ಈ ಮೂರು ಫೋಟೋಗಳು ಮತ್ತು ಗೋರಕ್ಷಕರ ವಿರುದ್ಧ ಪ್ರಧಾನಿ ಮೋದಿ ಅವರ ಆಕ್ರೋಶ

Update: 2016-08-08 07:35 GMT

ಹೊಸದಿಲ್ಲಿ, ಆ.8: ಸಂಘ ಪರಿವಾರ ಸಂಘಟನೆಗಳಿಗೆ ಸೇರಿದ ಗೋರಕ್ಷಕರ ಅಟ್ಟಹಾಸದಿಂದ ದಲಿತರ ಮೇಲಾದ ದೌರ್ಜನ್ಯದ ಬಗ್ಗೆ ಪ್ರಧಾನ ಮಂತ್ರಿ ಕೊನೆಗೂ ತಮ್ಮ ಮೌನ ಮುರಿದು ‘‘ನಿಮಗೆ ಗುಂಡಿಕ್ಕಬೇಕೆಂಬ ಮನಸ್ಸಿದ್ದರೆ ನನಗೆ ಗುಂಡಿಕ್ಕಿ, ದಾಳಿ ನಡೆಸಬೇಕೆಂದಿದ್ದರೆ ನನ್ನ ಮೇಲೆ ದಾಳಿ ಮಾಡಿ’ ಎಂದು ಹೇಳುವ ಮೂಲಕ ದಲಿತರಿಗೆ ತಮ್ಮ ದನಿ ಕನಿಷ್ಠ ಮುಂದಿನ ಚುನಾವಣೆವರೆಗಾದರೂ ಕೇಳಿಸುವಂತೆ ಮಾಡಿದ್ದಾರೆ. ಪ್ರಧಾನಿ ಹೇಳಿಕೆಯ ತರುವಾಯ ಬಿಜೆಪಿಯ ಸೈದ್ಧಾಂತಿಕ ಗುರು ಆರೆಸ್ಸೆಸ್ ಕೂಡ ನಕಲಿ ಗೋರಕ್ಷಕರನ್ನು ಉಗ್ರವಾಗಿ ಖಂಡಿಸಿತು.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವೊಂದು ಚಿತ್ರಗಳು ಈ ಗೋರಕ್ಷಕರು ಹಾಗೂ ಪ್ರಧಾನಿಯ ಪಕ್ಷವಾದ ಬಿಜೆಪಿಯೊಂದಿಗಿರುವ ನೇರ ಸಂಬಂಧವನ್ನು ಹೊರಗೆಡಹಿವೆಯೆಂದು ಜನತಾ ಕಾ ರಿಪೋರ್ಟರ್ ವರದಿಯೊಂದು ಹೇಳಿದೆ.

ಫೇಸ್‌ಬುಕ್‌ನಲ್ಲಿ ಅನ್ ಒಫಿಶಿಯಲ್ ಸುಬ್ರಹ್ಮಣ್ಯಮ್ ಸ್ವಾಮಿ ಖಾತೆ ಹೊಂದಿರುವ ವ್ಯಕ್ತಿಯೊಬ್ಬರು ಸುಮಾರು 20 ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದು, ಇದರಲ್ಲಿ ಸ್ವಯಂಘೋಷಿತ ಗೋರಕ್ಷಕರೆನಿಸಿಕೊಂಡವರು ಬಿಜೆಪಿ ಸಂಸದ ಹಾಗೂ ಹೊಸದಾಗಿ ನೇಮಕಗೊಂಡ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಸಹಿತ ಇತರ ನಾಯಕರೊಂದಿಗಿರುವ ಭಾವಚಿತ್ರಗಳಿವೆ.

ಗುರ್ಗಾಂವ್ ಗೋ ರಕ್ಷಕ್ ದಳದ ಅಧ್ಯಕ್ಷ ಧಮೇಂದ್ರ ಯಾದವ್ ಅವರು ಠಾಕೂರ್ ಸೇರಿದಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆಗಿರುವ ಫೋಟೊಗಳೂ ಇವೆ. ಇಬ್ಬರು ಮುಸ್ಲಿಮ್ ಯುವಕರಾದ ರಿಝ್ವಿನ್ ಹಾಗೂ ಮುಖ್ತಾರ್ ಅವರನ್ನು ಸಾರ್ವಜನಿಕವಾಗಿ ಅವಮಾನಿಸಿ ಅವರನ್ನು ಸೆಗಣಿ ತಿನ್ನುವಂತೆ ಬಲವಂತ ಪಡಿಸಿದ ಘಟನೆಯ ಹಿಂದೆ ಯಾದವ್ ಗುಂಪಿನ ಕೈವಾಡವಿದೆಯೆನ್ನಲಾಗಿದೆ.

ಈ ಚಿತ್ರಗಳಿಂದಾಗಿ ಪ್ರಧಾನಿ ಮೋದಿ ಗೋರಕ್ಷಕರ ವಿರುದ್ಧ ವ್ಯಕ್ತಪಡಿಸಿರುವ ಆಕ್ರೋಶವನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ. ಸ್ವತಃ ಮೋದಿ ತಮ್ಮ ಸ್ವಪಕ್ಷೀಯರ ಹಾಗೂ ಗೋರಕ್ಷಕರ ನಡುವಣ ಸಂಬಂಧದ ಬಗ್ಗೆ ಸ್ಪಷ್ಟೀಕರಣ ನೀಡದ ಹೊರತು ಜನರ ಸಂಶಯ ದೂರವಾಗದು, ಎಂದು ಜನತಾ ಕಾ ರಿಪೋರ್ಟರ್ ವರದಿ ಹೇಳಿದೆ.

ಮುಂದಿನ ವರ್ಷ ಗುಜರಾತ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತಗಳನ್ನು ಸೆಳೆಯುವ ಪ್ರಯತ್ನವಾಗಿ ಮೋದಿ ಗೋರಕ್ಷಕರ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News