6 ತಿಂಗಳ ಕಾಯುವಿಕೆ ಅವಧಿಯಿಲ್ಲದೆಯೇ ಸುಪ್ರೀಂಕೋರ್ಟ್‌ನಿಂದ ದಂಪತಿಗೆ ವಿಚ್ಛೇದನ ಮಂಜೂರು

Update: 2016-08-14 12:55 GMT

ಹೊಸದಿಲ್ಲಿ, ಆ.14: 'ಸಂಪೂರ್ಣ ನ್ಯಾಯ' ಒದಗಿಸುವ ಸಾಂವಿಧಾನಿಕ ಅಧಿಕಾರವನ್ನು ಚಲಾಯಿಸಿದ ಸುಪ್ರೀಂ ಕೋರ್ಟ್, 6 ತಿಂಗಳ ಕಾಯುವಿಕೆಯ ಅವಧಿಯನ್ನು ಮನ್ನಾ ಮಾಡಿ, ದೂರಾಗಿದ್ದ ದಂಪತಿಯೊಂದಕ್ಕೆ ಪರಸ್ಪರ ಸಮ್ಮತಿಯ ವಿಚ್ಛೇದನಕ್ಕೆ ಅನುಮತಿ ನೀಡಿದೆ.

ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಹಾಗೂ ರೊಹಿಂಗ್ಟನ್ ಫಾಲಿ ನಾರಿಮನ್‌ರನ್ನೊಳಗೊಂಡ ಪೀಠವೊಂದು, ದಂಪತಿಯ ಹಲವು ವರ್ಷಗಳ ವ್ಯಾಜ್ಯ, ಮದುವೆಯಾದ ಕೆಲವೇ ದಿನಗಳಲ್ಲಿ ಬೇರ್ಪಟ್ಟುದು ಹಾಗೂ ಇಬ್ಬರೂ ಜೀವನದಲ್ಲಿ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿರುವುದನ್ನು ಪರಿಗಣಿಸಿ ಈ ಪರಿಹಾರವನ್ನು ಮಂಜೂರು ಮಾಡಿದೆ. ತಮ್ಮ ತಮ್ಮ ಜೀವನವನ್ನು ಪ್ರತ್ಯೇಕವಾಗಿ ಮುಂದುವರಿಸುವ ಎರಡೂ ಪಕ್ಷಗಳ ಹೇಳಿಕೆಗಳನ್ನು ಗಣನೆಗೆ ತೆಗೆದುಕೊಂಡ ನ್ಯಾಯಪೀಠ, ಭಾರತದ ಸಂವಿಧಾನದ 142ನೆ ಪರಿಚ್ಛೇದದನ್ವಯ ತಮ್ಮ ನ್ಯಾಯಾಂಗ ಅಧಿಕಾರವನ್ನು ಚಲಾಯಿಸಲು ಇದು ಅರ್ಹ ಪ್ರಕರಣವೆಂದು ಅಭಿಪ್ರಾಯಿಸಿ, ದಂಪತಿಗೆ ಕಾಯುವಿಕೆಯ ಅವಧಿ ಮನ್ನಾ ಮಾಡಿ ಪರಸ್ಪರ ಸಮ್ಮತಿಯ ವಿಚ್ಛೇದನಕ್ಕೆ ಅನುಮತಿ ನೀಡಿದೆ.

ಅವರಿಬ್ಬರೂ ತಮ್ಮ ನಡುವಿನ ವಿವಾದ ಹಾಗೂ ಹಣಕಾಸಿನ ವಿಷಯಗಳನ್ನು ಸೌಹಾರ್ದವಾಗಿಯೇ ಬಗೆಹರಿಸಿಕೊಂಡಿರುವುದರಿಂದ ನ್ಯಾಯದ ಹಿತಾಸಕ್ತಿ ರಕ್ಷಿಸಲ್ಪಡಲಿದೆಯೆಂದು ಅಭಿಪ್ರಾಯಿಸಿದ ಪೀಠ, ಅವರಿಬ್ಬರೂ ಪರಸ್ಪರರ ಮೇಲೆ ದಾಖಲಿಸಿದ್ದ ಇತರ ಕ್ರಿಮಿನಲ್ ಖಟ್ಲೆಗಳನ್ನು ರದ್ದುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News