ದಲಿತ ಸಚಿವರಿಗೆ ಜಾತಿ ನಿಂದನೆ ಆಪ್‌ನಿಂದ ಪೊಲೀಸ್ ನಿಷ್ಕ್ರಿಯತೆ ಆರೋಪ

Update: 2016-08-11 15:30 GMT

ಹೊಸದಿಲ್ಲಿ,ಆ.11: ದಿಲ್ಲಿ ಮಹಾನಗರ ಪಾಲಿಕೆ(ಎಂಸಿಡಿ)ಯ ಅಧಿಕಾರಿಯಿಂದ ದಿಲ್ಲಿಯ ಸಮಾಜ ಕಲ್ಯಾಣ ಸಚಿವ ಸಂದೀಪ ಕುಮಾರ್ ಅವರ ಜಾತಿ ನಿಂದನೆ ಪ್ರಕರಣದಲ್ಲಿ ಪೊಲೀಸ್ ನಿಷ್ಕ್ರಿಯತೆಯನ್ನು ಗುರುವಾರ ಪ್ರಶ್ನಿಸಿದ ಆಮ್ ಆದ್ಮಿ ಪಕ್ಷ(ಆಪ್)ವು, ಬಿಜೆಪಿಯು ದಲಿತ ವಿರೋಧಿ ಪಕ್ಷ ಎನ್ನುವುದನ್ನು ಇದು ಸಾಬೀತುಗೊಳಿಸಿದೆ ಎಂದು ಹೇಳಿದೆ.
ಕುಮಾರ್ ಅವರು ಐದು ದಿನಗಳ ಹಿಂದೆ ಎಂಸಿಡಿ ಇಂಜಿನಿಯರ್ ವಿರುದ್ಧ ನೀಡಿದ್ದ ದೂರನ್ನು ಅಧಿಕಾರಿಗಳು ಬುಡಕ್ಕೆ ಹಾಕಿಕೊಂಡು ಕುಳಿತುಕೊಂಡುಬಿಟ್ಟಿದ್ದಾರೆ ಎಂದು ಹೇಳಿದ ಆಪ್‌ನ ದಿಲ್ಲಿ ಸಂಚಾಲಕ ದಿಲೀಪ್ ಪಾಂಡೆ ಅವರು, ಆಪ್ ನಾಯಕರೇನಾದರೂ ಇಂತಹ ಕೃತ್ಯವೆಸಗಿದ್ದರೆ ಪೊಲೀಸರು ಅವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುತ್ತಿದ್ದರು ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ದಲಿತರ ಮೇಲಿನ ಹಲ್ಲೆಗಳ ಕುರಿತಂತೆ ಮೊಸಳೆ ಕಣ್ಣೀರು ಸುರಿಸಿದ್ದಾರೆ. ಕುಮಾರ್ ವಿರುದ್ಧ ನಿಂದನೆಯನ್ನು ಮಾಡಿರುವ ಅಧಿಕಾರಿಗೂ ತಾನು ಅವಾಚ್ಯ ಶಬ್ದಗಳನ್ನು ಬಳಸಿದ್ದರೂ ಪಾರಾಗಬಲ್ಲೆ ಎನ್ನುವುದು ಗೊತ್ತಿದೆ ಎಂದು ಅವರು ಹೇಳಿದರು.
 ಬಿಜೆಪಿ ಆಡಳಿತದ ಎಂಸಿಡಿಗಳು ದಿಲ್ಲಿ ಸರಕಾರದ ವಿರುದ್ಧ ‘ಅಸಹಕಾರ ನಿರ್ಣಯ’ವನ್ನು ಅಂಗೀಕರಿಸಿವೆ ಎಂದೂ ಪಾಂಡೆ ಆರೋಪಿಸಿದರು.
ಜು.27ರಂದು ಸುಲ್ತಾನಪುರಿಯಲ್ಲಿ ನೈರ್ಮಲ್ಯ ಪರಿಶೀಲನೆ ವೇಳೆ ಇಂಜಿನಿಯರ್ ತನ್ನ ವಿರುದ್ಧ ಜಾತಿನಿಂದನೆ ಶಬ್ದ ಬಳಸಿದ್ದರು ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಅವಮಾನಕಾರಿ ರೀತಿಯಲ್ಲಿ ಉಲ್ಲೇಖಿಸಿದ್ದರು ಎಂದು ಕುಮಾರ್ ದೂರಿನಲ್ಲಿ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News