ಗೋವಿನ ಚರ್ಮ ಸುಲಿದ ದಲಿತರನ್ನು ಥಳಿಸಿದುದು ಒಳ್ಳೆಯ ವಿಷಯ: ಬಿಜೆಪಿ ಶಾಸಕ ರಾಜಾಸಿಂಗ್

Update: 2016-07-31 13:17 GMT

ಹೈದರಾಬಾದ್, ಮೇ 31: ಸತ್ತ ಹಸುಗಳೊಂದಿಗೆ ಅಥವಾ ಗೋಮಾಂಸದೊಂದಿಗೆ ಕಾಣಿಸಿಕೊಳ್ಳುವ ದಲಿತರನ್ನು ಥಳಿಸುವುದರಲ್ಲಿ ತಪ್ಪಿಲ್ಲವೆಂದು ಹೈದರಾಬಾದ್‌ನ ಬಿಜೆಪಿ ಶಾಸಕ ರಾಜಾಸಿಂಗ್ ಶನಿವಾರ ಹೇಳಿದ್ದಾರೆ.
ಗೋಮಾಂಸವನ್ನು ಒಯ್ಯುತ್ತಿದ್ದ ದಲಿತರನ್ನು ಥಳಿಸಿರುವುದು ಒಳ್ಳೆಯ ಕೆಲಸವಾಗಿದೆ ಎಂದವರು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿರುವ ವೀಡಿಯೊ ಒಂದರಲ್ಲಿ ಅಭಿಪ್ರಾಯಿಸಿದ್ದಾರೆ.
ಅವರು, ಗುಜರಾತ್‌ನ ಉನಾದಲ್ಲಿ ದನದ ಮಾಂಸ ಸುಲಿದುದಕ್ಕಾಗಿ ನಾಲ್ವರು ದಲಿತ ಯುವಕರನ್ನು ಥಳಿಸಿದ 15 ದಿನಗಳ ಹಿಂದಿನ ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಆ ಘಟನೆಗೆ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು.
ಸಮುದಾಯದ ಅನೇಕ ಸದಸ್ಯರು ಗೋ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟವರಿದ್ದಾರೆಂದು ದಲಿತರ ಮೇಲಿನ ಹಲ್ಲೆಯನ್ನು ಟೀಕಿಸಿದ್ದ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಹಾಗೂ ಇತರರನ್ನುದ್ದೇಶಿಸಿ ತೆಲಂಗಾಣದ ಬಿಜೆಪಿ ನಾಯಕ ಹೇಳಿದ್ದಾರೆ.
ಗೋವುಗಳನ್ನು ಕೊಲ್ಲುವುದು ಹಾಗೂ ಅವುಗಳ ಮಾಂಸ ತಿನ್ನುವುದು ಅಗತ್ಯವೇ? ಎಂದು ಪ್ರಶ್ನಿಸಿರುವ ಅವರು, ಇದು ಅತ್ಯಂತ ತಪ್ಪು. ಇಂತಹ ‘ಗಲೀಜು’ ದಲಿತರಿಂದಾಗಿ ಸಮುದಾಯದ ದೇಶಭಕ್ತ ಹಾಗೂ ಧಾರ್ಮಿಕ ಸದಸ್ಯರಿಗೆ ಕೆಟ್ಟ ಹೆಸರು ಬರುತ್ತದೆಂದು ತಿಳಿಸಿದ್ದಾರೆ.
 ದಲಿತರಿಗೆ ‘ಸರಿಯಾದ ಪಾಠ ಕಲಿಸುವವರನ್ನು’ ತಾನು ಬೆಂಬಲಿಸುತ್ತೇನೆ. ಗೋ ಹತ್ಯೆ ನಡೆಸುವ ದಲಿತರು ಮಾತ್ರವಲ್ಲದೆ ಸಮಾಜದ ಪ್ರತಿಯೊಂದು ವರ್ಗಕ್ಕೂ ಇದೇ ರೀತಿಯ ಪಾಠ ಕಲಿಸಲಾಗುವುದು ಎಂದಿರುವ ಸಿಂಗ್, ಗೋರಕ್ಷಕರ ಮುಂದಿರುವ ದಾರಿ ಕಠಿಣವಾಗಿದೆ. ಅವರದನ್ನು ಮೀರಬೇಕು. ‘ಗೋಮಾತೆ ಭಾರತ ಮಾತೆಯಾಗುವ ತನಕ’ ವಿರಮಿಸಬಾರದೆಂದು ಗೋರಕ್ಷಕರಿಗೆ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News