ಬ್ಯಾಂಕ್‌ಗಳ ಉನ್ನತ ನೇಮಕಾತಿಗಳಲ್ಲಿ ಸರಕಾರದ ಪಾತ್ರ ಬೇಡ

Update: 2016-08-16 17:19 GMT

ಮುಂಬೈ, ಆ.16: ಸಾರ್ವಜನಿಕ ವಲಯ ಬ್ಯಾಂಕ್‌ಗಳ ಉನ್ನತ ಮಟ್ಟದ ನೇಮಕಾತಿಗಳಲ್ಲಿ ಸರಕಾರದ ಪಾತ್ರವನ್ನು ಇಲ್ಲವಾಗಿಸುವ ಕುರಿತು ಪ್ರಬಲ ಪ್ರತಿಪಾದನೆ ಮಾಡಿರುವ ಆರ್‌ಬಿಐ ಗವರ್ನರ್ ರಘುರಾಮ ರಾಜನ್, ‘ಹಲವು ಕ್ಷೇತ್ರಗಳನ್ನು ಸಂತುಷ್ಟಿಗೊಳಿಸುವ’ ಅಗತ್ಯವಿಲ್ಲದೆಯೇ, ಮುಕ್ತವಾಗಿ ಎಲ್ಲ ಆಡಳಿತ ಸಂಬಂಧಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಂತೆ ಅವುಗಳ ಆಡಳಿತ ಮಂಡಳಿಯನ್ನು ಬಲಪಡಿಸಬೇಕೆಂದು ಮಂಗಳವಾರ ಸಲಹೆ ನೀಡಿದ್ದಾರೆ.

ಆರ್‌ಬಿಐ ಸೇರಿದಂತೆ ಸಾರ್ವಜನಿಕ ವಲಯ ಬ್ಯಾಂಕ್‌ಗಳ ಸರಕಾರಿ ಹಾಗೂ ನಿಯಂತ್ರಣ ಮೇಲ್ವಿಚಾರಕರ ಭಾರೀ ಕಡಿತವಾಗಬೇಕೆಂದು ಸಲಹೆ ನೀಡಿರುವ ನಿರ್ಗಮನ ಗವರ್ನರ್, ಅವುಗಳ ಆಡಳಿತ ಮಂಡಳಿಗಳಿಂದ ಕೇಂದ್ರೀಯ ಬ್ಯಾಂಕ್‌ನ ನಾಮ ನಿರ್ದೇಶಿತರನ್ನೂ ಹಿಂದೆಗೆಯುವ ಪ್ರಸ್ತಾವವನ್ನೂ ಮಾಡಿದ್ದಾರೆ.
ಇಂದು, ಸಂಸತ್ತು, ವಿತ್ತೀಯ ಸೇವಾ ಇಲಾಖೆ, ಬ್ಯಾಂಕ್ ಬೋರ್ಡ್ ಬ್ಯೂರೊ, ಬ್ಯಾಂಕ್ ಆಡಳಿತ ಮಂಡಳಿ, ಜಾಗೃತ ಅಧಿಕಾರಿಗಳು ಹಾಗೂ ಬಹುಶಃ ಆರ್‌ಬಿಐ ಸಹಿತ ಹಲವು ನಿಯಂತ್ರಿಕರು ಹಾಗೂ ಮೇಲ್ವಿಚಾರಕರು ಸಾರ್ವಜನಿಕ ವಲಯ ಬ್ಯಾಂಕ್‌ಗಳ ಸಾಧನೆಯ ಮೇಲೆ ನಿಗಾ ಇರಿಸುತ್ತಿದ್ದಾರೆ. ಇಷ್ಟು ಸಂಸ್ಥೆಗಳನ್ನು ತೃಪ್ತಿಗೊಳಿಸುವ ಅಗತ್ಯವಿರುವಾಗ, ಬ್ಯಾಂಕ್ ಆಡಳಿತಕ್ಕೆ ಬ್ಯಾಂಕಿನ ಆಡಳಿತ ನಡೆಸಲು ಸಮಯ ದೊರೆಯುತ್ತಿರುವುದು ಆಶ್ವರ್ಯದ ವಿಷಯವೆಂದು ರಘುರಾಮ ರಾಜನ್ ಹೇಳಿದ್ದಾರೆ.
ಸಾರ್ವಜನಿಕ ವಲಯ ಬ್ಯಾಂಕರ್‌ಗಳ ವೇತನ ಮಟ್ಟದಲ್ಲಿರುವ ಅಗಾಧ ಅಸಮತೋಲನವನ್ನು ಒಂದೇ ಮಟ್ಟಕ್ಕೆ ತರಬೇಕು. ಈಗಿನಂತೆ ಉನ್ನತ ಹುದ್ದೆಯವರಿಗೆ ಕಡಿಮೆ ಹಾಗೂ ಕೆಳ ಹಂತದವರಿಗೆ ಹೆಚ್ಚು ವೇತನ ನಿಡುವುದನ್ನು ನಿವಾರಿಸಿ ಉನ್ನತ ಆಡಳಿತಕ್ಕೆ ಹೆಚ್ಚು ವೇತನ ನೀಡಬೇಕು. ಇಲ್ಲದಿದ್ದಲ್ಲಿ ಉನ್ನತ ಹುದ್ದೆಗಳಿಗೆ ಪ್ರತಿಭಾವಂತರನ್ನು ಆಕರ್ಷಿಸುವುದು ಕಷ್ಟವಾಗಬಹುದೆಂದು ಅವರು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News