‘ಆಮ್ ಆದ್ಮಿಯ ಸಿಎಂ’ ರಿಂದ ಹೊಸ ಜನವಿರೋಧಿ ನಿರ್ಬಂಧ

Update: 2016-08-05 18:33 GMT

ಹೊಸದಿಲ್ಲಿ, ಆ.5: ದಿಲ್ಲಿಯ ಆಮ್ ಆದ್ಮಿಯ ಮುಖ್ಯಮಂತ್ರಿಯೆಂದೇ ಜನಜನಿತರಾಗಿರುವ ಅರವಿಂದ್ ಕೇಜ್ರಿವಾಲ್ ಇದೀಗ ಆಮ್ ಆದ್ಮಿಯಿಂದ ದೂರವಾಗುವ ಪ್ರಯತ್ನ ಮಾಡಿದ್ದಾರೆಯೇ? ಇಂತಹ ಒಂದು ಸಂಶಯ ಅವರ ಇತ್ತೀಚಿಗಿನ ಒಂದು ಜನವಿರೋಧಿ ನಿರ್ಬಂಧದಿಂದ ಮೂಡಿದೆ. ತನ್ನ ಧರಣಿ ರಾಜಕೀಯದಿಂದಲೇ ಪ್ರವರ್ಧಮಾನಕ್ಕೆ ಬಂದು ದಿಲ್ಲಿಯ ಮುಖ್ಯಮಂತ್ರಿಯೂ ಆದ ಕೇಜ್ರಿವಾಲ್ ಇದೀಗ ತನ್ನ ಅಧಿಕೃತ ನಿವಾಸದ ಹೊರಗೆ ಧರಣಿಗಳನ್ನು ನಿಷೇಧಿಸಿದ್ದಾರೆ. ಎರಡು ದಿನಗಳ ಹಿಂದೆ ದಿಲ್ಲಿ ಸರಕಾರದ ಸಬ್-ಡಿವಿಶನಲ್ ಮ್ಯಾಜಿಸ್ಟ್ರೇಟ್ ಆದೇಶವೊಂದನ್ನು ಹೊರಡಿಸಿ ದಿಲ್ಲಿಯ ಪ್ರತಿಷ್ಠಿತ ಸಿವಿಲ್ ಲೈನ್ಸ್ ಪ್ರದೇಶದಲ್ಲಿನ 6 ಪ್ಲಾಗ್ ಸ್ಟಾಪ್ ರಸ್ತೆಯಲ್ಲಿರುವ ಮುಖ್ಯಮಂತ್ರಿಯ ಅಧಿಕೃತ ನಿವಾಸದ ಹೊರಗಡೆ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು ಹಲವರ ಕಣ್ಣು ಕೆಂಪಾಗಿಸಿದೆ. ಮುಖ್ಯಮಂತ್ರಿ ನಿವಾಸದ ಎದುರು ಆಗಾಗ ಧರಣಿಗಳು ನಡೆದಲ್ಲಿ ಕಾನೂನು ಸುವ್ಯವಸ್ಥಗೆ ಸಮಸ್ಯೆಯಾಗಬಹುದೆಂದೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಸಬೂಬು ನೀಡಲಾಗಿದೆ. ಇದೇ ಕೇಜ್ರಿವಾಲ್ ಎರಡು ವರ್ಷಗಳ ಹಿಂದೆ ಗಣತಂತ್ರ ದಿನದ ಹಲವು ದಿನಗಳ ಮುನ್ನಾ ನಿಷೇಧಾಜ್ಞೆ ಉಲ್ಲಂಘಿಸಿ ರೈಲು ಭವನದ ಎದುರು ಧರಣಿ ಕೂತಿದ್ದ ಬಗ್ಗೆ ಹಲವರಿಗೆ ನೆನಪಿರಬಹುದು.

ಈಗ ಕೇಜ್ರಿವಾಲ್ ನಿವಾಸದೆದುರಿನ ನಿಷೇಧಾಜ್ಞೆಯಂತೆ ಧರಣಿ, ಸಭೆ ಸೇರುವುದು ಹಾಗೂ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರಿಗೆ ತಮ್ಮ ಬಾಗಿಲು ಮುಕ್ತವಾಗಿದೆಯೆಂದು ಹೇಳಿಕೊಳ್ಳುತ್ತಿದ್ದ ಕೇಜ್ರಿವಾಲ್ ಸರಕಾರದಿಂದ ಇಂತಹ ಒಂದು ಕ್ರಮವನ್ನು ಯಾರೂ ನಿರೀಕ್ಷಿರಲಿಲ್ಲ. ಒಬ್ಬ ನಾಯಕನ ಖಾಸಗಿ ಬದುಕಿಗೆ ಯಾವುದೇ ಅಡ್ಡಿ ಬರಬಾರದೆಂಬುದು ಒಪ್ಪಬಹುದಾದರೂ ಸಾರ್ವಜನಿಕರಿಗೆ ತಮ್ಮ ಪ್ರತಿಭಟಿಸುವ ಹಕ್ಕುಗಳನ್ನು ನಿರಾಕರಿಸಿರುವುದು ಸರಿಯಾದುದಲ್ಲ ಎಂದು ವರದಿಯೊಂದು ಅಭಿಪ್ರಾಯಪಟ್ಟಿದೆ.

ತನ್ನ ಕಚೇರಿಗೆ ನಡೆದುಕೊಂಡು ಹೋಗಲು ಬಯಸಿದ್ದ ಹಾಗೂ ತನ್ನ ಪಕ್ಷದ ಚಿಹ್ನೆ ಪೊರಕೆಯಂತೆ ದಿಲ್ಲಿಯ ನಾಯಕರ ಎಲ್ಲ ಆಡಂಬರದ ಪ್ರದರ್ಶನಗಳಿಗೆ ತೆರೆ ಎಳೆಯುವರೆಂದು ನಿರೀಕ್ಷಿಸಲಾಗಿದ್ದ ಒಬ್ಬ ನಾಯಕನಿಂದ ಇಂತಹ ಒಂದು ಕ್ರಮ ಅನಪೇಕ್ಷಿತ ಯಾರೂ ಇದನ್ನು ನಿರೀಕ್ಷಿಸಿರಲಿಲ್ಲ.

ಸ್ವಾತಂತ್ರ ದಿನ, ರಕ್ಷಾ ಬಂಧನ್ ಸಂದರ್ಭ ಅಪಾಯ ಹೆಚ್ಚು ಎಂದು ಆಗಸ್ಟ್ ಅಂತ್ಯದ ತನಕ ನಿಷೇಧಾಜ್ಞೆಯನ್ನು ಸದ್ಯಕ್ಕೆ ಜಾರಿಗೊಳಿಸಲಾಗಿದೆಯಾದರೂ ಈ ನಿಷೇಧಾಜ್ಞೆ ಮುಂದೆ ದಸರಾ, ದೀಪಾವಳಿ ಹಾಗೂ ಕ್ರಿಸ್ಮಸ್ ತನಕವೂ

ಮುಂದುವರಿಯಬಹುದೇನೋ ಎಂಬ ಸಂಶಯವೂ ಮೂಡಿದೆ.

ಈಗಾಗಲೇ ಕೇಂದ್ರ ಸರಕಾರದೊಂದಿಗೆ ಹಲವು ಬಾರಿ ಮಾತಿನ ಜಟಾಪಟಿಗೆ ಇಳಿದಿರುವ ಕೇಜ್ರಿವಾಲ್ ತಮ್ಮನ್ನು ಯಾರಾದರೂ ಹತ್ಯೆ ಮಾಡಬಹುದೆಂದು ಭಾವಿಸಿರುವುದೇ ಅವರ ಈ ಕ್ರಮಕ್ಕೆ ಕಾರಣವೇ ಎಂಬ ಪ್ರಶ್ನೆಗಳೂ ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News