ರಾಜ್ಯಾದ್ಯಂತ ಮಹಾದಾಯಿ ಕಿಚ್ಚು; ಪೊಲೀಸ್ ದೌರ್ಜನ್ಯಕ್ಕೆ ಆಕ್ರೋಶ

Update: 2016-07-30 18:37 GMT

ರಾಜ್ಯದ ಬಗ್ಗೆ ಕೇಂದ್ರದ ನಿರ್ಲಕ್ಷ: ದೇವೇಗೌಡ
ಬೆಂಗಳೂರು, ಜು.30: ಮಹಾದಾಯಿ ಬಗ್ಗೆ ಕೇಂದ್ರ ಸರಕಾರವು ನಿರ್ಲಕ್ಷ ಧೋರಣೆ ಅನುಸರಿಸುತ್ತಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕಿಡಿಕಾರಿದ್ದಾರೆ.
  ಶನಿವಾರ ಪದ್ಮನಾಭನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಾದಾಯಿ ನದಿಯಿಂದ ಕನಿಷ್ಠ ಕುಡಿಯುವ ನೀರಿಗಾದರೂ ಅವಕಾಶ ಮಾಡಿಕೊಡುವಂತೆ ನಾನೇ ಖುದ್ದಾಗಿ ಪ್ರಧಾನಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದರು.
ಕನಿಷ್ಠ 5 ಟಿಎಂಸಿ ನೀರು ಲಭ್ಯವಾಗುವಂತೆ ಕ್ರಮ ಕೈಗೊಳ್ಳಿ. ಮೊದಲು ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿ, ಆನಂತರ ನ್ಯಾಯಾಧಿಕರಣ ಏನು ತೀರ್ಪು ಕೊಡುತ್ತದೆಯೋ ನೋಡೋಣ ಎಂದು ಪ್ರಧಾನಿಗೆ ಮನವಿ ಮಾಡಿದರೂ ಏನು ಪ್ರಯೋಜನವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಬಿಜೆಪಿ ಪಕ್ಷವೇ ಅಧಿಕಾರದಲ್ಲಿದೆ. ಕೇಂದ್ರ ಸಚಿವ ಅನಂತ್‌ಕುಮಾರ್ ಮೊದಲು ಅವರ ಮನವೊಲಿಸಲಿ ಎಂದ ದೇವೇಗೌಡರು, ಸಿಎಂ ಸಿದ್ದರಾಮಯ್ಯ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಈ ಸಂಬಂಧ ಪತ್ರ ಬರೆದಿದ್ದರು. ಆದರೆ, ಮುಖ್ಯಮಂತ್ರಿಯ ಪತ್ರಕ್ಕೆ ಉತ್ತರವೇ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ವಿಚಾರವನ್ನು ಒಂದೆಡೆ ಕೂತು ಪರಸ್ಪರ ಚರ್ಚೆ ಮೂಲಕ ಬಗೆಹರಿಸುವುದನ್ನು ಬಿಟ್ಟು, ಬಿಜೆಪಿಯ ಸಂಸದರು ಕುಂಟು ನೆಪಗಳನ್ನು ಹೇಳಿಕೊಂಡು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಸರಿಯಲ್ಲ. ಉಮಾಭಾರತಿಗೆ ಜಲಸಂಪನ್ಮೂಲ ಸಚಿವಾಲಯದ ಜವಾಬ್ದಾರಿ ವಹಿಸಿರುವುದು ದುರಂತ ಎಂದು ದೇವೇಗೌಡರು ಕಿಡಿಕಾರಿದರು.
ಕೇಂದ್ರ, ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಬಿಜೆಪಿ ಸರಕಾರವಿರುವುದರಿಂದ ವಿವಾದವನ್ನು ಬಗೆಹರಿಸುವುದು ಪ್ರಧಾನಿಗೆ ದೊಡ್ಡ ವಿಷಯವೇನಲ್ಲ. ಆದರೆ, ಗೋವಾ ಹಾಗೂ ಮಹಾರಾಷ್ಟ್ರದ ಪ್ರತಿಪಕ್ಷಗಳ ಮನವೊಲಿಸಿಕೊಂಡು ಬರುವಂತೆ ರಾಜ್ಯದ ನಿಯೋಗಕ್ಕೆ ಹೇಳುವ ಮೂಲಕ ಪ್ರಧಾನಿ ನರೇಂದ್ರಮೋದಿ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಹಾದಾಯಿ ವಿಷಯದಲ್ಲಿ ರಾಜ್ಯದ ಜನತೆ ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಪ್ರತಿಭಟನಾನಿರತರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯ ಖಂಡನೀಯ. ಶಾಂತಿಯುತವಾಗಿ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕುವ ಹೇಯಕೃತ್ಯವನ್ನು ಪೊಲೀಸರು ಮಾಡಿದ್ದಾರೆ. ಸರಕಾರ ಅಂತಹ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ: ಅನಂತ್‌ಕುಮಾರ್
ಹೊಸದಿಲ್ಲಿ: ಮಹಾದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ಅನ್ಯಾಯವಾಗಲು ನಾವು ಬಿಡುವುದಿಲ್ಲ ಎಂದು ಕೇಂದ್ರ ಸಚಿವ ಅನಂತ್‌ಕುಮಾರ್ ಭರವಸೆ ನೀಡಿದ್ದಾರೆ.
ಶನಿವಾರ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ನ್ಯಾಯಾಧಿಕ ರಣದಲ್ಲಿ ನಮಗೆ ಹಿನ್ನಡೆಯಾಗಿರುವುದು ನಿಜ. ಆದರೆ, ಮಧ್ಯಾಂತರ ತೀರ್ಪು ಅಂತಿಮವೇನಲ್ಲ. ಕಾನೂನು ಹೋರಾಟವನ್ನು ಮುಂದುವರಿಸಲು ಸಾಕಷ್ಟು ಅವಕಾಶಗಳಿವೆ ಎಂದರು.
ರಾಜ್ಯದ ಪಾಲಿನ ನೀರನ್ನು ನ್ಯಾಯಯುತವಾಗಿ ಪಡೆಯಲು ನಾವು ಕಾನೂನಿನ ಚೌಕಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನ ಪಡುತ್ತೇವೆ. ಕೇಂದ್ರ ಸರಕಾರದ ಮಟ್ಟದಲ್ಲಿಯೂ ಈ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ರಾಜ್ಯ ಸರಕಾರಕ್ಕೆ ಅಗತ್ಯವಾದ ಎಲ್ಲ ರೀತಿಯ ನೆರವನ್ನು ನೀಡುತ್ತೇವೆ ಎಂದು ಅನಂತ್‌ಕುಮಾರ್ ಹೇಳಿದರು.
  ಮಹಾದಾಯಿಗಾಗಿ ರೈತರು ನಡೆಸುತ್ತಿರುವ ಹೋರಾಟವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಪಕ್ಷಭೇದ ಮರೆತು ಎಲ್ಲರೂ ರೈತರ ಪರವಾಗಿ ನಿಲ್ಲುತ್ತೇವೆ. ಮುಂದಿನ ಹೋರಾಟದ ರೂಪರೇಷೆಗಳನ್ನು ಸಿದ್ಧಪಡಿಸುತ್ತೇವೆ ಎಂದು ಅವರು ತಿಳಿಸಿದರು.

‘ಗೃಹ ಸಚಿವರು ಮಧ್ಯಪ್ರವೇಶಿಸಲಿ’

ಧಾರವಾಡ: ಧಾರವಾಡ ಜಿಲ್ಲೆಯ ಆಳಗವಾಡಿ ಮತ್ತು ಯಮನೂರು ಗ್ರಾಮದಲ್ಲಿ ಪೊಲೀಸರಿಂದ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಸಿರುವ ಅಮಾನುಷ ದೌರ್ಜನ್ಯವನ್ನು ಸಂಸದ ಪ್ರಹ್ಲಾದ್ ಜೋಷಿ ತೀವ್ರವಾಗಿ ಖಂಡಿಸಿದ್ದಾರೆ.
ಕಾರಣವಿಲ್ಲದೆ, ಅಮಾಯಕರ ಮೇಲೆ ಸಂಯಮ ಕಳೆದುಕೊಂಡು ಪೊಲೀಸರು ನಡೆಸಿರುವ ಹಿಂಸೆಯು ಶೋಚನೀಯ ಸಂಗತಿಯಾಗಿದೆ. ಗೃಹ ಸಚಿವರು ಕೂಡಲೇ ಮಧ್ಯಪ್ರವೇಶಿಸಬೇಕು ಹಾಗೂ ಪೊಲೀಸರು ಸಂಯಮ ಕಾಪಾಡಿಕೊಳ್ಳಲು ಕಟ್ಟುನಿಟ್ಟಾಗಿ ಸೂಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಳಸಾ ಬಂಡೂರಿ ಯೋಜನೆಯನ್ನು ಜಾರಿಗೆ ತರುವಲ್ಲಿ ನಮ್ಮ ಬದ್ಧತೆಯು ಅಚಲವಾಗಿದೆ ಎಂದು ಪ್ರಹ್ಲಾದ್ ಜೋಶಿ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರಕಾರದ ವಿರುದ್ಧ ನಮ್ಮ ಹೋರಾಟ: ವಾಟಾಳ್
ಬೆಂಗಳೂರು: ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ರಾಜ್ಯ ಸರಕಾರದ ವಿರುದ್ಧವಲ್ಲ. ನಮ್ಮ ಹೋರಾಟವು ಕೇಂದ್ರ ಸರಕಾರದ ವಿರುದ್ಧವಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಶನಿವಾರ ಸ್ವಾತಂತ್ರ ಉದ್ಯಾನವನದಲ್ಲಿ ಸಮಾವೇಶಗೊಂಡ ಪ್ರತಿಭಟನಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡಪರ ಸಂಘಟನೆಗಳು ಕೇವಲ ಹಳೆ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. ಅಖಂಡ ಕರ್ನಾಟಕದ ಅಭಿವೃದ್ಧಿ ನಮ್ಮ ಗುರಿ ಎಂದರು.
ಬೀದಿಗಿಳಿದ ಚಂದನವನದ ತಾರೆಯರು: ಮಹಾದಾಯಿ ನ್ಯಾಯಾಧಿ ಕರಣ ದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ವಿರೋಧಿಸಿ ಕನ್ನಡ ಚಲನಚಿತ್ರ ರಂಗದ ನಟ, ನಟಿಯರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ರ್ಯಾಲಿಯಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು.
ನಗರದ ಪುರಭವನದಿಂದ ಸ್ವಾತಂತ್ರ ಉದ್ಯಾನವನದವರೆಗೆ ನಡೆದ ಬೃಹತ್ ರ್ಯಾಲಿಯಲ್ಲಿ ಕಲಾವಿದರರಾದ ಡಾ.ಶಿವರಾಜ್‌ಕುಮಾರ್, ರಮೇಶ್ ಅರವಿಂದ್, ಪ್ರೇಮ್, ಯಶ್, ಬಿ.ಬಿ.ಪಾಟೀಲ್, ಮೇಘನಾರಾಜ್, ಸುಂದರ್‌ರಾಜ್, ಸಾಯಿ ಪ್ರಕಾಶ್, ಪ್ರಮೀಳಾ ಜೋಷಾಯ್, ಸಾಧು ಕೋಕಿಲಾ, ಹಂಸಲೇಖ, ರವಿಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.

ಜನಪ್ರತಿನಿಧಿಗಳ ನಿರ್ಲಕ್ಷ: ತೋಂಟದಾರ್ಯ ಸ್ವಾಮಿ
ಗದಗ: ಮಹಾದಾಯಿ ನ್ಯಾಯಾಧಿಕರಣ ನೀಡಿರುವ ಮಧ್ಯಾಂತರ ತೀರ್ಪು ರಾಜ್ಯದ ಪಾಲಿಗೆ ನೋವಿನ ಸಂಗತಿಯಾಗಿದ್ದು, ಈ ಭಾಗದ ಶಾಸಕರು ಹಾಗೂ ಸಂಸದರ ನಿರ್ಲಕ್ಷದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತೋಂಟದಾರ್ಯ ಸಿದ್ದಲಿಂಗಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಾಧಿಕರಣ ನೀಡಿರುವ ಮಧ್ಯಾಂತರ ತೀರ್ಪು ಸರಿಯಲ್ಲ. ನ್ಯಾಯಾಧಿಕರಣದ ನ್ಯಾಯಮೂರ್ತಿಗಳಿಗೆ ಮಾನವೀಯತೆ, ಅಂತಃಕರಣ ಹಾಗೂ ಮನುಷ್ಯತ್ವ ಇರಬೇಕು ಎಂದರು.
ಕೇಂದ್ರ ಸರಕಾರವು ಮಧ್ಯಸ್ಥಿಕೆ ವಹಿಸಿ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಒಮ್ಮತದ ನಿರ್ಧಾರಕ್ಕೆ ಬಂದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಅಮಾಯಕರ ಮೇಲೆ ಲಾಠಿ ಚಾರ್ಜ್ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹ
ಬೆಂಗಳೂರು: ಮಹಾದಾಯಿ ನೀರು ಹಂಚಿಕೆ ಸಂಬಂಧ ನ್ಯಾಯಾಧಿಕರಣ ತೀರ್ಪಿನ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅಮಾಯಕರ ಮೇಲೆ ನಿಯಮಬಾಹಿರವಾಗಿ ಹಲ್ಲೆ ನಡೆಸಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಆಗ್ರಹಿಸಿದೆ.
   ಈ ಬಗ್ಗೆ ಮಾತನಾಡಿರುವ ಕೆಪಿಸಿಸಿ ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ, ಮಹಾದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಾಧಿಕರಣವು ನೀಡಿರುವ ಮಧ್ಯಾಂತರ ತೀರ್ಪಿನ ವಿರುದ್ಧ ಎಲ್ಲೆಡೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿತ್ತು. ಧಾರವಾಡ ಜಿಲ್ಲಾ ಯಮನೂರು ಗ್ರಾಮದಲ್ಲಿ ರೈತರು, ಮಹಿಳೆಯರು ಸೇರಿ ಪ್ರಮುಖರು ಶಾಂತಿಯುತ ಪ್ರತಿಭಟನೆಯಲ್ಲಿ ನಿರತರಾಗಿದ್ದಾಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಅಮಾನುಷವಾಗಿ ಲಾಠಿ ಚಾರ್ಜ್ ನಡೆಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 ಇದು ರೈತರ ನ್ಯಾಯಯುತ ಹೋರಾಟವನ್ನು ಹತ್ತಿಕ್ಕುವ ಯತ್ನ ವಾಗಿದ್ದು, ನಿಯಮಬಾಹಿರವಾಗಿ ರೈತರ ಮೇಲೆ ಲಾಠಿಚಾರ್ಜ್ ಮಾಡಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನು ್ನ ತಕ್ಷಣದಿವೆೇ ವಜಾಗೊಳಿಸಲು ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.


‘ಪೊಲೀಸರ ಅಮಾನವೀಯ ವರ್ತನೆ ಸರಿಯಲ್ಲ’

ಕೊಪ್ಪಳ: ಮಹಾದಾಯಿ ನ್ಯಾಯಾಧಿಕರಣದ ತೀರ್ಪು ಖಂಡಿಸಿ ಹೋರಾಟಗಾರರು ಹೋರಾಟ ಮಾಡುತ್ತಿರುವಾಗ ಅವರ ವಿರುದ್ಧ ಪೊಲೀಸರು ಅಮಾನವೀಯವಾಗಿ ವರ್ತಿಸಿರುವುದು ಸರಿಯಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಶನಿವಾರ ಕೊಪ್ಪಳ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ನ್ಯಾಯಾಧಿಕರಣದ ವಾದ ಮಾಡುವಲ್ಲಿ ರಾಜ್ಯ ಸರಕಾರ ವಿಫಲವಾಗಿಲ್ಲ. ದೇಶದ ಬುದ್ಧಿವಂತ ವಕೀಲರಲ್ಲಿ ಒಬ್ಬರಾಗಿರುವ ನಾರಿಮನ್ ವಾದಿಸಿದ್ದಾರೆ. ಆದರೂ ಮಧ್ಯಾಂತರ ತೀರ್ಪಿನಲ್ಲಿ ನಮಗೆ ಅನ್ಯಾಯವಾಗಿದೆ. ಪೊಲೀಸರು ಹೋರಾಟಗಾರರ ವಿರುದ್ಧ ಅಮಾನವೀಯವಾಗಿ ನಡೆದುಕೊಂಡಿದ್ದರೆ, ಪರಿಶೀಲಿಸಲಾಗುವುದು ಎಂದು ಹೇಳಿದರು. ಈ ಬೆಳವಣಿಗೆಯಿಂದ ಉತ್ತರ ಕರ್ನಾಟಕ ಭಾಗದ ರೈತರು ಸೇರಿದಂತೆ ಇಡೀ ಉತ್ತರ ಕರ್ನಾಟಕ ಭಾಗದ ರೈತರು ಸೇರಿದಂತೆ ಇಡೀ ಅಖಂಡ ಕರ್ನಾಟಕ ಹೋರಾಟಕ್ಕೆ ಇಳಿದಿದೆ. ಯಮನೂರಿನಲ್ಲಿ ಪೊಲೀಸರು ಹೋರಾಟಗಾರರ ಮತ್ತು ಅವರ ಮನೆಯವರ ಮೇಲೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂಬುದರ ಕುರಿತು ಪರಿಶೀಲಿಸಿ ಸರಕಾರ ಕ್ರಮ ಕೈಗೊಳ್ಳುತ್ತದೆ. ಹೋರಾಟಗಾರರೂ ಶಾಂತಿಯಿಂದ ವರ್ತಿಸಬೇಕೆಂದು ಮನವಿ ಮಾಡಿದರು. ನಾಡಿನ ನೆಲ, ಜಲ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಯಾವ ಶಾಸಕರೂ ರಾಜೀನಾಮೆ ನೀಡಬಾರದು. ರಾಜೀನಾಮೆ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಸಿಎಂ ಸಿದ್ದರಾಮಯ್ಯ ವಿದೇಶದಿಂದ ವಾಪಸ್ ಆದ ಬಳಿಕ ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಬಳಿ ತೆರಳಿ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು. 

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಬಿಎಸ್‌ವೈ ಖಂಡನೆ
ಬೆಂಗಳೂರು: ಮಹಾದಾಯಿ ಹೋರಾಟದಲ್ಲಿ ಭಾಗವಹಿಸಿರುವ ಧಾರವಾಡ ಜಿಲ್ಲೆಯ ಅಳಗವಾಡಿ ಮತ್ತು ಯಮನೂರು ಗ್ರಾಮದ ಮಹಿಳೆಯರೂ ಸೇರಿದಂತೆ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತೀವ್ರವಾಗಿ ಖಂಡಿಸಿದ್ದಾರೆ.
 ಪೊಲೀಸರು ನಡೆಸಿರುವ ದೌರ್ಜನ್ಯದ ಬಗ್ಗೆ ರೈತರು ಹಾಗೂ ಪಕ್ಷದ ಕಾರ್ಯಕರ್ತರು ತಮ್ಮ ಗಮನಕ್ಕೆ ತಂದಿರುವುದಾಗಿ ಹೇಳಿರುವ ಅವರು, ಪೊಲೀಸರ ಅಮಾನುಷ ಕೃತ್ಯವನ್ನು ದೃಶ್ಯ ಮಾಧ್ಯಮಗಳಲ್ಲಿ ವೀಕ್ಷಿಸಿ ತಾವು ಮೂಕವಿಸ್ಮಿತರಾಗಿದ್ದಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪೊಲೀಸರ ಅಮಾನುಷ ದೌರ್ಜನ್ಯದ ಬಗ್ಗೆ ರಾಜ್ಯ ಸರಕಾರ ತಕ್ಷಣ ತನಿಖೆಗೆ ಆದೇಶಿಸಬೇಕು ಹಾಗೂ ಮಹಾದಾಯಿ ಬಿಕ್ಕಟ್ಟು ಪರಿಹಾರಕ್ಕೆ ತಕ್ಷಣವೇ ಕ್ರಿಯಾಯೋಜನೆ ರೂಪಿಸಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.


ಮಹಿಳಾ ಆಯೋಗ ಆಕ್ರೋಶ
ಬೆಂಗಳೂರು: ಧಾರವಾಡದಲ್ಲಿ ಪೊಲೀಸರು ಪ್ರತಿಭಟನಾನಿರತ ಮಹಿಳೆಯರ ಮೇಲೆ ನಡೆಸಿರುವ ಹಲ್ಲೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ಹಾಗೂ ಮಕ್ಕಳ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿರುವುದು ಸರಿಯಲ್ಲ. ಈ ಸಂಬಂಧ ಗೃಹ ಸಚಿವರೊಂದಿಗೆ ಮಾತನಾಡಿದ್ದು, ಕೂಡಲೇ ಹಲ್ಲೆ ನಡೆಸದಂತೆ ಪೊಲೀಸರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News