ಸಾಧನೆಗಳ ಪ್ರಚಾರಕ್ಕಾಗಿ 35 ಕೋ.ರೂ.ಗೂ ಅಧಿಕ ಹಣ ವ್ಯಯಿಸಿದ ಮೋದಿ ಸರಕಾರ

Update: 2016-08-01 15:24 GMT

ಮುಂಬೈ,ಆ.1: ಮೋದಿ ಸರಕಾರವು ಕಳೆದ ಮೇ ತಿಂಗಳಲ್ಲಿ ತನ್ನ ಅಧಿಕಾರದ ಎರಡು ವರ್ಷಗಳನ್ನು ಪೂರೈಸಿದ ಬಳಿಕ ತನ್ನ ಸಾಧನೆಗಳ ಪ್ರಚಾರಕ್ಕಾಗಿ ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತುಗಳಿಗಾಗಿ 35.58 ಕೋ.ರೂ.ಗಳನ್ನು ವ್ಯಯಿಸಿದೆ ಎನ್ನುವುದನ್ನು ಆರ್‌ಟಿಐ ವಿಚಾರಣೆಯು ಬಹಿರಂಗಗೊಳಿಸಿದೆ.

ಆರ್‌ಟಿಐ ಕಾರ್ಯಕರ್ತ ಅನಿಲ ಗಲಗಲಿ ಅವರು ಕೇಂದ್ರದ ಮೋದಿ ನೇತೃತ್ವದ ಸರಕಾರವು 2016,ಮೇ 26ರಂದು ತನ್ನ ಎರಡು ವರ್ಷಗಳ ಅಧಿಕಾರ ಪೂರೈಸಿದ ಸಂದರ್ಭದಲ್ಲಿ ರಾಷ್ಟ್ರಾದ್ಯಂತ ಪ್ರಮುಖ ವೃತ್ತಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಲು ಮಾಡಿದ್ದ ಖರ್ಚಿನ ವಿವರವನ್ನು ಕೋರಿದ್ದರು.

ಪ್ರಾದೇಶಿಕ ಭಾಷೆಗಳು ಸೇರಿದಂತೆ 11,236 ವೃತ್ತಪತ್ರಿಕೆಗಳಿಗೆ ನೀಡಲಾಗಿದ್ದ ಜಾಹೀರಾತುಗಳ ಕುರಿತು ವಿವರಗಳನ್ನು ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ(ಡಿಎವಿಪಿ)ದ ಸಾರ್ವಜನಿಕ ಮಾಹಿತಿ ಅಧಿಕಾರಿ ರೂಪಾ ವೇದಿ ಅವರು ಒದಗಿಸಿದ್ದಾರೆ.

ಗಲಗಲಿ ಅವರು ಪ್ರತ್ಯೇಕ ಅರ್ಜಿಯಲ್ಲಿ ಮನಮೋಹನ ಸಿಂಗ್ ಸರಕಾರವು ಎರಡು ವರ್ಷಗಳ ಅಧಿಕಾರವನ್ನು ಪೂರೈಸಿದಾಗ ಮಾಡಿದ್ದ ಜಾಹೀರಾತು ವೆಚ್ಚಗಳ ವಿವರವನ್ನು ಸಹ ಕೋರಿದ್ದು,ಅಂತಹ ಯಾವುದೇ ವೆಚ್ಚವನ್ನು ಮಾಡಲಾಗಿರಲಿಲ್ಲ ಎಂದು ವೇದಿ ಉತ್ತರಿಸಿದ್ದಾರೆ.

ಈ ಖರ್ಚಿನ ವಿವರವನ್ನು ಕೇಂದ್ರದ ಜಾಲತಾಣದಲ್ಲಿ ಪ್ರಕಟಿಸುವಂತೆ ಗಲಗಲಿ ಪ್ರಧಾನಿ ನರೆಂದ್ರ ಮೋದಿಯವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News