ಬಿಜೆಪಿ ಇತರ ಪಕ್ಷಗಳಿಗಿಂತ ಹೆಚ್ಚು ತ್ಯಾಗ ಮಾಡಿದೆ: ಮೋದಿ

Update: 2016-08-18 18:30 GMT

ಹೊಸದಿಲ್ಲಿ, ಆ.18: ಬ್ರಿಟಿಷರ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಎದುರಿಸಿದ್ದಕ್ಕಿಂತ ಕಠಿಣ ಪರಿಸ್ಥಿತಿಯನ್ನು ಸ್ವತಂತ್ರ ಭಾರತದಲ್ಲಿ ಬಿಜೆಪಿ ಎದುರಿಸಿದೆ. ಬಿಜೆಪಿಯ ಪ್ರತಿ ಪ್ರಯತ್ನವನ್ನೂ ಕೆಟ್ಟ ಅರ್ಥದಲ್ಲಿ ಬಿಂಬಿಸಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ.

ಬಿಜೆಪಿ ಇತರ ಯಾವುದೇ ಪಕ್ಷಕ್ಕಿಂತ ಹೆಚ್ಚು ತ್ಯಾಗ ಮಾಡಿದೆ. ದೇಶದ ಬಲವರ್ಧನೆಯಾದಂತೆಲ್ಲ ವಿಭಜಕ ಶಕ್ತಿಗಳು ಕೂಡಾ ಹೆಚ್ಚು ಸಕ್ರಿಯವಾದವು. ಸಮಾಜದ ಬಲವರ್ಧನೆ ಮತ್ತು ಸಾಮರಸ್ಯದ ಸಮಾಜ ನಿರ್ಮಾಣವಾಗುವುದು ಇಂದಿನ ತುರ್ತು ಅಗತ್ಯ ಎಂದು ಮೋದಿ ಪ್ರತಿಪಾದಿಸಿದರು.
‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ತತ್ವಕ್ಕೆ ಬಿಜೆಪಿ ಬದ್ಧ. ಪಕ್ಷ ಹೇಗೆ ಆದರ್ಶಗಳನ್ನು ಪಾಲಿಸುವ ಮೂಲಕ ಹಾಗೂ ವಂಶಪಾರಂಪರ್ಯ ಚಟುವಟಿಕೆಗಳಿಂದ ಮುಕ್ತವಾಗುವ ಮೂಲಕ ಹೇಗೆ ದೇಶಕ್ಕೆ ಹಾಗೂ ಪ್ರಜಾಪ್ರಭುತ್ವ ಜಗತ್ತಿಗೆ ಉತ್ತಮ ಉದಾಹರಣೆಯಾಗಿದೆ ಎಂದು ತೋರಿಸುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರದ್ದು ಎಂದು ಸೂಚಿಸಿದರು.
ಬಿಜೆಪಿ ವರ್ತಮಾನದ ಪಕ್ಷ ಎಂಬ ಭಾವನೆ ಈಗ ಜನರಲ್ಲಿ ದಟ್ಟವಾಗಿದೆ. ಹುಟ್ಟಿನಿಂದಲೂ ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತಾ ಬಂದ ಬಿಜೆಪಿಯ ಪ್ರತಿ ನಡೆಯನ್ನು ಕೆಟ್ಟ ಅರ್ಥದಲ್ಲಿ ಬಿಂಬಿಸಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸಮರ್ಪಣಾ ಮನೋಭಾವ ಕಾರ್ಯಕರ್ತರು ಎದುರಿಸಿದ ಸಂಕಷ್ಟಗಳನ್ನು ಬ್ರಿಟಿಷ್ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಪಕ್ಷ ಕೂಡಾ ಎದುರಿಸಿರಲಾರದು ಎಂದು ಪಕ್ಷದ ನೂತನ ಕೇಂದ್ರ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಅಭಿಪ್ರಾಯಪಟ್ಟರು.

ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಪಕ್ಷದ ಅಧ್ಯಕ್ಷ ಅಮಿತ್ ಷಾ, ರಾಜನಾಥ ಸಿಂಗ್, ಅರುಣ್ ಜೇಟ್ಲ್ಲಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಬಿಜೆಪಿ ಕಾರ್ಯಕರ್ತರು ಕೇವಲ ಗುಂಪು ಸೇರುವವರಲ್ಲ. ಹೃದಯಪೂರ್ವಕವಾಗಿ ರಾಷ್ಟ್ರಕ್ಕಾಗಿ ಕರ್ತವ್ಯ ನಿರ್ವಹಿಸುವವರು. ಜನಪ್ರಿಯ ವಿಷಯಗಳ ಬಗ್ಗೆ ಮಾತನಾಡಿ ಯಾರೂ ಗುಂಪು ಕೂಡಿಸಬಹುದು. ಆದರೆ ತತ್ವ ಹಾಗೂ ಆದರ್ಶಕ್ಕೆ ಬದ್ಧವಾಗಿರುವುದು ಅಗತ್ಯ ಎಂದು ಮೋದಿ ಪ್ರತಿಪಾದಿಸಿದರು.
ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲಿಕ್ ಅವರನ್ನು ಪ್ರಧಾನಿ ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News