‘ರೋಹಿತ್ ವೇಮುಲಾ’ ಕಾಯ್ದೆಯ ಬಗ್ಗೆ ಅಖಿಲ ಭಾರತ ಸಮ್ಮೇಳನ: ಕನ್ಹಯ್ಯ ಕುಮಾರ್

Update: 2016-07-31 18:20 GMT

ಹೈದರಾಬಾದ್, ಜು.31: ‘ರೋಹಿತ್ ವೇಮುಲಾ ಕಾಯ್ದೆಯ’ ಕುರಿತು ತಾವು ದಿಲ್ಲಿ ಅಥವಾ ಹೈದರಾಬಾದ್‌ನಲ್ಲಿ ಅಖಿಲ ಭಾರತ ಸಮ್ಮೇಳನವೊಂದನ್ನು ನಡೆಸುವ ಸಾಧ್ಯತೆಯಿದೆಯೆಂದು ದಲಿತ ಸಂಶೋಧನ ವಿದ್ಯಾರ್ಥಿ ರೋಹಿತ್ ವೇಮುಲಾರಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಚಳವಳಿಯೊಂದನ್ನು ಮುನ್ನಡೆಸುತ್ತಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ತಿಳಿಸಿದ್ದಾರೆ.

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಅಧಿಕಾರಿಗಳು ‘ಕಣ್ಗಾವಲಿನ’ ಹೆಸರಿನಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನಿಸುತ್ತಿದ್ದಾರೆಂದು ಆರೋಪಿಸಿದ ಅವರು, ಸರಕಾರವು, ದಲಿತರು ಹಾಗೂ ದಮನಿತ ವರ್ಗದವರ ವಿರುದ್ಧ ದೌರ್ಜನ್ಯ ತಡೆಗೆ ‘ರೋಹಿತ್ ವೇಮುಲಾ ಕಾಯ್ದೆ’ ತರುವ ವರೆಗೆ ಚಳವಳಿ ಮುಂದುವರಿಸುವ ಪ್ರತಿಜ್ಞೆ ಮಾಡಿದ್ದಾರೆ.

ಕ್ಯಾಂಪಸ್‌ನಲ್ಲಿ ಸಾಮಾನ್ಯ ಸ್ಥಿತಿಯಿಲ್ಲ. ಕಣ್ಗಾವಲಿನ ಹೆಸರಿನಲ್ಲಿ ಜನರ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿದೆ. ಸಭೆ ನಡೆಸಲು ಅವಕಾಶ ನೀಡುತ್ತಿಲ್ಲ. ಮಾಧ್ಯಮಗಳ ವಾಹನಗಳಿಗೂ ವಿವಿಯೊಳಗೆ ಪ್ರವೇಶ ನೀಡುತ್ತಿಲ್ಲ. ಇದು ಸಮಾಜದ ಪ್ರಜಾಸತ್ತಾತ್ಮಕ ಹಂದರಕ್ಕೆ ಅಪಾಯ ತಂದಿದೆ ಎಂದು ಕನ್ಹಯ್ಯೆ ಆರೋಪಿಸಿದ್ದಾರೆ.
ತಾನು ವೇಮುಲಾ ಹಾಗೂ ಇತರ ನಾಲ್ವರು ಅಮಾನತುಗೊಂಡಿರುವ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ಬಳಸುತ್ತಿದ್ದ ವೆಲಿವಾಡಕ್ಕೆ ಇಂದು ಅನೌಪಚಾರಿಕ ರೀತಿಯಲ್ಲಿ ಭೇಟಿ ನೀಡಿ ವೇಮುಲಾರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೇನೆ. ಭವಿಷ್ಯದಲ್ಲಿ ರೋಹಿತ್ ವೇಮುಲರಂತಹ ಘಟನೆ ನಡೆಯಲು ಅವಕಾಶ ನೀಡುವುದಿಲ್ಲ. ತಾವು ವೇಮುಲಾ ಕಾಯ್ದೆಯ ಕುರಿತು ದಿಲ್ಲಿ ಅಥವಾ ಹೈದರಾಬಾದ್‌ನಲ್ಲಿ ಅಖಿಲಭಾರತ ಸಮ್ಮೇಳನವೊಂದನ್ನು ನಡೆಸುವ ಕುರಿತಾಗಿಯೂ ಯೋಜನೆ ರೂಪಿಸುತ್ತಿದ್ದೇವೆಂದು ಸೆಮಿನಾರ್ ಒಂದಕ್ಕಾಗಿ ನಗರಕ್ಕೆ ಬಂದಿರುವ ಕನ್ಹಯ್ಯೆ ತಿಳಿಸಿದ್ದಾರೆ.
ಆದರೆ, ಸಮ್ಮೇಳನದ ನಿರ್ದಿಷ್ಟ ದಿನಾಂಕದ ಕುರಿತು ಅವರು ಸ್ಪಷ್ಟಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News