ಕಲ್ಲಿದ್ದಲು ಹಗರಣ:ಆರ್‌ಎಸ್‌ಪಿಎಲ್ ಅಧಿಕಾರಿಗಳಿಗೆ ಜೈಲು ಶಿಕ್ಷೆ

Update: 2016-07-27 13:32 GMT

ಹೊಸದಿಲ್ಲಿ,ಜು.27: ಕಲ್ಲಿದ್ದಲು ಹಗರಣ ಪ್ರಕರಣವೊಂದರಲ್ಲಿ ರಥಿ ಸ್ಟೀಲ್ ಆ್ಯಂಡ್ ಪವರ್ ಲಿ.(ಆರ್‌ಎಸ್‌ಪಿಎಲ್)ನ ಮೂವರು ಅಧಿಕಾರಿಗಳಿಗೆ ಇಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯವು ಬುಧವಾರ ವಿವಿಧ ಪ್ರಮಾಣದ ಜೈಲುಶಿಕ್ಷೆ ವಿಧಿಸಿದೆ. ಕಂಪನಿಗೆ ಛತ್ತೀಸ್‌ಗಡದಲ್ಲಿನ ಕೆಸ್ಲಾ ಉತ್ತರ ಕಲ್ಲಿದ್ದಲು ಗಣಿಯ ಮಂಜೂರಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಮಂಗಳವಾರ ಈ ಅಧಿಕಾರಿಗಳನ್ನು ದೋಷಿಗಳೆಂದು ಘೋಷಿಸಿತ್ತು.
ವಿಶೇಷ ಸಿಬಿಐ ನ್ಯಾಯಾಧೀಶ ಭರತ್ ಪರಾಶರ ಅವರು ಆರ್‌ಎಸ್‌ಪಿಎಲ್‌ನ ಸಿಇಒ ಉದಿತ್ ರಥಿ ಮತ್ತು ಎಂ.ಡಿ. ಪ್ರದೀಪ್ ರಥಿ ಅವರಿಗೆ ಮೂರು ವರ್ಷಗಳ ಮತ್ತು ಎಜಿಎಂ ಕುಶಲ್ ಅಗರವಾಲ್ ಅವರಿಗೆ ಒಂದು ವರ್ಷದ ಜೈಲು ಶಿಕ್ಷೆಯನ್ನು ಪ್ರಕಟಿಸಿದರು.
ನ್ಯಾಯಾಲಯವು ಆರ್‌ಎಸ್‌ಪಿಎಲ್ ಮತ್ತು ಉದಿತ್ ರಥಿಗೆ ತಲಾ 50 ಲಕ್ಷ ರೂ.,ಪ್ರದೀಪ್ ರಥಿಗೆ 25 ಲ.ರೂ. ಮತ್ತು ಅಗರವಾಲ್‌ಗೆ ಐದು ಲ.ರೂ.ಗಳ ದಂಡವನ್ನೂ ವಿಧಿಸಿತು.
ಇದು ಕಲ್ಲಿದ್ದಲು ಹಗರಣದಲ್ಲಿ ಅಪರಾಧ ಸಾಬೀತಾಗಿರುವ ಎರಡನೇ ಪ್ರಕರಣವಾಗಿದೆ. ಈ ಅಧಿಕಾರಿಗಳು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರೆದುರಿನಲ್ಲಿಯೂ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಸರಕಾರವನ್ನು ವಂಚಿಸಿದ್ದನ್ನು ನ್ಯಾಯಾಲಯವು ಮಂಗಳವಾರ ಎತ್ತಿ ಹಿಡಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News