ಮಾಧ್ಯಮ ಪ್ರತಿನಿಧಿಗಳ ಮೇಲೆ ದೌರ್ಜನ್ಯ ಕೊಝಿಕೊಡೆ ಪಿಎಸ್‌ಐ ಅಮಾನತು

Update: 2016-07-30 15:21 GMT

ಕೊಝಿಕೊಡೆ,ಜು.30: ಶನಿವಾರ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ ಅರೋಪದಲ್ಲಿ ಕೊಝಿಕೊಡೆ ನಗರ ಠಾಣೆಯ ಪಿಎಸ್‌ಐ ಪಿ.ಎಂ.ವಿಮೋದ್ ಅವರನ್ನು ಡಿಜಿಪಿ ಲೋಕನಾಥ ಬೆಹ್ರಾ ಅವರು ಅಮಾನತುಗೊಳಿಸಿದ್ದಾರೆ.
ಶನಿವಾರ ಬೆಳಿಗ್ಗೆ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣವೊಂದರ ವರದಿಗಾರಿಕೆಗೆ ತೆರಳಿದ್ದ ಮೂವರು ಮಾಧ್ಯಮ ಪ್ರತಿನಿಧಿಗಳಿಗೆ ವಿಮೋದ್ ತಡೆಯೊಡ್ಡಿದ್ದರು. ಜಿಲ್ಲಾ ದಂಡಾಧಿಕಾರಿಗಳ ಸೂಚನೆಯ ಮೇರೆಗೆ ತಾನು ಈ ಕ್ರಮವನ್ನು ಕೈಗೊಂಡಿದ್ದಾಗಿ ಅವರು ಹೇಳಿದ್ದರು. ಆದರೆ ತಾನು ಇಂತಹ ಯಾವುದೇ ಸೂಚನೆಯನ್ನು ನೀಡಿಲ್ಲ ಎಂದು ಜಿಲ್ಲಾ ದಂಡಾಧಿಕಾರಿಗಳು ಕೇರಳ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್‌ಗೆ ತಿಳಿಸಿದ್ದರು.
ವಿಮೋದ್ ಎಲ್ಲ ಮೂವರು ಸುದ್ದಿಗಾರರನ್ನು ಪೊಲೀಸ್ ಜೀಪಿನಲ್ಲಿ ಠಾಣೆಗೊಯ್ದು ಕೆಲಕಾಲ ಅಲ್ಲಿಯೇ ಇಟ್ಟುಕೊಂಡಿದ್ದರು. ಪತ್ರಕರ್ತರ ಪ್ರತಿಭಟನೆಯ ಬಳಿಕ ಅವರನ್ನು ಅಲ್ಲಿಂದ ತೆರಳಲು ಅವಕಾಶ ನೀಡಲಾಗಿತ್ತು. ಆದರೆ ಟಿವಿ ವಾಹಿನಿಯೊಂದರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಈ ವಾಹನವನ್ನು ವಾಪಸ್ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಠಾಣೆಗೆ ತೆರಳಿದ್ದಾಗ ವಿಮೋದ್ ಅವಾಚ್ಯ ಶಬ್ದಗಳಿಂದ ಅವರನ್ನು ನಿಂದಿಸಿದ್ದರು. ಅವರು ಪ್ರ್ರತಿಭಟಿಸಿದಾಗ ಅವರೊಂದಿಗೆ ಗುದ್ದಾಟಕ್ಕೆ ಇಳಿದ ವಿಮೋದ್ ಕೆಲವರನ್ನು ಠಾಣೆಯೊಳಗೆ ಎಳೆದೊಯ್ದು ಲಾಕಪ್‌ನಲ್ಲಿ ಕೂಡಿ ಹಾಕಿದ್ದರು.
ಈ ಘಟನೆಯನ್ನು ಖಂಡಿಸಿ ತಿರುವನಂತಪುರ,ಕೊಝಿಕೊಡೆ ಮತ್ತು ದಿಲ್ಲಿಗಳಲ್ಲಿ ಪತ್ರಕರ್ತರು ಪ್ರತಿಭಟನಾ ರ್ಯಾಲಿಗಳನ್ನು ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News