ಕೇರಳ ಸಚಿವ ಜಲೀಲ್‌ಗೆ ಸೌದಿ ಪ್ರಯಾಣಕ್ಕೆ ಪಾಸ್‌ಪೋರ್ಟ್ ನಿರಾಕರಿಸಿದ ಕೇಂದ್ರಸರಕಾರ!

Update: 2016-08-05 07:11 GMT

 ತಿರುವನಂತಪುರಂ,ಆ.5: ಸೌದಿ ಅರೇಬಿಯಾದಲ್ಲಿನ ಕೇರಳದ ಕಾರ್ಮಿಕರ ಸಮಸ್ಯೆಗೆ ಸಂಬಂಧಿಸಿ ಕೇರಳ ಸರಕಾರದ ವತಿಯಿಂದ ಸೌದಿ ಅರೇಬಿಯಾಕ್ಕೆ ಕಳುಹಿಸಲಿದ್ದ ಸಚಿವ ಕೆ.ಟಿ ಜಲೀಲ್‌ರಿಗೆ ವಿದೇಶ ಸಚಿವಾಲಯದಿಂದ ರಾಜತಾಂತ್ರಿಕ ಪಾಸ್‌ಪೋರ್ಟ್ ನಿರಾಕರಿಸಲಾಗಿದ್ದು ಈ ಕುರಿತು ರಾಜಕೀಯ ವಿವಾದವೊಂದು ಹೊಸದಾಗಿಸೃಷ್ಟಿಯಾಗಿದೆ ಎಂದು ತಿಳಿದು ಬಂದಿದೆ. ಜಲೀಲ್‌ರ ಸೌದಿ ಪ್ರಯಾಣಕ್ಕೆ ಅಡ್ಡಿಪಡಿಸಿದುದರ ಹಿಂದೆ ಸೌದಿಯಲ್ಲಿ ಸಿಲುಕಿಕೊಂಡಿರುವಕೇರಳದ ಉದ್ಯೋಗಿಗಳನ್ನು ಜಲೀಲ್ ಊರಿಗೆ ಕರೆತರುವ ಮೂಲಕ ರಾಜಕೀಯ ಲಾಭ ಪಡೆಯಬಹುದೆಂದು ಭಾವಿಸಿ ಕೇಂದ್ರ ಸರಕಾರ ಅವರ ಪ್ರಯಾಣಕ್ಕೆ ಅಡ್ಡಿಪಡಿಸಿದೆ ಎಂದು ಕೇರಳ ಸರಕಾರದ ಮೂಲಗಳು ತಿಳಿಸಿವೆ.

 ರಾಜತಾಂತ್ರಿಕ ಪಾಸ್‌ಪೋರ್ಟ್ ಲಭಿಸಲಿದೆ ಎಂಬ ನಿರೀಕ್ಷೆಯಲ್ಲಿ ಶುಕ್ರವಾರ ಸೌದಿಗೆ ಸಚಿವ ಜಲೀಲ್ ಮತ್ತು ಕೇರಳ ಸರಕಾರದ ಅಧೀನ ಕಾರ್ಯದರ್ಶಿ ವಿ.ಕೆ.ಬೇಬಿಯವರನ್ನು ಸೌದಿಗೆ ಕಳುಹಿಸಲು ಸಚಿವ ಸಂಪುಟ ತೀರ್ಮಾನಿಸಿತ್ತು. ಅದರಂತೆ ರಾಜತಾಂತ್ರಿಕ ಪಾಸ್‌ಪೋರ್ಟ್‌ಗೆ ಅರ್ಜಿಸಲ್ಲಿಸಲಾಗಿತ್ತು. ಸರಕಾರದ ಆದೇಶ ಮತ್ತು ಸಚಿವರ ಪ್ರವಾಸ ಕಾರ್ಯಕ್ರಮ ಸಂಹಿತೆಯನ್ನು ಗುರುವಾರ ಬೆಳಗ್ಗೆ ವಿದೇಶ ಸಚಿವಾಲಯದ ಅನುಮತಿಗಾಗಿ ಕಳುಹಿಸಿಕೊಡಲಾಗಿತ್ತು. ಇದಕ್ಕೆ ಸಂಬಂಧಿಸಿ ಸಚಿವ ಜಲೀಲ್ ವಿದೇಶ ಸಚಿವಾಲಯದ ಖಾಸಗಿ ಕಾರ್ಯದರ್ಶಿ ಸತೀಶ್ಚಂದ್ರ ಗುಪ್ತರೊಡನೆ ಮಾತಾಡಿದ್ದರು ಎನ್ನಲಾಗಿದೆ.

ಭಾರತದ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ. ಅಲ್ಲಿಂದ ಸೂಚನೆ ಸಿಕ್ಕಿದೊಡನೆ ಪಾಸ್‌ಪೋರ್ಟ್ ನೀಡಲಾಗುವುದು ಎಂದು ಉತ್ತರ ನೀಡಲಾಗಿತ್ತು. ನಂತರ ಸಚಿವ ಜಲೀಲ್ ಮತ್ತು ಕಾರ್ಯದರ್ಶಿ ಬೇಬಿಯವರ ಅರ್ಜಿ ತಿರಸ್ಕಾರಗೊಂಡಿದೆ ಎಂದು ಮಾಹಿತಿ ನೀಡಲಾಯಿತು.ಗುರುವಾರ ಪತ್ರಿಕಾಗೋಷ್ಠಿ ಕರೆದಿದ್ದರೂ ರಾಜತಾಂತ್ರಿಕ ಪಾಸ್‌ಪೋರ್ಟ ಲಭಿಸದ ವಿಷಯವನ್ನು ಸಚಿವರು ತಿಳಿಸಲಿಲ್ಲ. ಪಾಸ್‌ಪೋರ್ಟ್ ಸಿಕ್ಕದ ವಿಷಯ ತಿಳಿದಿಲ್ಲ ಎಂದು ಸರಕಾರದ ಮುಖ್ಯಕಾರ್ಯದರ್ಶಿ ಎಸ್‌ಎಂ ವಿಜಯಾನಂದ್ ಹೇಳಿದ್ದರು. 48 ಗಂಟೆ ಕಳೆದ ಬಳಿಕವೇ ಯಾವುದೇ ಮಾಹಿತಿ ನೀಡಲು ಸಾಧ್ಯ ಎಂದು ಕೇಂದ್ರದಿಂದ ತಿಳಿಸಲಾಗಿದೆ ಎಂದು ಮುಖ್ಯಕಾರ್ಯದರ್ಶಿ ಹೇಳಿದ್ದರು ಎಂದು ವರದಿ ತಿಳಿಸಿದೆ.

 ಜಿದ್ದ,ರಿಯಾದ್, ದಮ್ಮಾಂಗಳಿಗೆ ಭೇಟಿ ನೀಡಿ ಕೇರಳದ ಉದ್ಯೋಗಿಗಳ ಸಮಸ್ಯೆ ಪರಿಹಾರಕ್ಕೆ ನೇತೃತ್ವ ನೀಡುವ ಉದ್ದೇಶದಿಂದ ಜಲೀಲ್‌ರನ್ನು ಸೌದಿಗೆ ಕಳುಹಿಸಲು ಕೇರಳ ಸರಕಾರ ನಿರ್ಧರಿಸಿತ್ತು. ಸೌದಿಯಿಂದ ಮರಳಿಬರುವವರಿಗೆ ಪುನರ್ವಸತಿ ಪ್ಯಾಕೇಜ್ ಸರಕಾರದ ಪರಿಗಣನೆಯಲ್ಲಿದೆ ಎಂದು ಸಚಿವ ಜಲೀಲ್ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ಈಗ ಸಚಿವ ಜಲೀಲ್‌ರ ಸೌದಿಯಾತ್ರೆಯನ್ನು ಉದ್ದೇಶಪೂರ್ವಕವಾಗಿ ಕೇಂದ್ರ ಸರಕಾರ ತಡೆದಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News