ಐರೋಮ್ ಗೆ ಜಾಮೀನು ಮಂಜೂರು ; ಉಪವಾಸ ಸತ್ಯಾಗ್ರಹ ಅಂತ್ಯ

Update: 2016-08-09 13:59 GMT

ಹೊಸದಿಲ್ಲಿ, ಆ.9:  ಕಳೆದ ಹದಿನಾರು  ವರ್ಷಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಾ ಇಂಫಾಲ್  ಆಸ್ಪತ್ರೆ ಸೇರಿದ್ದ  ಮಣಿಪುರದ ಉಕ್ಕಿನ ಮಹಿಳೆ  ಐರೋಮ್ ಶರ್ಮಿಲಾ ಅವರಿಗೆ  ಇಂದು  ಜಾಮೀನು ಮಂಜೂರಾಗಿದೆ. ಅವರು ಉಪವಾಸ ಅಂತ್ಯಗೊಳಿಸಿದ್ದಾರೆ.

ಇಂದು  ಐರೋಮ್ ಶರ್ಮಿಲಾ   ಅವರ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಇಂಫಾಲ್ ಸಿಜೆಎಂ ನ್ಯಾಯಾಲಯವು ಆಗಸ್ಟ್ 23ಕ್ಕೆ ಮುಂದೂಡಿದ್ದು,    ಅವರಿಗೆ  ಇದೇ ವೇಳೆ ಜಾಮೀನು ಮಂಜೂರು ಮಾಡಿದೆ.
ಸಶಸ್ತ್ರ  ಪಡೆಗಳಿಗೆ ವಿಶೇಷ ಅಧಿಕಾರ ಕಾಯ್ದೆ ಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಆ.9ರಂದು ಕೊನೆಗೊಳಿಸುವುದಾಗಿ  ಶರ್ಮಿಲಾ ಅವರು   ಜುಲೈ 26ರಂದು  ಪ್ರಕಟಿಸಿದ್ದರು.
2000, ನವೆಂಬರ್ 1ರಂದು ಮಣಿಪುರದ  ಇಂಫಾಲ್‌ ವಿಮಾನ ನಿಲ್ದಾಣದ ಸಮೀಪದ ‘ಮಾಲೋಂ’ ಎಂಬಲ್ಲಿ ಬಸ್ಸಿಗಾಗಿ ಕಾಯುತಿದ್ದ ಹತ್ತು ಜನರನ್ನು ಅಸ್ಸಾಂ ರೈಫಲ್ಸ್ ಯೋಧರು ಗುಂಡಿಕ್ಕಿ ಕೊಂದರು. ಇದನ್ನು ಪ್ರತಿಭಟಿಸಿ ಶರ್ಮಿಲಾ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
 ಐರೋಮ್ ಶರ್ಮಿಲಾ ಉಪವಾಸ ಕೊನೆಗೊಳಿಸುವ ದಿನದ  ಹೈಲೈ ಟ್ಸ್ 
10:30:  ಇಂಫಾಲ್‌ ಆಸ್ಪತ್ರೆಯಿಂದ ನ್ಯಾಯಾಲಯಕ್ಕೆ ಹೊರಟ ಶರ್ಮಿಲಾ.ಕಳೆದ ಹದಿನಾರು ವರ್ಷಗಳಿಂದ  ಇಂಫಾಲ್‌ ಆಸ್ಪತ್ರೆಯು ಶರ್ಮಿಲಾ ಪಾಲಿಗೆ ಸೆರೆಮನೆಯಾಗಿದೆ.
11:15: ಇಂಫಾಲ್‌ ನ್ಯಾಯಾಲಯಕ್ಕೆ ಹಾಜರಾದ ಶರ್ಮಿಲಾ. ನ್ಯಾಯಾಧೀಶರ ಮುಂದೆ ಸ್ವತ: ವಾದ ಮಂಡನೆ.
11:19: ಬಾಂಡ್‌ ಒದಗಿಸಿದಲ್ಲಿ  ನ್ಯಾಯಾಂಗ ಬಂಧನದಿಂದ ಬಿಡುಗಡೆಯ ಬಗ್ಗೆ ಇಂಫಾಲ್‌ ಪೂರ್ವ ಕೋರ್ಟ್‌ ನ ಪ್ರಧಾನ ನ್ಯಾಯಧೀಶರ ಸಲಹೆ.
11:35: ತಮ್ಮ ವಿರುದ್ಧದ ಪ್ರಕರಣಗಳನ್ನು ಕೈ ಬಿಡುವಂತೆ ಶರ್ಮಿಲಾ ಮನವಿ. ತಪ್ಪೊಪ್ಪಿಕೊಂಡರೆ ಪ್ರಕರಣಗಳನ್ನು ಕೈಬಿಡುವ ಬಗ್ಗೆ ನ್ಯಾಯಾಧೀಶರ ಸೂಚನೆ.
11:40:  ಮಣಿಪುರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿರುವ ಶರ್ಮಿಲಾ ಅವರಿಗೆ ನ್ಯಾಯಾಧೀಶರಿಂದ ಶುಭ ಹಾರೈಕೆ.
12:35 : ಸಾಕ್ಷಿಗಳ ವಿಚಾರಣೆ.
01:30 : ಶರ್ಮಿಲಾಗೆ ಮತ್ತೆ  ನ್ಯಾಯಾಂಗ ಬಂಧನ 
01:40: ಪ್ರಕರಣದ ವಿಚಾರಣೆ ಆ.23ಕ್ಕೆ ಮುಂದೂಡಿಕೆ .

02:03 : "ಕಳೆದ 16 ವರ್ಷಗಳ ಉಪವಾಸ ಸತ್ಯಾಗ್ರಹದಿಂದ ಏನನ್ನು ಪಡೆಯಲು ಸಾಧ್ಯವಾಗಲಿಲ್ಲ. ಇನ್ನು ಹಲವು  ಪ್ರತಿಭಟನೆ  ಮುಂದುವರಿಯಲಿದೆ. ರಾಜ್ಯದ ಮುಖ್ಯ ಮಂತ್ರಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಮುಂದೆ ನೋಡುವಿರಿ- ಐರೋಮ್ ಶರ್ಮಿಲಾ 
02:15:  ಐರೋಮ್ ಶರ್ಮಿಲಾ ಗೆ ಜಾಮೀನು ಮಂಜೂರು. 10 ಸಾವಿರ ರೂ. ಮೊತ್ತದ ಬಾಂಡ್ ಸಲ್ಲಿಕೆ.

04:18: ಹದಿನಾರು ವರುಷಗಳ  ಉಪವಾಸ ಸತ್ಯಾಗ್ರಹ ಮಂಗಳವಾರ ಅಂತ್ಯಗೊಳಿಸಿದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಕಟ.

04:20: ರಾಜಕೀಯ ಸೇರುವ ಯೋಜನೆ. ಮಣಿಪುರದ  ಉಕ್ಕಿನ ಮಹಿಳೆ ಖ್ಯಾತಿಯನ್ನು ಉಳಿಸಿಕೊಂಡು ಬದುಕುವ  ಇಂಗಿತ.

04:40:ಸಶಸ್ತ್ರ  ಪಡೆಗಳಿಗೆ ವಿಶೇಷ ಅಧಿಕಾರ ಕಾಯ್ದೆ ಯ ಪುನರ್ ಪರಿಶೀಲನೆಗೆ  ಮತ್ತೊಮ್ಮೆ ಪ್ರಧಾನ ಮಂತ್ರಿಗೆ ಮನವಿ.

04:41:ಮಣಿಪುರ ಮುಖ್ಯ ಮಂತ್ರಿ ಒಕ್ರಮ್  ಇಬೊಬಿ ಸಿಂಗ್ ವಿರುದ್ಧ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಘೋಷಣೆ.

04:42:   ಜೇನು ತುಪ್ಪ ಸೇವಿಸಿ ಉಪವಾಸ ಮುರಿದ ಐರೋಮ್ ಶರ್ಮಿಲಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News