ಆಪ್ ಶಾಸಕನ ರೂ.130 ಕೋಟಿ ಅನಧಿಕೃತ ಸಂಪತ್ತು ಐಟಿ ಇಲಾಖೆಯಿಂದ ಪತ್ತೆ

Update: 2016-08-09 15:06 GMT

ಹೊಸದಿಲ್ಲಿ, ಆ.9: ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಕರ್ತಾರ್ ಸಿಂಗ್ ತನ್ವರ್‌ನ ಬಳಿಯಿರುವ ರೂ. 130 ಕೋಟಿ ಅನಧಿಕೃತ ಆದಾಯ ಹಾಗೂ ಹೂಡಿಕೆಗಳನ್ನು ಆದಾಯ ತೆರಿಗೆ ಇಲಾಖೆಯು ಪತ್ತೆ ಮಾಡಿದೆಯೆಂದು ಮಂಗಳವಾರ ಮೂಲಗಳು ತಿಳಿಸಿವೆ.
 ಇಲಾಖೆಯು ಈಗಾಗಲೇ ಸುಮಾರು ರೂ. 1 ಕೋಟಿ ಮೌಲ್ಯದ ಲೆಕ್ಕವಿಲ್ಲದ ನಗದು ಹಾಗೂ ಆಭರಣಗಳನ್ನು ತನ್ವರ್ ಹಾಗೂ ಅವರ ಸಹೋದರನಿಂದ ವಶಪಡಿಸಿಕೊಂಡಿದೆ. ಇತ್ತೀಚೆಗೆ ದಾಳಿಯೊಂದನ್ನು ನಡೆಸಿದ ಬಳಿಕ ಇಲಾಖೆಯು ಎರಡು ಬಾರಿ ತನ್ವರ್‌ರ ವಿಚಾರಣೆಯನ್ನು ನಡೆಸಿದೆ.
 ದಾಳಿಯ ಕುರಿತು ಪ್ರತಿಕ್ರಿಯಿಸಿದ್ದ ತನ್ವರ್, ಇದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನಡೆಸಿರುವ ರಾಜಕೀಯ ಬೇಟೆಯಾಗಿದೆಯೆಂದು ಆರೋಪಿಸಿದ್ದರು. ಅವರು 2014ರಲ್ಲಿ ಆಪ್ ಸೇರುವ ಮೊದಲು ಬಿಜೆಪಿಯಲ್ಲಿದ್ದರು.
ತನ್ವರ್ ಹಾಗೂ ಅವರ ಸಹಚರರು ಛತ್ತರ್‌ಪುರ ಹಾಗೂ ಘಿಟೋರ್ನಿಗಳಲ್ಲಿ ತೋಟದ ಮನೆಗಳನ್ನು ಖರೀದಿಸಲು ನಗದು ರೂಪದಲ್ಲಿ ಹಣ ಪಾವತಿಸಿದ್ದುದು ಇತ್ತೀಚಿನ ದಾಳಿಯಲ್ಲಿ ಬಹಿರಂಗವಾಗಿದೆಯೆಂದು ಐಟಿ ಇಲಾಖೆಯ ಮೂಲಗಳು ಹೇಳಿವೆ.
ಭಾರೀ ಜಮೀನು ಖರೀದಿಯಲ್ಲಿ ತನ್ವರ್ ಮುದ್ರಾಂಕ ಶುಲ್ಕ ಹಾಗೂ ನೋಂದಣಿ ಶುಲ್ಕಗಳನ್ನು ಪಾವತಿಸದೆ, ದಿಲ್ಲಿ ಸರಕಾರವನ್ನು ವಂಚಿಸುತ್ತಿದ್ದಾರೆಂದು ಅವು ಆರೋಪಿಸಿವೆ.
ಜಮೀನು ವ್ಯವಹಾರದ ಹಣವನ್ನು ಸಾಲಗಳು ಹಾಗೂ ತನ್ನ ಮಾಲಕತ್ವದ ಕಂಪೆನಿಗಳು ಪಡೆದ ಮುಂಗಡಗಳೆಂದು ತೋರಿಸಿ ಲೆಕ್ಕ ಪತ್ರವನ್ನು ತಿರುಚುತ್ತಿದ್ದಾರೆ. ಈ ಹಣ ವರ್ಗಾವಣೆಗಾಗಿ ಅವರು 30ರಿಂದ 35 ಕಂಪೆನಿಗಳನ್ನು ಆರಂಭಿಸಿದ್ದಾರೆಂದು ಮೂಲಗಳು ಪ್ರತಿಪಾದಿಸಿವೆ.
ಲೆಕ್ಕದಲ್ಲಿ ತೋರಿಸದ ಹಾಗೂ ಬೇನಾಮಿ ಆಸ್ತಿಗಳನ್ನು ತೋರಿಸುವ ಅಪಾರ ಸಂಖ್ಯೆಯ ದಾಖಲೆಗಳು ಆದಾಯ ತೆರಿಗೆ ಇಲಾಖೆಗೆ ದೊರೆತಿವೆಯೆನ್ನಲಾಗಿದೆ. ಈ ವ್ಯವಹಾರಗಳ ವೌಲ್ಯ ಮಾಪನವು ನಡೆಯುತ್ತಿದೆ.
 ಮಾಲ್ ಹಾಗೂ ವಸತಿ ಗೃಹಗಳ ನಿರ್ಮಾಣ, ಮದುವೆಯ ಖರ್ಚುಗಳು ಹಾಗೂ ತೋಟದ ಮನೆಗಳ ಬಗ್ಗೆ ವಿವರ ನೀಡದ ಹಾಗೂ ಲೆಕ್ಕ ನೀಡದ ಖರ್ಚುಗಳ ಕುರಿತು ತನಿಖೆಯನ್ನೂ ಇಲಾಖೆ ನಡೆಸುತ್ತಿದೆ. ಇದರಿಂದ ಭಾರೀ ಪ್ರಮಾಣದ ತೆರಿಗೆಕಳ್ಳತನ ಆಗಿರುವ ಸಾಧ್ಯತೆಯಿದೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News