ಈಗ ಕಾರು ಕಳ್ಳರಿಗೆ ಬಂದಿದೆ ಹೊಸ ಐಡಿಯಾ !

Update: 2016-08-20 03:10 GMT

ಹೊಸದಿಲ್ಲಿ, ಆ.20: ದಿಲ್ಲಿ ಎನ್‌ಸಿಆರ್ ಪ್ರದೇಶದಲ್ಲಿ ಕಾರುಕಳ್ಳರ ಗ್ಯಾಂಗ್ ಇದೀಗ ಕಾರುಗಳ "ಗುರುತು" ಕದಿಯುವ ಹೊಸ ಐಡಿಯಾ ಕಂಡುಕೊಂಡಿದೆ. ಯಾವ ಸಂಶಯವೂ ಬಾರದಂತೆ ಕದ್ದ ಮಾಲನ್ನು ರಾಜಾರೋಷವಾಗಿ ಮಾರಾಟ ಮಾಡುವ ಈ ದಂಧೆಯನ್ನು ದಿಲ್ಲಿ  ಪೊಲೀಸರು ಮೀರಠ್‌ನಲ್ಲಿ ಬೇಧಿಸಿ, ಐದು ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ತಪ್ಪಿಸಿಕೊಂಡಿದ್ದಾರೆ.

ಇದು ತೀರಾ ಸರಳ ತಂತ್ರ. ಗುಜರಿ ವ್ಯಾಪಾರಿಗಳ ಜತೆ ಒಪ್ಪಂದ ಮಾಡಿಕೊಂಡು, ಗುಜರಿ ಹೈ ಎಂಡ್ ಕಾರು ಹಾಗೂ ಎಸ್‌ಯುವಿಗಳನ್ನು ತೀರಾ ಅಗ್ಗದ ಬೆಲೆಗೆ ಖರೀದಿಸಿ, ಅದರ ನಂಬರ್‌ಪ್ಲೇಟ್, ಎಂಜಿನ್ ಹಾಗೂ ಚಾಸ್ಸಿ ಸಂಖ್ಯೆಗಳನ್ನು ಕದಿಯುತ್ತಾರೆ. ಆ ಬಳಿಕ ರಾಜಧಾನಿಗೆ ಲಗ್ಗೆ ಇಟ್ಟು, ಅದೇ ಮಾದರಿಯ ವಾಹನಕ್ಕೆ ಹೊಂಚು ಹಾಕುತ್ತಾರೆ. ಇಂಥ ಕಾರುಗಳನ್ನು ಕದ್ದು, ತಾವು ಖರೀದಿಸಿದ ಗುಜರಿ ವಾಹನದ ನಂಬರ್‌ಪ್ಲೇಟ್, ಎಂಜಿನ್ ಹಾಗೂ ಚಾಸ್ಸಿ ಸಂಖ್ಯೆಗಳನ್ನು ಕದ್ದ ಕಾರಿಗೆ ಅಳವಡಿಸಲಾಗುತ್ತದೆ. ಇಂಥ ಗುಜರಿ ಕಾರುಗಳ ದಾಖಲಾತಿಗಳನ್ನು ಕೂಡಾ ಗುಜರಿಯವರಿಂದ ಪಡೆದು ನಕಲಿಯಾಗಿ ರೂಪಾಂತರಿಸುವ ದಂಧೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಈ ಹೊಸ ಐಡಿಯಾ ಮೂಲಕ ಎರಡು ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಉತ್ತರ ಭಾರತದ ಅತಿದೊಡ್ಡ ಗುಜರಿ ಕಾರು ಮಾರುಕಟ್ಟೆಯಾದ ಮೀರಠ್‌ನ ಸೋತಿಗಂಜ್‌ನಲ್ಲಿ ಈ ದಂಧೆಯನ್ನು ಪೊಲೀಸರು ಬೇಧಿಸಿ, ಸಂಜಯ ಸಿಂಗ್ (39), ಬೊಬಿನ್ ಅಹ್ಮದ್ (34), ಸಲೀಮ್ ಚವಾಲ್ (30), ಮನ್ನನ್ (32) ಹಾಗೂ ಕಾಸಿಂ ಲಾಥ್ (30) ಎಂಬವರನ್ನು ಬಂಧಿಸಿ ಗುರುತು ಬದಲಿಸಿದ 20 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News