ಮರ ಕಡಿಯಬಾರದೆಂದು, ಮರ ಹತ್ತಿ ಕೂತ ಪರಿಸರ ಪ್ರೇಮಿ ಬಶೀರ್ ಅನಂದ್ ಜಾನ್ !

Update: 2016-07-30 08:24 GMT

ಕಲ್ಪಟ್ಟ,ಜುಲೈ 30: ಆಸ್ಪತ್ರೆ ಆವರಣದಲ್ಲಿದ್ದ ಬೃಹತ್ ಗಾತ್ರದ ಮರವನ್ನು ಕಡಿಯಲು ಮುಂದಾದಾಗ ಪರಿಸರ ಪ್ರೇಮಿಯೊಬ್ಬರು ಮರವನ್ನು ಕಡಿಯಬಾರದೆಂದು ಆಗ್ರಹಿಸಿ ಅದೇ ಮರವನ್ನು ಹತ್ತಿ ಅಪ್ಪಿಹಿಡಿದು ಊರವರು ಮತ್ತು ಅಧಿಕಾರಿಗಳನ್ನು ಗಂಟೆಗಳಕಾಲ ಕೈಕಟ್ಟಿನಿಲ್ಲುವಂತೆ ಮಾಡಿದ ಪ್ರಸಂಗ ಕಲ್ಪಟ್ಟದಿಂದ ವರದಿಯಾಗಿದೆ. ಕಲ್ಪಟ್ಟದ ಪರಿಸರ ಪ್ರೇಮಿಯಾದ ಅಬ್ದುಲ್ ಬಶೀರ್ ಯಾನೆ ಬಶೀರ್ ಆನಂದ್  ಜಾನ್ ಎಂಬವರು ಕಲ್ಪಟ್ಟದ ಸಾರ್ವಜನಿಕ ಆಸ್ಪತ್ರೆಯ ಮುಂದಿದ್ದ ಬೃಹತ್ ಮರವನ್ನು ಕಡಿಯದಂತೆ ಪ್ರತಿರೋಧವನ್ನು ಒಡ್ಡಿದ್ದು ಈ ರೀತಿಯಾಗಿತ್ತು ಎಂದು ವರದಿ ತಿಳಿಸಿದೆ.

 ಆಸ್ಪತ್ರೆ ಆವರಣದಲ್ಲಿ ಉರುಳುವ ಭೀತಿ ಸೃಷ್ಟಿಸಿದ್ದ ಮರಗಳ ಗೆಲ್ಲುಗಳನ್ನು ಕಡಿಯಲು ಆದೇಶವಾಗಿದ್ದು ಅದರಂತೆ ಕೆಲಸಗಾರರು ಗೆಲ್ಲುಗಳನ್ನು ಕಡಿಯಲು ಮುಂದಾದಾಗ ಅದನ್ನು ತಿಳಿದುಕೊಂಡು ಅಲ್ಲಿಗೆ ಧಾವಿಸಿ ಬಂದ ಬಶೀರ್ ಮರವನ್ನು ಕಡಿಯಬೇಡಿ ಎನ್ನುತ್ತಾ ಸರಸರನೆ ಮರವನ್ನು ಹತ್ತಿ ಅಪ್ಪಿಹಿಡಿದರು ಎನ್ನಲಾಗಿದೆ.

 ಬಶೀರ್‌ರ ಅವಾಂತರ ಕಂಡು ಜನರು ಗುಂಪುಗೂಡಿದಾಗ ಮರಗಳ ಕುರಿತು ಮತ್ತು ತನ್ನ ಪ್ರತಿಭಟನೆಯ ಕುರಿತು ಬಶೀರ್ ಭಾಷಣ ಮಾಡಲು ಆರಂಭಿಸಿದರು. ಕಲ್ಪಟ್ಟ ಎಸ್ಸೈ ಸಂತೋಷ್ ರ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಬಶೀರ್‌ರನ್ನು ಮರದಿಂದ ಕೆಳಗಿಳಿಯುವಂತೆ ಹೇಳಿದರೂ ಬಶೀರ್ ಅದಕ್ಕೆ ಸಿದ್ಧರಾಗಲಿಲ್ಲ. ಅಷ್ಟರಲ್ಲಿ ಸ್ಥಳೀಯ ಶಾಸಕ ಸಿ.ಕೆ. ಶಶೀಂದ್ರನ್ ಫೋನ್ ಮಾಡಿ ಸಮಸ್ಯೆಯನ್ನು ಸುಸೂತ್ರವಾಗಿ ಬಗೆಹರಿಸೋಣ, ಸಂಜೆ ಮೂರು ಗಂಟೆಗೆಚರ್ಚೆ ನಡೆಸೋಣ ಎಂದು ತಿಳಿಸಿದರೂ ಬಶೀರ್ ಮರದಿಂದ ಕೆಳಗಿಳಿಯಲು ಒಪ್ಪಲಿಲ್ಲ ಎನ್ನಲಾಗಿದೆ.

     ಪರಿಸರ ಕಾರ್ಯಕರ್ತರ ಒಂದು ಸಮಿತಿ ರಚಿಸಿ ಅವರ ವರದಿಯ ಅನ್ವಯ ಮಾತ್ರ ಮರವನ್ನು ಕಡಿಯಬೇಕು ಎಂದು ನಂತರ ಬಶೀರ್ ತನ್ನ ಬೇಡಿಕೆ ಮುಂದಿಟ್ಟರು. ಇಷ್ಟರಲ್ಲಿ ಅಗ್ನಿಶಾಮಕ ದಳದವರು ಅಲ್ಲಿಗಾಗಮಿಸಿದ್ದು ಮರ ಹತ್ತಿ ಬಶೀರ್‌ರ ಹತ್ತಿರಕ್ಕೆ ಹೋಗಲು ಪ್ರಯತ್ನಿಸಿದರೂ ಬಶೀರ್ ಮತ್ತಷ್ಟು ಎತ್ತರಕ್ಕೆ ಹತ್ತಿಕೂತರು. ಒಂದು ಗಂಟೆಗಳ ಕಾಲ ಈ ನಾಟಕ ಮುಂದುವರಿದಿತ್ತು. ನಂತರ ಊರವರು ಬಶೀರ್‌ರನ್ನು ಒಪ್ಪಿಸಿದ ಬಳಿಕ ಅವರು ಮರದಿಂದ ಕೆಳಗಿಳಿದರು ಎನ್ನಲಾಗಿದೆ.ಸಾರ್ವಜನಿಕರಿಗೆ ಬೆದರಿಕೆಯಾಗುವ ರೀತಿಯಲ್ಲಿ ವರ್ತಿಸಿದ್ದಕ್ಕಾಗಿ ಬಶೀರ್‌ರ ವಿರುದ್ಧ ಪೊಲೀಸರು ಕೇಸು ದಾಖಲಿಸಿ ನಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ. ಬಶೀರ್ ವಯನಾಡ್ ನ ಪ್ರಸಿದ್ಧ ಪರಿಸರ ಪ್ರೇಮಿ ಹಾಗೂ ವಿಚಾರವಾದಿಗಳ ಸಂಘದ ನಾಯಕರೂ ಆಗಿದ್ದಾರೆ.ಜಾತ್ಯತೀತತೆಯ ಸೂಚಕವಾಗಿ ಬಶೀರ್ ತನ್ನ ಹೆಸರನ್ನೇ ಬಶೀರ್ ಆನಂದ್  ಜಾನ್ ಎಂದು ಇಟ್ಟುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News