ರಿಯೋ: ಬೀನ್ ಬ್ಯಾಗ್ ಮೇಲೆ ಮಲಗಬೇಕಾಗಿರುವ ಭಾರತೀಯ ಹಾಕಿ ಆಟಗಾರರು!

Update: 2016-08-03 18:11 GMT

ಹೊಸದಿಲ್ಲಿ, ಆ.3: ರಿಯೋದ ಒಲಿಂಪಿಕ್ಸ್ ಗೇಮ್ಸ್ ಗ್ರಾಮದಲ್ಲಿ ಭಾರತೀಯ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳಿಗಾಗಿ ಕೊಡ ಮಾಡಲಾದ ಅಪಾರ್ಟ್‌ಮೆಂಟ್‌ಗಳಲ್ಲಿ ಸಾಕಷ್ಟು ಪೀಠೋಪಕರಣದ ವ್ಯವಸ್ಥೆಯಿಲ್ಲದೆ ಕ್ರೀಡಾಳುಗಳು ಬೀನ್ ಬ್ಯಾಗ್‌ಗಳ ಮೇಲೆ ಮಲಗುವ ದುಸ್ಥಿತಿ ಬಂದಿದೆ. ಭಾರತದ ಹಾಕಿ ತಂಡಗಳಿಗೆ ಒಟ್ಟು ಒಂಬತ್ತು ಅಪಾರ್ಟ್‌ಮೆಂಟ್‌ಗಳನ್ನು ನೀಡಲಾಗಿದೆಯಾದರೂ ಪ್ರತಿಯೊಂದು ಅಪಾರ್ಟ್‌ಮೆಂಟ್‌ನಲ್ಲಿ ಕೇವಲ ಎರಡು ಕುರ್ಚಿ ಹಾಗೂ ನಾಲ್ಕು ಬೀನ್ ಸೀಟರ್ ಗಳ ಹೊರತಾಗಿ ಬೇರೆ ಯಾವುದೇ ಪೀಠೋಪಕರಣದ ವ್ಯವಸ್ಥೆ ಮಾಡಿಲ್ಲವೆಂದು ತಿಳಿದು ಬಂದಿದೆ.

ಈ ವಿಚಾರವನ್ನು ಭಾರತೀಯ ತಂಡದ ಪರ್ಫಾಮೆನ್ಸ್ ಡೈರೆಕ್ಟರ್ ರೋಲೆಂಟ್ ಒಲ್ಟ್‌ಮನ್ಸ್ ಅವರು ಹಾಕಿ ಇಂಡಿಯಾ ಅಧ್ಯಕ್ಷ ನರೀಂದರ್ ಬಾತ್ರ ಅವರ ಗಮನಕ್ಕೆ ತಂದ ನಂತರ ಅವರು ರೋಲೆಂಟ್ ಅವರಲ್ಲಿ ಯಾರಿಗೂ ಕಾಯದೆ ಅಗತ್ಯ ಪೀಠೋಪಕರಣ ಖರೀದಿಸುವಂತೆ ಹೇಳಿದ್ದಾರಲ್ಲದೆ ಇದರ ಬಾಬ್ತು ಹಣವನ್ನು ಹಾಕಿ ಇಂಡಿಯಾ ಭರಿಸುವುದೆಂದು ಹೇಳಿದ್ದಾರೆ. ಈ ಸಮಸ್ಯೆಯ ಬಗ್ಗೆ ನರೀಂದರ್ ಬಾತ್ರ ಸಾಮಾಜಿಕ ಜಾಲತಾಣಗಳಲ್ಲಿಯೂ ಹೇಳಿಕೊಂಡಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಉತ್ತಮ ನಿರ್ವಹಣೆ ತೋರಬೇಕಾಗಿರುವ ತಂಡಗಳ ವಾಸಸ್ಥಾನಗಳಲ್ಲಿ ಹೀಗೆ ಸೌಕರ್ಯಗಳ ಕೊರತೆ ಅವರ ನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದೆಂಬ ಭಯವನ್ನೂ ರೋಲೆಂಟ್ ಭಾರತೀಯ ತಂಡದ ಮುಖ್ಯಸ್ಥ ರಾಕೇಶ್ ಗುಪ್ತಾರಿಗೆ ಪತ್ರವೊಂದರಲ್ಲಿ ತಿಳಿಸಿದ್ದಾರೆ. ಬೀನ್ ಬ್ಯಾಗ್‌ಗಳಲ್ಲಿ ಬಹಳ ಹೊತ್ತು ಕುಳಿತುಕೊಳ್ಳುವುದರಿಂದ ಹಲವಾರು ಸಮಸ್ಯೆಗಳು ಕಾಡಬಹುದು ಎಂದೂ ಅವರು ತಿಳಿಸಿದ್ದಾರೆ.
 ರಿಯೋ ಒಲಿಂಪಿಕ್ಸ್ ಸಂಘಟಕರು ಈ ಬಗ್ಗೆ ಈಗಾಗಲೇ ಆಸ್ಟ್ರೇಲಿಯ ಹಾಗೂ ಹಲವು ಇತರ ತಂಡಗಳಿಂದ ದೂರು ಎದುರಿಸಬೇಕಾಗಿ ಬಂದಿದ್ದು ಒಲಿಂಪಿಕ್ಸ್ ಗ್ರಾಮದಲ್ಲಿರುವ ಹೆಚ್ಚಿನ ಅಪಾರ್ಟ್‌ಮೆಂಟ್‌ಗಳಲ್ಲಿ ಸೂಕ್ತ ಸೌಲಭ್ಯಗಳನ್ನು ಒದಗಿಸಿಲ್ಲವೆನ್ನಲಾಗಿದೆ. ಕೆಲ ದಿನಗಳ ಹಿಂದೆ ಆಸ್ಟ್ರೇಲಿಯ ತಂಡ ತಂಗಿದ್ದ ಅಪಾರ್ಟ್‌ಮೆಂಟ್‌ನ ತಳ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ತಂಡವನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News