ತಾಯಿಯನ್ನು ಜೀವಂತ ಸುಟ್ಟ ಪ್ರಕರಣ; ನ್ಯಾಯ ದೊರಕಿಸಿಕೊಡುವಂತೆ ಸಿಎಂ ಅಖಿಲೇಶ್‌ಗೆ ರಕ್ತದಲ್ಲಿ ಪತ್ರ ಬರೆದ ಬಾಲಕಿ..!

Update: 2016-08-13 08:14 GMT

ಹೊಸದಿಲ್ಲಿ, ಆ.13: ಎರಡು ತಿಂಗಳ ಹಿಂದೆ ತಾಯಿಯನ್ನು ತನ್ನ ಕಣ್ಣೆದುರಿನಲ್ಲೇ ಸುಟ್ಟು ಹಾಕಿದ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡುವಂತೆ ಬುಲಾಂದ್‌ಶಹರ್‌ನ ಹದಿನೈದರ ಹರೆಯದ ಬಾಲಕಿಯೊಬ್ಬಳು ಉತ್ತರ ಪ್ರದೇಶದ ಮುಖ್ಯ ಮಂತ್ರಿ ಅಖಿಲೇಶ್ ಯಾದವ್‌ಗೆ ರಕ್ತದಲ್ಲಿ ಪತ್ರ ಬರೆದು ಆಗ್ರಹಿಸಿದ್ದಾಳೆ.
  ಅಪ್ರಾಪ್ತ ಯುವತಿ ಲತಿಕಾ ಬನ್ಸಾಲ್ ಅವರು ತನ್ನ ಅಜ್ಜಿ(ತಂದೆಯ ತಾಯಿ) ಇತರರ ಸಹಾಯದಿಂದ ತಾಯಿ ಅನು ಬನ್ಸಾಲ್‌ರನ್ನು ಜೀವಂತವಾಗಿ ಸುಟ್ಟು ಹಾಕಿರುವುದಾಗಿ ದೂರಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯ ಒದಗಿಸಿಕೊಡುವಂತೆ ಮುಖ್ಯ ಮಂತ್ರಿಗೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.
      ಜೂನ್ 11ರಂದು ರಾತ್ರಿ ಮನೆಗೆ ಅಜ್ಜಿ ಮತ್ತಿತರರು ಅಕ್ರಮವಾಗಿ ಪ್ರವೇಶಿಸಿ ಗಂಡು ಸಂತಾನಕ್ಕಾಗಿ ತನ್ನ ತಂದು ಇನ್ನೊಂದು ಮದುವೆಯಾಗಲಿದ್ದಾರೆ. ತಡೆಯಲು ಬಂದವರನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದರು. ಈ ಹಂತದಲ್ಲಿ ತಾಯಿ ಜೊತೆ ಮಾತಿನ ಚಕಮಕಿ ನಡೆಯಿತು. ಕೋಪದಿಂದ ಅಜ್ಜಿ ಇತರರ ಸಹಾಯದಿಂದ ಅಮ್ಮನಿಗೆ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದರು. ಅಮ್ಮ ಬೆಂಕಿಯಲ್ಲಿ ಉರಿಯುತ್ತಿರುವುದನ್ನು ನನಗೆ ಹಾಗೂ ತಂಗಿಗೆ ನೋಡಲು ಸಾಧ್ಯವಾಗಲಿಲ್ಲ. ನಾವು ಸಹಾಯಕ್ಕಾಗಿ ಕೂಗಿದರೂ ಪ್ರಯೋಜನವಾಗಲಿಲ್ಲ. ಪೊಲೀಸರ ಸಹಾಯಕ್ಕಾಗಿ 100ಕ್ಕೆ ಡಯಲ್ ಮಾಡಿದೆ. ಅದರೆ ಪ್ರಯೋಜನವಾಗಲಿಲ್ಲ. ಬಳಿಕ ಚಿಕ್ಕಪ್ಪನಿಗೆ ದೂರವಾಣಿ ಕರೆ ಮಾಡಿದ್ದೆ. ಶೇ 90ರಷ್ಟು ಸುಟ್ಟ ಗಾಯಗಳೊಂದಿಗೆ ಜೀವನ್ಮರಣದ ಹೋರಾಟದಲ್ಲಿದ್ದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ.
  ಹನ್ನೊಂದು ವರ್ಷಗಳ ಹಿಂದೆ ತಂಗಿ ಜನಿಸಿದ ಬೆನ್ನೆಲ್ಲೆ ಲತಿಕಾಳನ್ನು ತಾಯಿ ಅನು ಬನ್ಸಾಲ್‌ರನ್ನು ಮನೆಯಿಂದ ಹೊರಗಟ್ಟಲಾಗಿತ್ತು ಎಂದು ಲತಿಕಾ ಅಂದಿನ ಘಟನೆಯನ್ನು ವಿವರಿಸಿದ್ದಾಲೆ. ಆ ಬಳಿಕ ಪಕ್ಕದ ಬಾಡಿಗೆ ಮನೆಯಲ್ಲಿ ಅನು ಬನ್ಸಾಲ್ ತನ್ನ ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದರು.
ತಾಯಿ ಅನು ಬನ್ಸಾಲ್‌ರನ್ನು ಕೊಂದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮತ್ತು ಅಧಿಕಾರಿಗಳಿಗೆ ಪತ್ರ ಬರೆದರೂ ಪ್ರಯೋಜನವಾಗಲಿಲ್ಲ. ಈ ಕಾರಣದಿಂದಾಗಿ ಮುಖ್ಯ ಮಂತ್ರಿಗೆ ಪತ್ರ ಬರೆದಿರುವುದಾಗಿ ಲತಿಕಾ ಬನ್ಸಾಲ್ ಮಾಹಿತಿ ನೀಡಿದ್ದಾಳೆ.
 ಆರಂಭದಲ್ಲಿ ಅನು ಬನ್ಸಾಲ್ ಮೃತಪಟ್ಟ ಘಟನೆಯನ್ನು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೆಂದು ಪರಿಗಣಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿ ಕೈತೊಳೆದುಕೊಂಡಿದ್ದರು. ಇದೀಗ ಲತಿಕಾ ಮುಖ್ಯ ಮಂತ್ರಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಬನ್ಸಾಲ್ ಕೊಲೆ ಪ್ರಕರಣದ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬೀಳುವಂತಾಗಿದೆ. ಪ್ರಕರಣ ತನಿಖೆಗೆ ಮರುಜೀವ ಬಂದಂತಾಗಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News