2016-07-27 05:18 GMT

ಶ್ರೀನಗರ,ಜು.27 : ಜಮ್ಮು ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಮೇಲೆ ಪೆಲ್ಲೆಟ್ ಗನ್ ಗಳನ್ನು ಸುರಕ್ಷಾ ಪಡೆಗಳು ಉಪಯೋಗಿಸುತ್ತಿರುವ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಜಮ್ಮು ಕಾಶ್ಮೀರ ಹೈಕೋರ್ಟ್   ಈ `ಅಪಾಯಕಾರಿ' ಶಸ್ತ್ರಗಳನ್ನು `ತರಬೇತಿ ಪಡೆಯದ ಸುರಕ್ಷಾ ಸಿಬ್ಬಂದಿ'  ಉಪಯೋಗಿಸುತ್ತಿರುವ ವಿಚಾರದಲ್ಲಿ ಕೇಂದ್ರದ ವರದಿ ಕೇಳಿದೆ.
``ಪೆಲ್ಲೆಟ್ ಸೀಸದಿಂದ ತುಂಬಿದ ಉಂಡೆಯಾಗಿದೆ. ಅದು ಕಣ್ಣಿನೊಳಗೆ ಹೋದರೆ ಅಪಾಯ ತಪ್ಪಿದ್ದಲ್ಲ.  ಜಲ ಫಿರಂಗಿ ಅಥವಾ ಅಶ್ರುವಾಯುವನ್ನೇಕೆ ನೀವು ಪ್ರಯೋಗಿಸಬಾರದು ?  ಈ ಪೆಲ್ಲೆಟ್ ಗನ್ ಅಪಾಯಕಾರಿಯಾಗಿ ಬಿಟ್ಟಿದೆ,'' ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

``ಇವರೆಲ್ಲ ನಿಮ್ಮ ಜನರು. ಅವರು ಆಕ್ರೋಶಗೊಂಡಿದ್ದಾರೆ ಹಾಗೂ ಪ್ರತಿಭಟಿಸುತ್ತಿದ್ದಾರೆ. ಆದರೆ ಅದರರ್ಥ ನೀವು ಅವರನ್ನು ಅಂಗವಿಕಲರನ್ನಾಗಿಸಬೇಕೆಂದಿಲ್ಲ. ನೀವು ಅವರನ್ನು  ರಕ್ಷಿಸಬೇಕು. ಪೆಲ್ಲೆಟ್ ಗನ್ ಉಪಯೋಗಿಸುವ ನಿರ್ಧಾರವನ್ನು ಪುನರ್ ಪರಿಶೀಲಿಸಬಹುದೆಂಬ ನಿರೀಕ್ಷೆಯಿದೆ,'' ಎಂದು  ಮುಖ್ಯ ನ್ಯಾಯಮೂರ್ತಿ ಎನ್ ಪೌಲ್ ವಸಂತಕುಮಾರ್ ಹಾಗೂ ಜಸ್ಟಿಸ್ ಮುಝಫ್ಫರ್ ಹುಸೈನ್ ಅಖ್ತರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿತು.
ಇತರೆಡೆ ತರಬೇತಿ ಪಡೆಯುತ್ತಿದ್ದ ಪ್ಯಾರಾಮಿಲಿಟರಿ ಪಡೆಯ 114 ಕಂಪೆನಿಗಳನ್ನು  ಕಾಶ್ಮೀರ ಪರಿಸ್ಥಿತಿ ಹತೋಟಿಗೆ ತರಲು  ಅಲ್ಲಿಗೆ ನಿಯೋಜಿಸಬೇಕಾಯಿತು, ಎಂದು ಸಿಆರ್ಪಿಎಫ್ ಡಿಜಿಪಿ ಹೇಳಿಕೆಯನ್ನಾಧರಿಸಿ ನ್ಯಾಯಾಲಯ ಹೆಚ್ಚಿನ ಸುರಕ್ಷಾ ಸಿಬ್ಬಂದಿಗಳಿಗೆ ಪೆಲ್ಲೆಟ್ ಗನ್ ಉಪಯೋಗಿಸುವ ವಿಧಾನ ತಿಳಿದಿಲ್ಲ ಎಂದು ಅಭಿಪ್ರಾಯ ಪಟ್ಟಿತು. ``ಪೆಲ್ಲೆಟ್ ಗನ್ ಗಳನ್ನು ಅನುಭವಿ ಹಾಗೂ ತರಬೇತಿ ಹೊಂದಿದವರು ಮಾತ್ರ ಉಪಯೋಗಿಸುವಂತೆ ಕ್ರಮ ಕೈಗೊಳ್ಳಬೇಕು,''ಎಂದೂ ನ್ಯಾಯಾಲಯ ಹೇಳಿತಲ್ಲದೆ ಕಾಶ್ಮೀರದಲ್ಲಿ ಪೆಲ್ಲೆಟ್ ಗನ್ ಉಪಯೋಗದಿಂದ ಹಲವಾರು ಮಂದಿಯ ಕಣ್ಣುಗಳಿಗೆ  ಹಾಗೂ ಪ್ರಮುಖ ಅಂಗಗಳಿಗೆ ಗಾಯವಾಗಿದ್ದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News