2015ರಲ್ಲಿ ಭ್ರಷ್ಟಾಚಾರಕ್ಕಾಗಿ 900 ಸರಕಾರಿ ನೌಕರರ ವಜಾ

Update: 2016-08-03 14:52 GMT

ಹೊಸದಿಲ್ಲಿ,ಆ.3: 2015ರಲ್ಲಿ ಭ್ರಷ್ಟಾಚಾರ ಮತ್ತು ದುರ್ವರ್ತನೆಯ ಆರೋಪದಲ್ಲಿ 900 ಸರಕಾರಿ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯಮಗಳ 900 ನೌಕರರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. 19,000 ನೌಕರರು ವೇತನ ಕಡಿತ, ಎಚ್ಚರಿಕೆಯಂತಹ ದಂಡನಾ ಕ್ರಮಗಳಿಗೆ ಗುರಿಯಾಗಿದ್ದಾರೆ. ವಜಾಗೊಂಡವರಲ್ಲಿ ಓರ್ವ ಐಪಿಎಸ್ ಅಧಿಕಾರಿಯೂ ಸೇರಿದ್ದಾರೆ ಎಂದು ಸಂಸತ್ತಿನಲ್ಲಿ ಇತ್ತೀಚಿಗೆ ಮಂಡಿಸಲಾದ ಕೇಂದ್ರ ಜಾಗೃತ ಆಯೋಗ(ಸಿವಿಸಿ)ದ ವಾರ್ಷಿಕ ವರದಿಯು ಹೇಳಿದೆ.
 ಆದಾಯ ತೆರಿಗೆ ಆಯುಕ್ತರೋರ್ವರು ತಾತ್ಕಾಲಿಕ ವೇತನ ಕಡಿತ ಶಿಕ್ಷೆಗೆ ಗುರಿಯಾಗಿದ್ದರೆ, ದಿಲ್ಲಿ ಮಹಾನಗರ ಪಾಲಿಕೆಯ ಮಾಜಿ ನಗರ ಯೋಜನಾಧಿಕಾರಿಯ ಪಿಂಚಣಿಯಲ್ಲಿ ಕಡಿತವಾಗಿದೆ. ನಿಗದಿತ ಸಮಯದೊಳಗೆ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಆಯೋಗದ ಪ್ರಯತ್ನಗಳ ಫಲವಾಗಿ ದಂಡನೆಗಳಲ್ಲಿ ಏರಿಕೆಯಾಗಿದೆ ಎಂದು ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.
ಈ 20,000 ಪ್ರಕರಣಗಳಲ್ಲಿ ಅಪ್ರಾಮಾಣಿಕತೆಗಾಗಿ ಆಯೋಗದ ಶಿಫಾರಸಿನಂತೆ ದಂಡನೆಗೊಳಗಾಗಿರುವ 3,600 ಹಿರಿಯ ಅಧಿಕಾರಿಗಳೂ ಸೇರಿದ್ದಾರೆ.
2015 ರಲ್ಲಿ ದಂಡನೆಗೊಳಗಾಗಿರುವ ಹಿರಿಯ ಅಧಿಕಾರಿಗಳ ಸಂಖ್ಯೆ ಕಳೆದೊಂದು ದಶಕದಲ್ಲಿಯೇ ಗರಿಷ್ಠವಾಗಿದೆ. 2014ರಲ್ಲಿ ಕೇವಲ 2,144 ಅಧಿಕಾರಿಗಳು ತೊಂದರೆಗೊಳಗಾಗಿದ್ದರು.
ಹಿರಿಯ ಅಧಿಕಾರಿಗಳ ವಿರುದ್ಧದ ದೂರುಗಳನ್ನು ಸಿವಿಸಿಯೇ ನಿರ್ವಹಿಸಿದರೆ, ಇತರ ಸಿಬ್ಬಂದಿಗಳ ವಿರುದ್ಧದ ದೂರುಗಳನ್ನು ವಿವಿಧ ಇಲಾಖೆಗಳಲ್ಲಿ ನಿಯೋಜಿತ ಮುಖ್ಯ ಜಾಗೃತ ಅಧಿಕಾರಿ(ಸಿವಿಒ)ಗಳು ನಿಭಾಯಿಸುತ್ತಾರೆ.
ಸಿವಿಒಗಳ ಪರಿಶೀಲನೆಯಲ್ಲಿ 17,000ಕ್ಕೂ ಅಧಿಕ ಸಿಬ್ಬಂದಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ. ಇವರಲ್ಲಿ ಸರಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಬ್ಯಾಂಕುಗಳ ಮ್ಯಾನೇಜರ್‌ಗಳು, ವಿಜ್ಞಾನಿಗಳು ಮತ್ತು ಕನಿಷ್ಠ ಓರ್ವ ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲರು ಸೇರಿದ್ದಾರೆ ಎಂದು ವರದಿಯು ತಿಳಿಸಿದೆ.
ವರದಿಯಲ್ಲಿ ಕೆಲವು ಅಚ್ಚರಿಗಳೂ ಇವೆ. ಭ್ರಷ್ಟಾಚಾರವೆಂದರೆ ಸಾಮಾನ್ಯವಾಗಿ ಎಲ್ಲರ ಕಣ್ಣುಗಳು ಪೊಲೀಸರು ಮತ್ತು ತೆರಿಗೆ ಅಧಿಕಾರಿಗಳ ಮೇಲೆಯೇ ನೆಟ್ಟಿರುತ್ತದೆ. ಆದರೆ ಇಲ್ಲಿ ಬ್ಯಾಂಕ್ ಅಧಿಕಾರಿಗಳು ಇವೆರಡೂ ವರ್ಗಗಳನ್ನು ಮೀರಿಸಿದ್ದಾರೆ.
ಕಳೆದ ವರ್ಷ ವಜಾಗೊಂಡ 928 ಅಧಿಕಾರಿಗಳ ಪೈಕಿ ಸುಮಾರು ಶೇ.60ರಷ್ಟು ಬ್ಯಾಂಕ್ ಮ್ಯಾನೇಜರ್‌ಗಳೇ ಆಗಿದ್ದಾರೆ. ದಂಡನ ಕ್ರಮಕ್ಕೆ ಗುರಿಯಾಗಿರುವ ಪ್ರತಿ ಇಬ್ಬರು ಸರಕಾರಿ ನೌಕರರಲ್ಲಿ ಓರ್ವರು ಬ್ಯಾಂಕ್ ಸಿಬ್ಬಂದಿಯಾಗಿದ್ದಾರೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News