ಕನಿಷ್ಠ 10 ನೌಕರರಿರುವ ಸಂಸ್ಥೆಯನ್ನು ಇಪಿಎಫ್‌ಒ ವ್ಯಾಪ್ತಿಗೆ ತರಲು ಚಿಂತನೆ

Update: 2016-08-01 18:16 GMT

ಹೊಸದಿಲ್ಲಿ, ಆ.1: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒದ ವ್ಯಾಪ್ತಿಗೆ ಹೆಚ್ಚು ನೌಕರರನ್ನು ತರಲು, ನೌಕರರ ಭವಿಷ್ಯ ನಿಧಿ ಕಾಯ್ದೆಗೆ(ಇಪಿಎಫ್ ಕಾಯ್ದೆ) ತಿದ್ದುಪಡಿ ತರಲು ಸರಕಾರ ಚಿಂತನೆ ನಡೆಸಿದೆ. ಕನಿಷ್ಠ 10 ನೌಕರರಿರುವ ಸಂಸ್ಥೆಗಳನ್ನೂ ಇಪಿಎಫ್‌ಒ ವ್ಯಾಪ್ತಿಗೆ ತರಲಾಗುವುದೆಂದು ಲೋಕಸಭೆಗಿಂದು ಮಾಹಿತಿ ನೀಡಲಾಗಿದೆ.

ಸಾಮಾಜಿಕ ಭದ್ರತೆಯು ಹೆಚ್ಚು ನೌಕರರಿಗೆ ದೊರಕುವುದನ್ನು ಖಚಿತಪಡಿಸಲು ಕನಿಷ್ಠ 10 ಉದ್ಯೋಗಿಗಳಿರುವ ಸಂಸ್ಥೆಗಳನ್ನೂ ಇಪಿಎಫ್‌ಒ ವ್ಯಾಪ್ತಿಗೆ ತರಲಾಗುವಂತೆ ಕಾಯ್ದೆಗೆ ತಿದ್ದುಪಡಿ ತರುವ ಯೋಜನೆಯಿದೆಯೆಂದು ಕಾರ್ಮಿಕ ಮತ್ತು ಉದ್ಯೋಗ ಸಚಿವ ಬಂಡಾರು ದತ್ತಾತ್ರೇಯ ತಿಳಿಸಿದರು.
ಪ್ರಸ್ತುತ 20 ನೌಕರರಿಗಿಂತ ಹೆಚ್ಚಿರುವ ಸಂಸ್ಥೆಗಳು ಮಾತ್ರ ಇಪಿಎಫ್‌ಒದ ಸಾಮಾಜಿಕ ಭದ್ರತಾ ಯೋಜನೆಗೆ ಚಂದಾ ನೀಡುವುದು ನೌಕರರ ಭವಿಷ್ಯನಿಧಿ ಮತ್ತು ವಿಶೇಷ ಪ್ರಸ್ತಾವಗಳ ಕಾಯ್ದೆಯನ್ವಯ ಕಡ್ಡಾಯವಾಗಿದೆ.
 ಪಿಂಚಣಿ ಯೋಜನೆಗೆ ಉದ್ಯೋಗದಾತರ ಕಡ್ಡಾಯ ವಂತಿಗೆಗೆ ಹೆಚ್ಚುವರಿಯಾಗಿ, ಇಪಿಎಫ್‌ಒ ಚಂದಾದಾರರಿಂದ ಸ್ವಯಂ ಇಚ್ಛೆಯ ಕೊಡುಗೆಗೆ ಅವಕಾಶ ನೀಡುವ ಯಾವುದೇ ಪ್ರಸ್ತಾವ ಸರಕಾರದ ಪರಿಶೀಲನೆಯಲ್ಲಿಲ್ಲವೆಂದು ದತ್ತಾತ್ರೇಯ ತಿಳಿಸಿದರು.
ವಿವಿಧ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ವ್ಯಾಪ್ತಿಗೆ ಅಸಂಘಟಿತ ವಲಯದ ಹೆಚ್ಚು ಕಾರ್ಮಿಕರನ್ನು ತರುವ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ಹೆಚ್ಚು ಹೆಚ್ಚು ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ಕಾರ್ಮಿಕರ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತಿದೆಯೆಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News