ಗುಜರಾತ್: ದಲಿತರ ಮೇಲೆ ದಾಳಿ ಪ್ರತಿಭಟಿಸಿ ಹೆದ್ದಾರಿ ಬಂದ್

Update: 2016-08-16 03:22 GMT

ಉನಾ, ಆ.16: ದಲಿತ ಅಸ್ಮಿತ ಯಾತ್ರೆ ಮುಗಿಸಿ ವಾಪಸ್ಸಾಗುತ್ತಿದ್ದ 11 ಮಂದಿ ದಲಿತರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ದಲಿತ ಸಂಘಟನೆಗಳು ಸೋಮವಾರ ಹೆದ್ದಾರಿ ತಡೆ ನಡೆಸಿದವು. ಹಸುಗಳ ಶವಗಳನ್ನು ಇನ್ನೆಂದೂ ಮುಟ್ಟುವುದಿಲ್ಲ ಎಂದು ಸಮಾವೇಶ ಪ್ರತಿಜ್ಞೆ ಕೈಗೊಳ್ಳುವ ಜತೆಗೆ, ಪರ್ಯಾಯ ಜೀವನಾಧಾರ ಕಲ್ಪಿಸುವಂತೆ ರುಪಾನಿ ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸಿದೆ. ಇಲ್ಲದಿದ್ದರೆ ದೊಡ್ಡ ಪ್ರಮಾಣದ ರೈಲು ತಡೆ ಚಳವಳಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿವೆ.

ದಲಿತ ಆಸ್ಮಿತ ಯಾತ್ರೆ ಮುಗಿಸಿ ಹೋಗುತ್ತಿದ್ದಾಗ ಸಮಟೆರ್ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ನಡೆದಿದೆ ಮತ್ತು ಮೂರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ದಲಿತ ಹೋರಾಟಗಾರ ಮಾವಜಿ ಸರ್ವಯ್ಯ ಹೇಳಿದ್ದಾರೆ. ಉನಾದಲ್ಲಿ ಸತ್ತ ಹಸುವಿನ ಚರ್ಮ ಸುಲಿಯುತ್ತಿದ್ದ ನಾಲ್ವರು ದಲಿತರ ವಿರುದ್ಧ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅತಿಹೆಚ್ಚು ಮಂದಿಯನ್ನು ಈ ಗ್ರಾಮದಿಂದ ಬಂಧಿಸಲಾಗಿದೆ. ದಲಿತ ರ್ಯಾಲಿಯಿಂದ ವಾಪಸ್ಸಾಗುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ, ಕೆಲ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಉನಾ ಘಟನೆ ದಲಿತರ ಸ್ವಾಭಿಮಾನವನ್ನು ಬಡಿದೆಬ್ಬಿಸಿದ್ದು, ಆತ್ಮಗೌರವ ರಕ್ಷಣೆಗಾಗಿ ಗ್ರಾಮಮಟ್ಟದಿಂದ ಸಂಘಟನೆ ಬಲಗೊಳಿಸಲು ನಿರ್ಧರಿಸಿದ್ದಾರೆ. ಸಮಟೆರ್ ಘಟನೆಗೆ ದಿಢೀರ್ ಆಗಿ ಸ್ಪಂದಿಸಿದ ದಲಿತರು ವಿವಿಧೆಡೆ ಹೆದ್ದಾರಿ ತಡೆ ತಡೆಸಿ, ಪ್ರತಿರೋಧ ವ್ಯಕ್ತಪಡಿಸಿದರು. ಹೋರಾಟದಿಂದ ಉದಯಿಸಿದ ಹೊಸ ತಾರೆ ಜಿಗ್ನೇಶ್ ಮೇವಾನಿ ಈ ಮಧ್ಯೆ ಹೇಳಿಕೆ ನೀಡಿ, ರಾಜ್ಯದಲ್ಲಿ ಪ್ರತಿ ದಲಿತ ಕುಟುಂಬಗಳಿಗೆ ಐದು ಎಕರೆ ಭೂಮಿ ನೀಡುವಂತೆ ಆಗ್ರಹಿಸಿದ್ದಾರೆ. ದನದ ಬಾಲ ನೀವೇ ತೆಗೆದುಕೊಳ್ಳಿ. ನಮಗೆ ಭೂಮಿ ಕೊಡಿ ಎಂದು ಪ್ರತಿಭಟನಾಕಾರರು ಹಕ್ಕೊತ್ತಾಯ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News