ಗುಜರಾತ್‌ನಲ್ಲಿ ಇನ್ನು ಸತ್ತ ದನಗಳ ಸಂಸ್ಕಾರ ಮಾಡುವುದಿಲ್ಲ

Update: 2016-08-01 03:12 GMT

ಅಹ್ಮದಾಬಾದ್, ಆ.1: ಇಲ್ಲಿನ ಸಬರಮತಿ ಪ್ರದೇಶದ ಮೈದಾನದಲ್ಲಿ ರವಿವಾರ ಸಾವಿರಾರು ಸಂಖ್ಯೆಯಲ್ಲಿ ಸಮಾವೇಶಗೊಂಡಿದ್ದ ದಲಿತರು, ರಾಜ್ಯದ ಬೀದಿಗಳಲ್ಲಿ ಬಿದ್ದಿರುವ ಯಾವುದೇ ಪ್ರಾಣಿಗಳ ಅಂತ್ಯಸಂಸ್ಕಾರ ನೆರವೇರಿಸುವುದಿಲ್ಲ ಎಂಬ ಐತಿಹಾಸಿಕ ಪ್ರತಿಜ್ಞೆ ಕೈಗೊಂಡಿದ್ದಾರೆ.
 ದಲಿತ ಸಮುದಾಯ ದಶಕಗಳಿಂದ ಎದುರಿಸುತ್ತಾ ಬಂದ ಸಮಸ್ಯೆಗಳ ಬಗ್ಗೆ ಹಕ್ಕೊತ್ತಾಯ ಮಂಡಿಸಲು ರಾಜ್ಯದ 30ಕ್ಕೂ ಹೆಚ್ಚು ದಲಿತ ಸಂಘಟನೆಗಳು ಈ ಮಹಾ ಸಮಾವೇಶದಲ್ಲಿ ಪಾಲ್ಗೊಂಡಿದ್ದವು. ಉನಾ ದಲಿತ್ ಅತ್ಯಾಚಾರ್ ಲಾದತ್ ಸಮಿತಿ (ಉನಾ ದಲಿತ ದೌರ್ಜನ್ಯದ ವಿರುದ್ಧದ ಹೋರಾಟ ಸಮಿತಿ) ಹೆಸರಿನಲ್ಲಿ ಮಹಾಸಂಘಟನೆ ರಚಿಸಿಕೊಂಡಿದ್ದು, ಯುವ ವಕೀಲ ಜಿಗ್ನೇಶ್ ಮೇವಾನಿ ಸಂಚಾಲಕತ್ವದಲ್ಲಿ ಬೃಹತ್ ಸಮಾವೇಶ ರವಿವಾರ ನಡೆಯಿತು.
ಜುಲೈ 12ರಂದು ಸತ್ತ ದನದ ಚರ್ಮ ತೆಗೆಯುತ್ತಿದ್ದ ನಾಲ್ವರು ದಲಿತರ ಮೇಲೆ ಗೋಸಂರಕ್ಷಕರು ಅಮಾನವೀಯವಾಗಿ ಹಲ್ಲೆ ನಡೆಸಿದ್ದನ್ನು ಪ್ರತಿಭಟಿಸಿ ಈ ಮಹಾ ಸಮಾವೇಶ ಆಯೋಜಿಸಲಾಗಿತ್ತು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 7ರಷ್ಟು ಮಾತ್ರ ದಲಿತರಿದ್ದರೂ, ತಮ್ಮ ಬೇಡಿಕೆಗಳಿಗೆ ಹಕ್ಕೊತ್ತಾಯ ಮಂಡಿಸುವ ಸಲುವಾಗಿ ಬಾರಿ ಸಂಖ್ಯೆಯಲ್ಲಿ ಸೇರಿದ್ದರು.
ನಮಗೆ ಶಸ್ತ್ರಾಸ್ತ್ರ ಬಳಕೆ ಲೈಸನ್ಸ್ ನೀಡಲು ಹೇಳಿ. ನಮಗೆ ಕರಾಟೆ ತರಬೇತಿ ನೀಡಲು ಹೇಳಿ. ನಾವು ಸಾಕಷ್ಟು ಅನುಭವಿಸಿದ್ದೇವೆ. ಇನ್ನು ಮುಂದೆ ಮೇಲ್ವರ್ಗದ ಶೋಷಕರು ನಮಗೆ ಕಿರುಕುಳ ನೀಡಿದರೆ, ಕೈಕಾಲು ಮುರಿಯುತ್ತೇವೆ ಎಂದು ಮೇವಾನಿ ಗುಡುಗಿದರು.
ಸಂಘಟನೆಗಳ ಹಿರಿಯ ಮುಖಂಡರು, ನಾವು ಎಲ್ಲವನ್ನೂ ಕಾನೂನುಬದ್ಧವಾಗಿ ಹಾಗೂ ಶಾಂತಿಯುತವಾಗಿ ಬಗೆಹರಿಸಲು ಮುಂದಾಗುತ್ತೇವೆ ಎಂದು ಪರಿಸ್ಥಿತಿ ತಣ್ಣಗಾಗಿಸುವ ಪ್ರಯತ್ನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News