ನೆರೆಪೀಡಿತ ಅಸ್ಸಾಮಿಗೆ ಗೃಹಸಚಿವರ ಭೇಟಿ

Update: 2016-07-30 17:09 GMT

ಗುವಾಹಟಿ,ಜು.30: ಕೇಂದ್ರ ಗೃಹಸಚಿವ ರಾಜನಾಥ ಸಿಂಗ್‌ಅವರು ಶುಕ್ರವಾರ ಅಸ್ಸಾಮಿಗೆ ಭೇಟಿ ನೀಡಿ ನೆರೆಯಿಂದಾಗಿರುವ ಹಾನಿಯನ್ನು ಪರಿಶೀಲಿಸಿದರು. ನೆರೆಯಿಂದಾಗಿ ಅಸ್ಸಾಂ ತತ್ತರಿಸಿದೆ. ಸಾವಿನ ಸಂಖ್ಯೆ 13ಕ್ಕೇರಿದೆ. 22 ಜಿಲ್ಲೆಗಳ 3,374 ಗ್ರಾಮಗಳ ಕನಿಷ್ಠ 18 ಲಕ್ಷ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ನಾಗಾಂವ್ ಮತ್ತು ಮೋರಿಗಾಂವ್ ಜಿಲ್ಲೆಗಳ ನೆರೆಪೀಡಿತ ಪ್ರದೇಶಗಳೊಂದಿಗೆ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ವೈಮಾನಿಕ ಸಮೀಕ್ಷೆಯನ್ನು ನಡೆಸಿದ ಸಿಂಗ್ ನೆರೆಪೀಡಿತ ಜನರನ್ನು ಭೇಟಿಯಾದರು. ಸಹಾಯಕ ಗೃಹಸಚಿವ ಕಿರಣ್ ರಿಜಿಜು ಮತ್ತು ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವ ಜಿತೇಂದ್ರ ಸಿಂಗ್ ಅವರ ಜೊತೆಯಲ್ಲಿದ್ದರು.ಕಾಜಿರಂಗಾ ಉದ್ಯಾನವನದ ಸುಮಾರು ಶೇ.80ರಷ್ಟು ಪ್ರದೇಶ ನೀರಿನಲ್ಲಿ ಮುಳುಗಿದೆ.
ಸಂಜೆ ದಿಲ್ಲಿಗೆ ಮರಳುವ ಮುನ್ನ ಸಿಂಗ್ ರಾಜ್ಯದ ಮುಖ್ಯಮಂತ್ರಿ ಸರಬಾನಂದ ಸೋನೊವಾಲ್ ಮತ್ತು ಹಿರಿಯ ಸರಕಾರಿ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News