ಸರಕಾರದ ವಿರುದ್ಧ ವಿಪಕ್ಷ ವಾಗ್ದಾಳಿ

Update: 2016-07-29 17:53 GMT

ಹೊಸದಿಲ್ಲಿ, ಜು.29: ಗೋಮಾಂಸ ವಿವಾದದಲ್ಲಿ ಮಧ್ಯಪ್ರದೇಶದಲ್ಲಿ ಇಬ್ಬರು ಮುಸ್ಲಿಮ್‌ಮಹಿಳೆಯರನ್ನು ಥಳಿಸಿದ ವಿಚಾರದಲ್ಲಿ ವಿಪಕ್ಷವಿಂದು ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ದಲಿತರು ಹಾಗೂ ಮುಸ್ಲಿಮರ ವಿರುದ್ಧ ಹೆಚ್ಚು ಹೆಚ್ಚು ಹಿಂಸಾಚಾರಗಳು ನಡೆಯುತ್ತಿವೆಯೆಂದು ಅದು ಆರೋಪಿಸಿದೆ. ಪ್ರಕರಣದಲ್ಲಿ ನ್ಯಾಯ ಒದಗಿಸುವ ಆಶ್ವಾಸನೆಯನ್ನು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ನೀಡಿದ್ದಾರೆ.

 ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ದಲಿತರ ಮೇಲಿನ ದಾಳಿ ಘಟನೆಗಳ ಅಂಕಿ-ಅಂಶಗಳನ್ನು ಬಿಚ್ಚಿಟ್ಟರು. ಮಧ್ಯಪ್ರದೇಶದ ಮಂಡ್ಸೌರ್, ಗುಜರಾತ್, ಉತ್ತರಪ್ರದೇಶದಲ್ಲಿ ಇಬ್ಬರು ದಲಿತರ ಹತ್ಯೆ ಪ್ರಕರಣಗಳನ್ನು ಅವರು ತನ್ನ ಹೇಳಿಕೆಗೆ ಆಧಾರವಾಗಿ ನೀಡಿದರು.
ಗೋರಕ್ಷಣಾ ಗುಂಪುಗಳನ್ನು ನಿಷೇಧಿಸುವಂತೆ ಆಗ್ರಹಿಸಿದ ಖರ್ಗೆ, ಅವು ಕಾನೂನನ್ನು ಕೈಗೆತ್ತಿಕೊಳ್ಳುತ್ತಿವೆ. ಅವುಗಳಿಗೆ ರಾಜ್ಯಗಳ ಬಿಜೆಪಿ ಸರಕಾರಗಳು ಪ್ರೋತ್ಸಾಹ ನೀಡುತ್ತಿವೆಯೆಂದು ಆರೋಪಿಸಿದರು.
ತಾವು ಎಮ್ಮೆಯ ಮಾಂಸ ಒಯ್ಯುತ್ತಿದ್ದೇವೆ. ಗೋ ಮಾಂಸವನ್ನಲ್ಲವೆಂದು ಆ ಮಹಿಳೆಯರಿಬ್ಬರೂ ಅಂಗಲಾಚುತ್ತಿದ್ದರೂ ಅವರನ್ನು ಪೊಲೀಸರ ಮುಂದೆಯೇ ಥಳಿಸಲಾಯಿತು. ಅವರು ಪುರುಷರಾಗಿರುತ್ತಿದ್ದರೆ, ಹತ್ಯೆ ಮಾಡುತ್ತಿದ್ದೇವೆಂದು ದುಷ್ಕರ್ಮಿಗಳು ಅವರಿಗೆ ಹೇಳಿದ್ದರು. ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಅದು ಎಮ್ಮೆಯ ಮಾಂಸವೆಂದು ಸಾಬೀತಾಗಿದೆ ಎಂದವರು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News