ಭಾರತ ಅಲಿಪ್ತ ನೀತಿಗೆ ವಿದಾಯ ಹೇಳಲಿದೆಯೇ?

Update: 2016-08-18 09:13 GMT

ಹೊಸದಿಲ್ಲಿ: ದೇಶದ ವಿದೇಶಾಂಗ ನೀತಿ ಬದಲಾಗುತ್ತಿದೆ ಎಂಬ ಊಹಾಪೋಹಗಳ ನಡುವೆಯೇ ಮುಂದಿನ ತಿಂಗಳು ವೆನಿಜುವೆಲಾದಲ್ಲಿ ನಡೆಯಲಿರುವ ಅಲಿಪ್ತ ರಾಷ್ಟ್ರಗಳ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿಲ್ಲ ಎಂಬ ಸೂಚನೆಗಳು ದೊರೆತಿವೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.  

  ಒಂದು ವೇಳೆ  ಮೋದಿ ಸಮಾವೇಶದಲ್ಲಿ ಭಾಗವಹಿಸದೆ ಇದ್ದಲ್ಲಿ ಅವರು ನ್ಯಾಮ್‌ ಸಮಾವೇಶದಲ್ಲಿ ಭಾಗವಹಿಸದ ಎರಡನೇ ಪ್ರಧಾನಿಯಾಗುತ್ತಾರೆ. 1979ರಲ್ಲಿ ಉಸ್ತುವಾರಿ ಪ್ರಧಾನಿಯಾಗಿದ್ದ ಚರಣ್‌ ಸಿಂಗ್‌ ಅವರು ಹವಾನಾದಲ್ಲಿ ನಡೆದಿದ್ದ ಸಮಾವೇಶಕ್ಕೆ ಹೋಗಿರಲಿಲ್ಲ. ಆದರೆ, ಪ್ರಸಕ್ತ ಅಮೆರಿಕ ವಿರೋಧಿ ವೇದಿಕೆಗಳಿಂದ ದೂರ ಇರಲು ಭಾರತ ನಿರ್ಧರಿಸಿದೆ ಎಂಬ ಸೂಚನೆಗಳಿವೆ ಎಂದು ವರದಿಯಾಗಿದೆ.

  ನ್ಯಾಮ್‌ ಸಮಾವೇಶ ಕಳೆದ ವರ್ಷವೇ ನಡೆಯಬೇಕಾಗಿತ್ತು. ಆದರೆ ವೆನಿಜುವೆಲಾ ಇದಕ್ಕೆ ಸಿದ್ಧತೆ ಮಾಡಿಕೊಳ್ಳದೇ  ಇರುವುದರಿಂದ ಈ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ವೆನಿಜುವೆಲಾದ ಮಾರ್ಗರಿಟಾ ದ್ವೀಪದಲ್ಲಿ ಇದೇ ಸೆಪ್ಟಂಬರ್‌ 17, 18ರಂದು ನಡೆಯಲಿರುವ 17ನೆ ನ್ಯಾಮ್‌ ಸಮಾವೇಶವು,  ಮೋದಿ ಪ್ರಧಾನಿಯಾದ ನಂತರ ನಡೆಯುತ್ತಿರುವ ಮೊದಲ ಸಭೆಯಾಗಿದೆ. ಮೋದಿ ಈ ಸಮಾವೇಶದಲ್ಲಿ ಭಾಗವಹಿಸಿದ್ದೇ ಆದಲ್ಲಿ ಸಭೆಯ ಘನತೆ ಹೆಚ್ಚುತ್ತದೆ ಎಂಬ ನಿರೀಕ್ಷೆಯೂ ಇದೆ.

   ಹಾಗೆಯೇ, ಭಾರತ ಸಂಪೂರ್ಣವಾಗಿ ಈ ಸಮಾವೇಶವನ್ನು ತಿಸ್ಕರಿಸುವ ಸಾಧ್ಯತೆಗಳೇನೂ ಇಲ್ಲ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಇಲ್ಲವೇ ಉಪರಾಷ್ಟ್ರಪತಿ ಹಾಮಿದ್‌ ಅನ್ಸಾರಿ ಅವರನ್ನು ಸರಕಾರ ಕಳುಹಿಸಿಕೊಡುವ ಸಾಧ್ಯತೆಗಳಿವೆ. ಹಿಂದಿನ ಎನ್‌ಡಿಎ ಸರಕಾರವಿದ್ದಾಗ 1998ರಲ್ಲಿ ಡರ್ಬಾನ್‌ ಮತ್ತು 2003ರಲ್ಲಿ ಕೌಲಲಂಪುರದಲ್ಲಿ ನಡೆದ ಎರಡೂ ಸಮಾವೇಶಗಳಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಭಾಗವಹಿಸಿದ್ದರು. ಹಾಗಾಗಿ ಇದು ಈಗ ಬದಲಾಗಿರುವ ಎನ್‌ಡಿಎ ನೀತಿ ಎಂದು ವ್ಯಾಖ್ಯಾನಿಸಲಾಗುತ್ತಿದೆ.

   ವೆನಿಜುವೆಲಾ ಈಗಲೂ ಅಮೆರಿಕದ ನಿರ್ಬಂಧಗಳಿಗೆ ಒಳಗಾಗಿದೆ, ಅಮೆರಿಕ ವೆನಿಜುವೆಲಾವನ್ನು ತನ್ನ ಭದ್ರತೆಗೆ ಆಪಾಯಕಾರಿ ದೇಶ ಎಂದೇ ಭಾವಿಸಿದೆ. ಹೀಗಾಗಿ ಇಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಿ ಅಮೆರಿಕಕ್ಕೆ ಮುಜುಗರವಾಗುವಂತೆ ನಡೆದುಕೊಳ್ಳುವುದು ಬೇಡ ಬೇಡ ಎನ್ನುವುದು ಮೋದಿ ಕಾರ್ಯತಂತ್ರವಾಗಿರಬಹುದು ಎನ್ನುವುದು ವಿಶ್ಲೇಷಣೆ. ವಿಶ್ವವೇ ತಿರುಗಿ ನೋಡುವಂತೆ ಮಾಡಿದ ನೆಹರೂ ಕಾಲದ ಬಹು ಜನಪ್ರಿಯ ಅಂತಾರಾಷ್ಟ್ರೀಯ ನಡೆಯನ್ನು ನಗಣ್ಯಗೊಳಿಸುವ ತಂತ್ರವೂ ಇದರಲ್ಲಿರುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News