ಸೆ.2ರ ಮುಷ್ಕರದಲ್ಲಿ ಭಾಗಿಯಾಗಲು ಬ್ಯಾಂಕ್ ಯೂನಿಯನ್‌ಗಳ ನಿರ್ಧಾರ

Update: 2016-08-18 14:52 GMT

ವಡೋದರಾ,ಆ.18: ಮೋದಿ ಸರಕಾರದ ‘ಜನವಿರೋಧಿ ನೀತಿಗಳು’ ಮತ್ತು ಏಕಪಕ್ಷೀಯ ಕಾರ್ಮಿಕ ಸುಧಾರಣೆಗಳನ್ನು ವಿರೋಧಿಸಿ ಕಾರ್ಮಿಕ ಒಕ್ಕೂಟಗಳು ಕರೆ ನೀಡಿರುವ ಸೆ.2ರ ಮುಷ್ಕರದಲ್ಲಿ ಸುಮಾರು ಐದು ಲಕ್ಷ ಬ್ಯಾಂಕ್ ಯೂನಿಯನ್‌ಗಳ ಸದಸ್ಯರು ಮತ್ತು ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಬ್ಯಾಂಕಿಂಗ್ ಉದ್ಯಮದ ಮೇಲೆ ದಬ್ಬಾಳಿಕೆ ಹೆಚ್ಚುತ್ತಿದೆ ಮತ್ತು ಸರಕಾರವು ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಸರಕಾರಿ ಸ್ವಾಮ್ಯದ ಬಾಂಕುಗಳ ಖಾಸಗೀಕರಣಕ್ಕೆ ಮತ್ತು ಸಹವರ್ತಿ ಬ್ಯಾಂಕುಗಳನ್ನು ಎಸ್‌ಬಿಐ ಜೊತೆಗೆ ವಿಲೀನಗೊಳಿಸಲು ಅದು ಪ್ರಯತ್ನಿಸುತ್ತಿದೆ. ಕೆಟ್ಟ ಸಾಲಗಳ ಹೆಸರಿನಲ್ಲಿ ಸಾರ್ವಜನಿಕ ಹಣವನ್ನೂ ಅದು ಲೂಟಿ ಮಾಡುತ್ತಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಅವರು ಗುರುವಾರ ಇಲ್ಲಿ ಆಪಾದಿಸಿದರು.
ಇವೆಲ್ಲವುಗಳನ್ನು ಪ್ರತಿಭಟಿಸಲು ಇತರ ಕಾರ್ಮಿಕ ಒಕ್ಕೂಟಗಳು ಸೆ.2ರಂದು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ನಾವೂ ಭಾಗಿಯಾಗುತ್ತಿದ್ದೇವೆ ಎಂದರು.
ಆರೆಸ್ಸೆಸ್ ಬೆಂಬಲಿತ ಭಾರತೀಯ ಮಜದೂರ್ ಸಂಘ(ಬಿಎಂಎಸ್)ವು ಮುಷ್ಕರದಲ್ಲಿ ಭಾಗಿಯಾಗದಿರಲು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News