ಕೆಎಫ್‌ಸಿ ಆಹಾರ ಸೇವಿಸದಂತೆ ಬರೇಲಿಯ ಮುಸ್ಲಿಂ ವಿದ್ವಾಂಸರ ಸೂಚನೆ

Update: 2016-08-15 18:16 GMT

ಆಗ್ರಾ,ಆ.15 : ಕೆಎಫ್‌ಸಿ ರೆಸ್ಟೋರೆಂಟ್‌ನಲ್ಲಿ ಗ್ರಾಹಕರಿಗೆ ಒದಗಿಸುವ ಮಾಂಸ ‘ಹಲಾಲ್’ ಆಗಿಲ್ಲದೇ ಇರುವುದರಿಂದ ಮುಸ್ಲಿಮರು ಅದನ್ನು ಸೇವಿಸಬಾರದೆಂದು ಬರೇಲಿಯ ಪ್ರಮುಖ ‘ದರ್ಗಾಇ ಆಲಾ ಹಝ್ರತ್’ ಸೂಚನೆ ನೀಡಿದೆ. ಈ ಮಾಂಸವು ಅಶುದ್ಧಿಯಿಂದ ಕೂಡಿದ್ದು ‘ಹಲಾಲ್’ ಆಗಿಲ್ಲ ಎಂದು ಅದು ಹೇಳಿದೆ. ಅಂತೆಯೇ ಹಲಾಲ್ ನಿಯಮಗಳನ್ನು ಪಾಲಿಸದ ದೇಶದ ಎಲ್ಲಾ ಮಾಂಸಾಹಾರ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವಿಸುವ ಮುಸ್ಲಿಮರಿಗೂ ಈ ಸೂಚನೆ ಅನ್ವಯಿಸುತ್ತದೆಯೆಂದು ದರ್ಗಾದ ವಕ್ತಾರ ಮುಫ್ತಿ ಸಲೀಂ ನೂರಿ ಹೇಳಿದ್ದಾರೆ.
ಬರೇಲಿಯ ಕೆಎಫ್‌ಸಿಯಲ್ಲಿ ಒದಗಿಸಲಾಗುವ ಮಾಂಸ ‘ಹಲಾಲ್’ ಅಗಿಲ್ಲವೆಂದು ಹಲವರು ತಮಗೆ ದೂರಿದ್ದಾರೆ ಎಂದು ನೂರಿ ತಿಳಿಸಿದ್ದಾರೆ. ತಮ್ಮ ದರ್ಗಾದ ತಂಡವೊಂದು ಕೆಎಫ್‌ಸಿ ರೆಸ್ಟೋರೆಂಟ್‌ಗೆ ತೆರಳಿದಾಗ ಅಲ್ಲಿನ ಅಧಿಕಾರಿಗಳು ತಮಗೆ ಮುಂಬೈನ ಮುಫ್ತಿಯೊಬ್ಬರು ನೀಡಿದ ಪ್ರಮಾಣಪತ್ರ ತೋರಿಸಿದ್ದರು. ಆದರೆ ದರ್ಗಾ ತಂಡ ಆ ಮುಫ್ತಿಯನ್ನು ಸಂಪರ್ಕಿಸಿದಾಗ ತಾನು ಮಾಂಸಾಹಾರ ಒದಗಿಸುವ ಸಂಸ್ಥೆಯೊಂದಕ್ಕೆ ಕೆಲ ವರ್ಷಗಳ ಹಿಂದೆ ಪ್ರಮಾಣಪತ್ರ ನೀಡಿದ್ದಾಗಿ ಹೇಳಿದ್ದರು. ದರ್ಗಾದ ತಂಡ ಆ ಸಂಸ್ಥೆಯನ್ನು ಸಂಪರ್ಕಿಸಿದಾಗ ತಾವು ಕೆಎಫ್‌ಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಅದು ಮೂರು ವರ್ಷಗಳ ಹಿಂದೆ ಅಂತ್ಯಗೊಂಡಿತ್ತೆಂದು ತಿಳಿಸಿತ್ತು. ಈ ಕಾರಣದಿಂದ ಕೆಎಫ್‌ಸಿ ತೋರಿಸಿದ್ದ ಪ್ರಮಾಣಪತ್ರ ಹಳೆಯದ್ದು ಹಾಗೂ ಊರ್ಜಿತದಲ್ಲಿಲ್ಲವೆಂದು ತಿಳಿಯುತ್ತದೆ ಹಾಗೂ ಅಲ್ಲಿ ಒದಗಿಸಲಾಗುವ ಮಾಂಸ ಹಲಾಲ್ ಅಲ್ಲ ಎಂದು ತಿಳಿಯುತ್ತದೆ’’ ಎಂದು ನೂರಿ ಹೇಳಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News