ಅನಾರೋಗ್ಯ ಪೀಡಿತಳನ್ನು ಆಸ್ಪತ್ರೆಗೆ ಸೇರಿಸಲು ಪೊಲೀಸರು ಬರಬೇಕಾಯಿತು !

Update: 2016-08-15 12:07 GMT

  ಕೊಲ್ಲಂ,ಆ.15: ತಲೆನೋವು ತಡೆಯಲಾಗದೆ ಕಿರುಚುತ್ತಿದ್ದ ಬಾಲಕಿಯೊಬ್ಬಳನ್ನು ವೈದ್ಯರಿಗೆ ತೋರಿಸದೆ ಪ್ರಾರ್ಥನಾ ಕೇಂದ್ರಕ್ಕೆ ಸೇರಿಸಿದ್ದ ಕುರಿತು ಸ್ಥಳೀಯರು ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ರೋಗಿ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಕೊಲ್ಲಂನಿಂದ ವರದಿಯಾಗಿದೆ. ಕೊಲ್ಲಂ ಸಮೀಪದ ಚಿನ್ನಕ್ಕಾಡ್ ಜಿಲ್ಲಾ ಸಹಕಾರಿ ಬ್ಯಾಂಕ್ ಬಳಿಯಲ್ಲಿ ನಡೆಸಲಾಗುತ್ತಿದ್ದ ಪ್ರಾರ್ಥನಾ ಕೇಂದ್ರದಲ್ಲಿ ಹದಿನಾಲ್ಕು ವರ್ಷ ವಯಸ್ಸಿನ ಬಾಲಕಿಯೊಬ್ಬಳು ತಲೆನೋವು ತಡೆಯಲಾಗದೆ ಕಿರುಚುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಂತರ, ಪೊಲೀಸರು ಮತ್ತು ಚೈಲ್ಡ್ ಲೈನ್ ಕಾರ್ಯಕರ್ತರು ಸ್ಥಳಕ್ಕೆ ಬಂದು ಬಾಲಕಿಯನ್ನು ಪ್ರಾರ್ಥನಾ ಕೇಂದ್ರದಿಂದ ಬಿಡುಗಡೆಗೊಳಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

  ಪಟ್ಟತ್ತಾನಂನ ವ್ಯಕ್ತಿಯೊಬ್ಬರು ಪ್ರಾರ್ಥನಾ ಕೇಂದ್ರ ನಡೆಸುತ್ತಿದ್ದು, ಪ್ರಾರ್ಥನೆ ಮೂಲಕ ರೋಗಶಮನಕ್ಕೆ ಗುರಿಪಡಿಸಿದ ಬಾಲಕಿ ಈತನ ಸಹೋದರನ ಪುತ್ರಿಯಾಗಿದ್ದು, ಅವಳನ್ನು ಪ್ರಾರ್ಥನಾ ಕೇಂದ್ರದಿಂದ ಬಿಡುಗಡೆಗೊಳಿಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಮೊನ್ನೆ ರಾತ್ರಿಯಿಂದ ಬಾಲಕಿ ತಲೆನೋವು, ಸಹಿಸಲಾರದೆ ಪ್ರಾರ್ಥನಾ ಕೇಂದ್ರದಲ್ಲಿ ಬೊಬ್ಬೆ ಹೊಡೆಯುತ್ತಿದ್ದಳು ಎಂದು ಊರವರು ಹೇಳಿದ್ದಾರೆ. ಬಾಲಕಿ ಯಾಕೆ ಬೊಬ್ಬೆ ಹೊಡೆದಿದ್ದಾಳೆ ಎಂದು ವಿಚಾರಿಸಿದಾಗ ಅವಳಿಗೆ ತಲೆನೋವು ಪ್ರಾರ್ಥನೆಯ ಮೂಲಕ ಅದು ವಾಸಿಯಾಗಲಿದೆ ಎಂದು ಅವರಿಗೆಹೇಳಲಾಗಿತ್ತು.

ರವಿವಾರ ಬೆಳಗ್ಗೆಯೂ ಬಾಲಕಿಯ ಆಕ್ರಂದನ ಮುಂದುವರಿದಾಗ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಆನಂತರ ಚೈಲ್ಡ್ ಹೆಲ್ಫ್ ಲೈನ್ ಕಾರ್ಯಕರ್ತರು ಹಾಗೂ ಪೊಲೀಸರು ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಇಲ್ಲಿ ಪ್ರಾರ್ಥನಾ ಕೇಂದ್ರ ನಡೆಸುತ್ತಿರುವ ವ್ಯಕ್ತಿ ಮತ್ತು ಬಾಲಕಿಯ ತಂದೆ,ತಾಯಿ ತಮಿಳ್ನಾಡಿನವರು ಎಂದು ತಿಳಿದು ಬಂದಿದೆ.

ನಾಲ್ಕು ವರ್ಷಗಳ ಹಿಂದೆ ಡೆಂಟಲ್ ಕ್ಲಿನಿಕ್ ತೆರೆಯಲು ಇಲ್ಲಿನ ಮನೆಯೊಂದನ್ನು ಬಾಡಿಗೆ ಪಡೆಯಲಾಗಿತ್ತು. ತಿಂಗಳಾಗುವುದರೊಳಗೆ ಅದು ಪ್ರಾರ್ಥನಾ ಕೇಂದ್ರವಾಗಿ ಪರಿವರ್ತನೆಯಾಯಿತೆಂದು ಸ್ಥಳೀಯರು ಹೇಳುತ್ತಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News