ನಮ್ಮ ಸೈನ್ಯವನ್ನು ನಮ್ಮದೇ ಜನರ ವಿರುದ್ಧ ಯಾಕೆ ನಿಯೋಜಿಸಬೇಕು?

Update: 2016-07-28 06:16 GMT

ಮುಂಬೈ, ಜು.28 : ನಮ್ಮ ದೇಶದ ಗಡಿಗಳನ್ನು ಕಾಯಬೇಕಿರುವ ನಮ್ಮ ಸೈನ್ಯವನ್ನು ನಮ್ಮದೇ ಜನರ  ವಿರುದ್ಧ ಏಕೆ ನಿಯೋಜಿಸಬೇಕು? ಮೇಲಾಗಿ  ಅವರನ್ನು ನಿಯೋಜಿಸಿದರೂ ಅವರಿಗೇಕೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯಡಿ ರಕ್ಷಣೆಯೊದಗಿಸಲಾಗಿದೆ ?'' ಎಂಬ ಮಹತ್ವದ ಪ್ರಶ್ನೆಯನ್ನು ನೌಕಾದಳದ ಮಾಜಿ ಮುಖ್ಯಸ್ಥರ ಪತ್ನಿ ಲಲಿತಾ ರಾಮದಾಸ್ ಎತ್ತಿದ್ದಾರೆ.

ಈ ಬಗ್ಗೆ ಅವರು ಬರೆದಿರುವ ಲೇಖನವೊಂದನ್ನು  ದಿ ಸಿಟಿಝನ್ ಆನ್ಲೈನ್ ದೈನಿಕ ಪ್ರಕಟಿಸಿದೆ.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ತಮ್ಮ ನಮನ ಸಲ್ಲಿಸುತ್ತಾ  ತಾವು ನೌಕಾಪಡೆಯ ಮಾಜಿ ಮುಖ್ಯಸ್ಥರ ಪತ್ನಿಯಾಗಿಯೂ  ಸಮವಸ್ತ್ರಧಾರಿಗಳ ಬಗ್ಗೆ ಏಕೆ ಟೀಕೆ ವ್ಯಕ್ತಪಡಿಸುತ್ತಿದ್ದೇನೆಂದು ಹಲವರು ತಮ್ಮನ್ನು ಪ್ರಶ್ನಿಸುತ್ತಿರುವುದನ್ನು ಉಲ್ಲೇಖಿಸಿದ ಅವರು  ``ನಮ್ಮ ಸೇನಾ ಪಡೆಗಳ ವೃತ್ತಿಪರತೆ, ತ್ಯಾಗ ಹಾಗೂ ಶೌರ್ಯದ ಬಗ್ಗೆ ತಮಗೆ ಹೆಮ್ಮೆಯಿದೆ'' ಎಂದು ಹೇಳಿದ ಲಲಿತಾ ರಾಮದಾಸ್ ಅದೇ ಸಮಯ 1984 ರಲ್ಲಿ ದೆಹಲಿಯಲ್ಲಿ ಸಿಕ್ಖರ ವಿರುದ್ಧವೇ ನಮ್ಮ ಸೇನೆಯನ್ನು ಅಧಿಕಾರಸ್ಥರ ಸ್ವಾರ್ಥಕ್ಕಾಗಿ ಬಳಸಿದ್ದು ವಾಸ್ತವತೆಯ ಬಗ್ಗೆ ತಮ್ಮ ಕಣ್ಣು ತೆರೆಸಿತು. ಮುಂದೆ ಇದೇ ಮಾದರಿ ಬಾಬ್ರಿ ಮಸೀದಿ ಧ್ವ್ವಂಸ ಹಾಗೂ 2002ರ ಗುಜರಾತ್ ಗಲಭೆ ಸಂದರ್ಭಗಳಲ್ಲಿ ವ್ಯಕ್ತವಾಗಿತ್ತು,'' ಎಂದು ಬರೆದಿದ್ದಾರೆ.

``ಸರಕಾರ ನೀಡುವ ಹೇಳಿಕೆಗಳು ಹಾಗೂ ನಮ್ಮ ರಾಷ್ಟ್ರೀಯ ಸುದ್ದಿ ಚಾನೆಲ್ ಗಳು  ಪ್ರಸಾರ ಮಾಡುವ ಪೂರ್ವಾಗ್ರಹ ಪೀಡಿತ ವರದಿಗಳಿಂದ ನಾವು ದೂರ ಸರಿದು ವಾಸ್ತವತೆಯನ್ನು ಇತರ ಮೂಲಗಳಿಂದ ಅರಿತು ನಮ್ಮದೇ ತೀರ್ಮಾನಗಳಿಗೆ ಬರುವ ಅಗತ್ಯವಿದೆ,''ಎಂದು ಅವರು ಬರೆದಿದ್ದಾರೆ.

``ಇಂದು ಸಮವಸ್ತ್ರದಲ್ಲಿರುವ ನಮ್ಮ ಜನರು, ಅವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದ ಬಡ ಯುವಕರು ಸೇನೆಗೆ ಉದ್ಯೋಗ, ಸುರಕ್ಷೆಗಾಗಿ ಸೇರಿದರೂ ಮುಂದೆ  ಅವರನ್ನು ಅತ್ಯುನ್ನತ ದೇಶಭಕ್ತಿ ಹಾಗೂ ದೇಶ ಸೇವೆ ಮೀಸಲಾದವರೆಂಬ ಹೆಸರಿನಲ್ಲಿ ಮಾರ್ಕೆಟಿಂಗ್ ಮಾಡಲಾಗುತ್ತದೆ,'' ಎಂದು ಅವರು ಬಣ್ಣಿಸಿದ್ದಾರೆ.

``ಇಂತಹ ಯುವಕರು  ಕರ್ತವ್ಯದಲ್ಲಿರುವಾಗ ಕೊಲ್ಲಲ್ಪಟ್ಟರೆ, ಅದು ಆ ವೃತ್ತಿಯಲ್ಲಿರುವವರು ಎದುರಿಸಬೇಕಾಗಿರುವ ಅಪಾಯವಾದರೂ,. ಹೆಚ್ಚಿನ ಸಂದರ್ಭಗಳಲಿ ನಮ್ಮ ರಾಜಕಾರಣಿಗಳು ಹಾಗೂ  ರಾಜಕೀಯ ಪಕ್ಷಗಳ ಸ್ವಹಿತಾಸಕ್ತಿಯಿಂದಾಗಿಯೇ ಅವರು ತಮ್ಮ ಜನರ ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ,'' ಎಂದು ಲಲಿತಾ ರಾಮದಾಸ್ ವಿರಿಸಿದ್ದಾರೆ.

ಕಾಶ್ಮೀರದಲ್ಲಿ ಶಂಕಿತ ಉಗ್ರನೊಬ್ಬನ ಹತ್ಯೆ ಹಾಗೂ ತದನಂತರ ಭುಗಿಲೆದ್ದ ಹಿಂಸೆಯನ್ನು ಉಲ್ಲೇಖಿಸುತ್ತಾ ``22 ವರ್ಷದ ಯುವಕನೊಬ್ಬ `ಉಗ್ರವಾದಿಯೇ ಅಥವಾ ಕೊಲೆಗಾರನೇ"' ಎಂಬುದನ್ನು  ಅರ್ನಬ್ ಗೋಸ್ವಾಮಿ ಅಥವಾ ಝೀ ನ್ಯೂಸ್  ಹೇಳಿದರೆ ನಾವು ನಂಬಬೇಕೇನು ?'' ಎಂದು ಪ್ರಶ್ನಿಸಿದ ಅವರು  ``ಹೌದು- ಆತ ಉಗ್ರವಾದಿ- ಆದರೆ ಆತ ಉಗ್ರವಾದಿಯೇಕೆ ಆದ ಎಂಬುದರ ಹಿಂದೆ ಒಂದು ದುರಂತ ಕಥೆಯಿದೆ. ಆದರೆ ಎನ್ ಕೌಂಟರ್ ನಲ್ಲಿ ಅಂಥವರನ್ನು ಸಾಯಿಸುವುದು ಅದಕ್ಕೆ ಪರಿಹಾರವಲ್ಲ, ಸ್ನೇಹಿತರೇ ಅದಕ್ಕೆ ಉತ್ತರವಿದ್ದರೆ-ಗಾಳಿಯನ್ನು ಒಳಕ್ಕೆ ಊದುವುದಾಗಿದೆ. ಆದರೆ ನಾವು ನಮ್ಮ ಕಿವಿಗಳನ್ನು ಕಾಂಕ್ರೀಟ್ ನಿಂದ ಹಾಗೂ ತಲೆಯನ್ನು ಗಂಟುಮೂಟೆಯಿಂದ ಮುಚ್ಚಿರುವಾಗ ಗಾಳಿ ಹೇಳುವುದನ್ನು ನಾವು ಹೇಗೆ ಕೇಳಲು ಸಾಧ್ಯ?'' ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News