400 ಕೋಟಿ ರೂ. ನಕಲಿ ನೋಟು ಚಲಾವಣೆಯಲ್ಲಿ!

Update: 2016-08-02 18:29 GMT

ಹೊಸದಿಲ್ಲಿ, ಆ.2: ದೇಶಾದ್ಯಂತ ಒಟ್ಟು 400 ಕೋಟಿ ರೂ. ಮುಖಬೆಲೆಯ ನಕಲಿ ಕರೆನ್ಸಿ ನೋಟುಗಳು ಚಲಾವಣೆಯಲ್ಲಿವೆಯೆಂದು ಕೇಂದ್ರ ಸರಕಾರದ ಆದೇಶದ ಮೇರೆಗೆ ಇತ್ತೀಚೆಗೆ ನಡೆಸಿದ ಅಧ್ಯಯನ ವರದಿಯೊಂದು ತಿಳಿಸಿದೆ. ಚಲಾವಣೆಯಲ್ಲಿರುವ ನಕಲಿ ಭಾರತೀಯ ಕರೆನ್ಸಿ ನೋಟು (ಎಫ್‌ಐಸಿಎನ್)ಗಳ ಕುರಿತಾದ ಅಧ್ಯಯನವನ್ನು ಕೋಲ್ಕತಾದ ಭಾರತೀಯ ಅಂಕಿಅಂಶ ಸಂಸ್ಥೆ (ಐಎಸ್‌ಐ)ಯು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಮೇಲ್ವಿಚಾರಣೆ ಯೊಂದಿಗೆ ನಡೆಸಿತ್ತು.

‘‘ಈ ಅಧ್ಯಯನದ ಪ್ರಕಾರ 400 ಕೋಟಿ ರೂ. ಮುಖಬೆಲೆಯ ನಕಲಿ ಭಾರತೀಯ ಕರೆನ್ಸಿಯು ಚಲಾವಣೆಯಲ್ಲಿರುವುದು ಪತ್ತೆಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ವೌಲ್ಯವು ಸ್ಥಿರವಾಗಿ ಉಳಿದುಕೊಂಡಿದೆ’’ ಎಂದು ಕೇಂದ್ರ ವಿತ್ತಖಾತೆಯ ಸಹಾಯಕ ಸಚಿವ ಅರ್ಜುನ್‌ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಖೋಟಾನೋಟು ಪಿಡುಗನ್ನು ತಡೆಗಟ್ಟಲು ಹಣಕಾಸು ಸಚಿವಾಲಯ, ಗೃಹ ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಕೇಂದ್ರ ಮತ್ತು ರಾಜ್ಯಗಳ ಭದ್ರತಾ ಹಾಗೂ ಗುಪ್ತಚರ ಸಂಸ್ಥೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿವೆಯೆಂದವರು ಹೇಳಿದರು.

‘‘ಖೋಟಾನೋಟು ಹಾವಳಿಗೆ ಸಂಬಂಧಿಸಿ ರಾಜ್ಯ ಹಾಗೂ ಕೇಂದ್ರ ಭದ್ರತಾ ಸಂಸ್ಥೆಗಳ ನಡುವೆ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವು ದಕ್ಕಾಗಿ ಗೃಹ ಸಚಿವಾಲಯವು ಎಫ್‌ಐಸಿಎನ್ ಸಮನ್ವಯ ಸಮಿತಿಯನ್ನು ರೂಪಿಸಿದೆ’’ ಎಂದು ಮೇಘವಾಲ್ ಲೋಕಸಭೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News