ಸೇನಾಧಿಕಾರಿ ಆಗುತ್ತಲೇ ನಿಯಮ ಉಲ್ಲಂಘಿಸಿದರೇ ಬಿಜೆಪಿ ಸಂಸದ ಅನುರಾಗ್ ಠಾಕೂರ್ ?

Update: 2016-08-02 06:06 GMT

ನವದೆಹಲಿ, ಆ.2: ಕಳೆದ ವಾರವಷ್ಟೇ ಟೆರಿಟೋರಿಂಲ್ ಆರ್ಮಿ ಸೇರಿದ್ದ ಬಿಸಿಸಿಐ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅದಾಗಲೇ ಸೇನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆಯೇ ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದಾರೆ. ಸೇನಾಧಿಕಾರಿಯಾದ ಕೆಲವೇ ದಿನಗಳಲ್ಲಿ ಠಾಕೂರ್ ಸೇನಾ ಸಮವಸ್ತ್ರದಲ್ಲಿ ಸಂಸತ್ ಪರಿಸರದಲ್ಲಿ ಕಾಣಿಸಿಕೊಂಡಿದ್ದರು. ಅವರು ಸೇನಾ ಸಮವಸ್ತ್ರ ಧರಿಸಿ ತಮ್ಮ ಪತ್ನಿಯೊಂದಿಗಿರುವ ಫೊಟೋ ಕೂಡ ಮಾಧ್ಯಮಗಳಲ್ಲಿ ಕಾಣಿಸಿಕೊಂಡಾಗ ಅದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿ ಬಿಟ್ಟಿತ್ತು. ಇತ್ತೀಚೆಗೆ ತಮ್ಮ ತಂದೆ ಪ್ರೇಮ್ ಕುಮಾರ್ ಧೂಮಲ್ ಅವರೊಂದಿಗೆ ಅನುರಾಗ್ ಠಾಕೂರ್ ಸಚಿವಾಲಯವೊಂದರ ಕಾರ್ಯಕ್ರಮದಲ್ಲಿಯೂ ಕಾಣಿಸಿಕೊಂಡಾಗ ಹಲವರು ಹುಬ್ಬೇರಿಸಿದ್ದರು ಹಾಗೂ ಸೇನಾ ಸಮವಸ್ತ್ರದಲ್ಲಿರುವ ವ್ಯಕ್ತಿಯೊಬ್ಬ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದೇ ಎಂದು ಪ್ರಶ್ನಿಸಿದ್ದರು.

ಟೆರಿಟೋರಿಯಲ್ ಆರ್ಮಿ ನಿಯಮಾವಳಿಗಳ ಪ್ರಕಾರ ಸೇನಾ ಸಮವಸ್ತ್ರ ಧರಿಸಿ ರಾಜಕೀಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿಯಿಲ್ಲವೆಂದೂ ಕೆಲವರು ಹೇಳಿಕೊಂಡರೆ ಇನ್ನು ಕೆಲವರು ಅನುರಾಗ್ ಅವರ ಬೆಂಬಲಕ್ಕೆ ನಿಂತು ಟೆರಿಟೋರಿಯಲ್ ಆರ್ಮಿಗೆ ಸೇರಿದ ವ್ಯಕ್ತಿ ರಾಜಕೀಯದಲ್ಲೂ ಭಾಗವಹಿಸಬಹುದು ಎಂದು ಹೇಳಿದರು. ಮೇಲಾಗಿ ಅವರು ಭಾಗವಹಿಸಿದ್ದ ಸಮಾರಂಭ ಸರಕಾರಿ ಸಮಾರಂಭವಾಗಿತ್ತು ಎಂಬ ಸಮಜಾಯಿಷಿಯೂ ಬಂದಿದೆ.
ಜುಲೈ 29 ರಂದು ಸೇನಾ ಮುಖ್ಯಸ್ಥ ದಲಬೀರ್ ಸುಹಾಗ್ ಅವರ ಉಪಸ್ಥಿತಿಯಲ್ಲಿ ಟೆರಿಟೋರಿಯಲ್ ಆರ್ಮಿ ಸೇರಿದ್ದ ಠಾಕೂರ್ ತಾನು ದೇಶ ಸೇವೆಗಾಗಿ ಸದಾ ಸಿದ್ಧವೆಂದು ಘೋಷಿಸಿದ್ದರು.
ಬಿಸಿಸಿಐನ ಅತ್ಯಂತ ಕಿರಿಯ ಅಧ್ಯಕ್ಷನೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅನುರಾಗ್ ಹಿಮಾಚಲ ಪ್ರದೇಶದ ಹಮೀರಪುರ್ ಕ್ಷೇತ್ರದ ಸಂಸದರಾಗಿದ್ದು, ಈ ಹಿಂದೆ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News