ಯುಪಿಎಸ್‌ಸಿ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ ಇಳಿಕೆಗೆ ಶಿಫಾರಸು

Update: 2016-08-11 15:10 GMT

ಹೊಸದಿಲ್ಲಿ, ಆ.11: ಭಾರತದ ಉನ್ನತ ನಾಗರಿಕ ಸೇವೆಗಳ ನೇಮಕಾತಿಗೆ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ಕಡಿಮೆಗೊಳಿಸುವಂತೆ ತಜ್ಞರ ಸಮಿತಿಯೊಂದು ಶಿಫಾರಸು ಮಾಡಿದೆ. ಅತ್ಯಂತ ಕಠಿಣವೆಂದು ಪರಿಗಣಿಸಲ್ಪಟ್ಟಿರುವ ಈ ಪರೀಕ್ಷೆಗಳನ್ನು ಆಯೋಜಿಸುವ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ)ಕ್ಕೆ ಮಾಜಿ ಶಿಕ್ಷಣ ಕಾರ್ಯದರ್ಶಿ ಬಿ.ಎಸ್.ಬಸ್ವಾನ್ ನೇತೃತ್ವ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ ಈ ಸಲಹೆಯನ್ನು ನೀಡಿದೆ.
    ಸಮಿತಿಯು ಸಲ್ಲಿಸಿರುವ ವರದಿಯನ್ನು ನಾಗರಿಕ ಸೇವಾ ಆಯೋಗವು ಮೊದಲಿಗೆ ಪರಿಶೀಲಿಸಲಿದೆ.ಆ ಬಳಿಕ ಯುಪಿಎಸ್‌ಸಿ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯಲ್ಲಿ ಇಳಿಕೆ ಮಾಡುವ ಬಗ್ಗೆ ಕೇಂದ್ರ ಸರಕಾರದ ಜೊತೆ ಆಯೋವು ಸಮಾಲೋಚನೆ ನಡೆಸಲಿದೆಯೆಂದು, ಅಧಿಕೃತ ಮೂಲಗಳು ತಿಳಿಸಿವೆ.
   
   ಭಾರತೀಯ ಆಡಳಿತ ಸೇವೆ (ಐಎಎಸ್), ವಿದೇಶಾಂಗ ಸೇವೆ (ಐಎಫ್‌ಎಸ್) ಹಾಗೂ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಸೇರಿದಂತೆ ಉನ್ನತ ನಾಗರಿಕ ಸೇವೆಗಳಿಗೆ ಅಧಿಕಾರಿಗಳ ನೇಮಿಸಲು ಯುಪಿಎಸ್‌ಸಿಯು, ಪ್ರಾಥಮಿಕ, ಮುಖ್ಯ ಹಾಗೂ ವೌಖಿಕ ಸಂರ್ಶನ ಎಂಬುದಾಗಿ ಮೂರು ಹಂತಗಳ ಪರೀಕ್ಷೆಯನ್ನು ಆಯೋಜಿಸುತ್ತದೆ. ಪ್ರಸ್ತುತ ನಾಗರಿಕ ಸೇವೆಗಳಿಗೆ ಸೇರ್ಪಡೆಗೊಳ್ಳಲು ಇರುವ ಗರಿಷ್ಠ ವಯೋಮಿತಿಯಲ್ಲಿ ಪರಿಶಿಷ್ಟ ಜಾತಿ/ ಪಂಗಡಗಳ ಅಭ್ಯರ್ಥಿಗಳಿಗೆ ಐದು ವರ್ಷಗಳ ಸಡಿಲಿಕೆ ನೀಡಲಾಗಿದ್ದರೆ, ಹಿಂದುಳಿದ ವರ್ಗಗಳಿಗೆ ಮೂರು ವರ್ಷಗಳ ವಿನಾಯಿತಿಯಿದೆ.ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ನೀಡಲಾಗಿದೆ. ಸರಕಾರವು ನಾಗರಿಕ ಸೇವೆಗಳ ನೇಮಕಾತಿಗೆ ಇರುವ ಗರಿಷ್ಠ ವಯೋಮಿತಿಯನ್ನು ಒಮ್ಮಿಂದೊಮ್ಮೆಗೆ ಇಳಿಸದೆ ಹಂತಹಂತವಾಗಿ ಜಾರಿಗೊಳಿಸಬೇಕೆಂದು ಸಮಿತಿಯುವರದಿಯಲ್ಲಿ ಶಿಫಾರಸು ಮಾಡಿದೆ.
ನಾಗರಿಕ ಸೇವಾ ಪರೀಕ್ಷೆಯ ಸಿದ್ಧತೆಗಾಗಿ ಹಲವಾರು ವರ್ಷಗಳನ್ನು ವ್ಯಯಿಸಿರುವವರನ್ನು ಗಮನದಲ್ಲಿಟ್ಟುಕೊಂಡು ಸಮಿತಿಯು ಈ ಸಲಹೆಯನ್ನು ನೀಡಿದೆ. ಒಂದು ವೇಳೆ ಗರಿಷ್ಠ ವಯೋಮಿತಿಯನ್ನು ಏಕಾಏಕಿಯಾಗಿ ಇಳಿಸಿದಲ್ಲಿ, ಈ ಅಭ್ಯರ್ಥಿಗಳ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುವುದನ್ನು ಗಮನದಲ್ಲಿಟ್ಟುಕೊಂಡು ಆಯೋಗವು ಹಂತಹಂತವಾಗಿ ಗರಿಷ್ಟ ವಯೋಮಿತಿಯನ್ನು ಇಳಿಸಬೇಕೆಂದು ಶಿಫಾರಸು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News