ಗೋರಕ್ಷರ ವಿರುದ್ಧ ಕಠಿಣ ಕ್ರಮಕ್ಕೆ ಪ್ರಧಾನಿಗೆ ಮಾಯಾವತಿ ಆಗ್ರಹ

Update: 2016-08-10 13:03 GMT

ಹೊಸದಿಲ್ಲಿ,ಆ.10: ದಲಿತರ ಬಗ್ಗೆ ಕೇವಲ ಸಹಾನುಭೂತಿ ತೋರಿಸದೆ ಗೋರಕ್ಷಣೆಯ ಹೆಸರಿನಲ್ಲಿ ಅವರ ಮೇಲೆ ದಾಳಿಗಳನ್ನು ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ಖಚಿತಪಡಿಸುವಂತೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಬುಧವಾರ ಕೇಳಿಕೊಂಡರು.

ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಆಂಧ್ರಪ್ರದೇಶದಲ್ಲಿ ದಲಿತರಿಬ್ಬರ ವಿರುದ್ಧ ದೌರ್ಜನ್ಯವೆಸಗಲಾಗಿದ್ದು, ಅವರು ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಾರೆ. ದಲಿತರ ಕುರಿತು ಕೇವಲ ಸಹಾನುಭೂತಿ ತೋರಿಸಬೇಕಾಗಿಲ್ಲ, ಈ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವ ಅಗತ್ಯವಿದೆ ಎಂದು ತಾನು ಕೇಂದ್ರಕ್ಕೆ, ನಿರ್ದಿಷ್ಟವಾಗಿ ಪ್ರಧಾನಿಯವರಿಗೆ ಹೇಳಲು ಬಯಸುತ್ತೇನೆ ಎಂದರು.

ಮಂಗಳವಾರ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅಮಲಾಪುರಂ ಪಟ್ಟಣದಲ್ಲಿ ಕೃಷಿಕನೋರ್ವನಿಗೆ ಸೇರಿದ ದನವೊಂದು ವಿದ್ಯುದಾಘಾತದಿಂದ ಮೃತಪಟ್ಟಿತ್ತು. ಆತ ಅದನ್ನು ಹೂಳುವ ಮುನ್ನ ಚರ್ಮವನ್ನು ಸುಲಿಯಲು ಇಬ್ಬರು ದಲಿತ ಸೋದರರನ್ನು ತೊಡಗಿಸಿದ್ದ. ‘ಗೋರಕ್ಷಕರ ’ಗುಂಪೊಂದು ಅವರನ್ನು ಬರ್ಬರವಾಗಿ ಥಳಿಸಿತ್ತು.

ದಲಿತರ ಮೇಲಿನ ಹಲ್ಲೆಗಳ ಕುರಿತಂತೆ ಇತ್ತೀಚಿಗಷ್ಟೇ ತನ್ನ ವೌನ ಮುರಿದಿದ್ದ ಮೋದಿಯವರು,ಗೋರಕ್ಷಕರು ಸಮಾಜ ವಿರೋಧಿ ಶಕ್ತಿಗಳು ಎಂದು ಜರಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News