ಟೈಮ್ಸ್ ನೌ ವಿರುದ್ಧ ಮಾನನಷ್ಟ ನೋಟಿಸ್ ಜಾರಿಗೊಳಿಸಿದ ಝಾಕಿರ್ ನಾಯ್ಕ್

Update: 2016-07-30 17:15 GMT

ಮುಂಬೈ, ಜು.30: ತನ್ನ ವಿರುದ್ಧ 'ಸುಳ್ಳು ಹಾಗೂ ಮಾನಹಾನಿಕರ' ವರದಿಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ವಿದ್ವಾಂಸ ಡಾ. ಝಾಕಿರ್ ನಾಯ್ಕಾ ಅವರು ಟೈಮ್ಸ್ ನೌ ಟಿವಿ ಚಾನೆಲ್ ವಿರುದ್ಧ ಮಾನನಷ್ಟ ನೋಟಿಸ್ ಜಾರಿಗೊಳಿಸಿದ್ದಾರೆ ಹಾಗೂ 500 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.

 ನೋಟಿಸ್‌ನಲ್ಲಿ ಟೈಮ್ಸ್ ನೌ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ, ಅದರ ಮುಂಬೈ ಬ್ಯೂರೋ ಮುಖ್ಯಸ್ಥ ಮೇಘಾ ಪ್ರಸಾದ್ ಹಾಗೂ ಚಾನೆಲ್ ಸಿಇಒ ಸುನೀಲ್ ಲುಲ್ಲರನ್ನು ಹೆಸರಿಸಲಾಗಿದೆ. ಝಾಕಿರ್ ಅವರ ವಕೀಲ ಮುಬಿನ್ ಸೋಲ್ಕರ್ ಅದನ್ನು ಜಾರಿಗೊಳಿಸಿದ್ದಾರೆ.
  ''ಟೈಮ್ಸ್ ನೌ ತನ್ನ 'ದಿ ನ್ಯೂಸ್‌ಅವರ್ ಡಿಬೇಟ್' ಕಾರ್ಯಕ್ರಮದಲ್ಲಿ ಝಾಕಿರ್ ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿ ಅವರ ಗೌರವವನ್ನು ಸಾರ್ವಜನಿಕರ ದೃಷ್ಟಿಯಲ್ಲಿ ಕುಂದಿಸಿದ್ದಾರೆ' ಎಂದು ನೋಟಿಸ್‌ನಲ್ಲಿ ದೂರಲಾಗಿದೆ.
      ಅರ್ನಬ್ ತಮ್ಮ ಪ್ರೈಮ್ ಟೈಮ್ ಡಿಬೇಟ್ ಕಾರ್ಯಕ್ರಮದಲ್ಲಿ ಸ್ಟಾಪ್ ಝಾಕಿರ್‌ನಾಯ್ಕಾ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಝಾಕಿರ್ ವಿರುದ್ಧ ಅಭಿಯಾನವೊಂದನ್ನೇ ನಡೆಸುತ್ತಿದ್ದು, ಚಾನೆಲ್‌ನ ವರದಿಗಾರರೊಬ್ಬರು ಝಾಕಿರ್ ಅವರೊಂದಿಗೆ ನಡೆಸಿದ ಮೊದಲ ಸಂದರ್ಶನ ಅಷ್ಟೊಂದು ಸೆನ್ಸೇಶನಲ್ ಆಗಿಲ್ಲವೆಂದು ಎರಡನೆ ಬಾರಿ ಸಂದರ್ಶನ ನಡೆಸಿದ್ದರು ಎಂಬ ಅಂಶ ಇತ್ತೀಚೆಗೆ ಬಹಿರಂಗಗೊಂಡಾಗ ಚಾನೆಲ್ ತಲೆತಗ್ಗಿಸುವಂತಾಗಿತ್ತು ಎಂದು ಜನತಾ ಕಾ ರಿಪೋರ್ಟರ್ ತನ್ನ ವರದಿಯೊಂದರಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News