ಐತಿಹಾಸಿಕ ದಾಖಲೆಗಳ ಡಿಜಿಟಲೀಕರಣ: ಉಮಾಶ್ರೀ
ಬೆಂಗಳೂರು, ಆ.26: ದೇಶ ಹಾಗೂ ರಾಜ್ಯದ ಇತಿಹಾಸಕ್ಕೆ ಸಂಬಂಧಿ ಸಿದ ಮಹತ್ವದ ದಾಖಲೆಗಳನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಮಹಾರಾಣಿ ಕಾಲೇಜಿನಲ್ಲಿ ಆಯೋಜಿಸಿದ್ದ ಐತಿಹಾಸಿಕ ದಾಖಲೆಗಳ- ಛಾಯಾಚಿತ್ರ ಪ್ರದರ್ಶನ ಮತ್ತು ಬ್ರಿಟಿಷ್ ಆಡಳಿತದ ದಾಖಲೆಗಳ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಟಿಪ್ಪುಸುಲ್ತಾನ್ ಕಾಲಾವಧಿಯಿಂದ ಮೈಸೂರು ರಾಜಾಡಳಿತ ಹಾಗೂ ಬ್ರಿಟಿಷರ ನಡುವೆ ನಡೆದಿದ್ದ ರಾಜತಾಂತ್ರಿಕ ಪತ್ರ ವ್ಯವಹಾರಗಳು ಲಂಡನ್ ಗ್ರಂಥಾ ಲಯದಲ್ಲಿತ್ತು. ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ತಂದಿದೆ. ಈ ಪುಸ್ತಕಗಳು ಇತಿಹಾಸ ಸಂಶೋಧಕರಿಗೆ ಮುಖ್ಯವಾದ ಆಕರ ಗ್ರಂಥವಾಗಲಿದೆ ಎಂದು ಅಭಿಪ್ರಾಯಿಸಿದರು.
ಕನ್ನಡ ಭಾಷೆಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯ ಬೇಕಾದರೆ ತಂತ್ರ ಜ್ಞಾನದ ಜೊತೆ ಜೊತೆಯಲ್ಲಿ ನಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಂತ್ರಜ್ಞಾನವನ್ನು ಪರಿಣಾಮಕಾರಿ ಯಾಗಿ ಬಳಸಿಕೊಳ್ಳುತ್ತಿದ್ದು, 30ಸಾವಿರ ಕಡತಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಇವೆಲ್ಲವುಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ತೆರೆಯುವ ನಿಟ್ಟಿನಲ್ಲಿ ಮುಂದಿನ ಆರು ತಿಂಗಳ ಒಳಗೆ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾಗದ ರಹಿತ ಇಲಾಖೆಯಾಗುವ ಮೂಲಕ ದೇಶಕ್ಕೆ ಮಾದರಿಯಾಗಿದೆ. ಹಾಗೂ ಕಣಜ ಅಂತ ರ್ಜಾಲವನ್ನು ಮತ್ತಷ್ಟು ಉತ್ಕೃಷ್ಟಗೊಳಿಸಲಾಗಿದ್ದು, ಒಂದರಿಂದ ಹತ್ತನೆ ತರಗತಿ ಯವರೆಗಿನ ಪಠ್ಯಗಳನ್ನು ಕಣಜ ಅಂತರ್ಜಾಲಕ್ಕೆ ಹಾಕಲಾಗಿದೆ. ಇದರ ಜೊತೆಗೆ ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ವಿದೇಶದಲ್ಲಿರುವ ಕನ್ನಡಿಗರು ಕಣಜವನ್ನು ಪ್ರತಿದಿನ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಚಿವೆ ಉಮಾಶ್ರೀ ತಿಳಿಸಿದರು.
ಇತಿಹಾಸದ ಅರಿವಿಲ್ಲದವರು ತಮ್ಮ ಭವಿಷ್ಯವನ್ನು ಗಟ್ಟಿಯಾಗಿ ಕಟ್ಟಿಕೊಳ್ಳಲಾರರು. ವಿಜ್ಞಾನ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರದ ಬೇರು ಇತಿಹಾಸವೆ ಆಗಿದೆ. ಹೀಗಾಗಿ ಎಲ್ಲ ವಿಭಾಗದ ವಿದ್ಯಾರ್ಥಿಗಳು ಇತಿಹಾಸದತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಆಶಿಸಿದರು.
ಡಾ.ಪೃಥ್ವಿ ದತ್ತ ಚಂದ್ರ ಶೋಭಿ ಮಾತನಾಡಿ, ಭಾರತದ ಇತಿಹಾಸವನ್ನು ಎಡ ಹಾಗೂ ಬಲಪಂಥ ಸಿದ್ಧಾಂತಗಳು ತಮ್ಮದೇ ದೃಷ್ಟಿಕೋನ ದಲ್ಲಿ ಪ್ರತಿಪಾದಿಸುತ್ತಿವೆ. ಇವೆರಡು ಸಿದ್ಧಾಂತಗಳು ಇತಿಹಾಸವನ್ನು ತಿರುಚುತ್ತಿವೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಇವೆರಡು ಸಿದ್ಧಾಂತಗಳನ್ನು ಮೀರಿದ ಅಭಿಪ್ರಾಯವನ್ನು ತಿಳಿಯಬೇಕಾದರೆ ಕರ್ನಾಟಕ ಪತ್ರಗಾರ ಇಲಾಖೆಯಲ್ಲಿರುವ ದಾಖಲೆಗಳನ್ನು ಪಡೆದು ಸಂಶೋಧಿಸಬೇಕು ಎಂದು ಅವರು ಹೇಳಿದರು.
ಇತಿಹಾಸದಲ್ಲಿ ನಡೆದಿರುವ ಘಟನೆಗಳ ಕುರಿತು ಊಹೆ ಮಾಡುವ ಅಭಿಪ್ರಾಯಕ್ಕೆ ಬರಬಾರದು. ಇದರಿಂದ ಸಾಕಷ್ಟು ಅಪಾಯವಾಗುವ ಸಾಧ್ಯತೆಗಳೇ ಹೆಚ್ಚಿರುತ್ತದೆ. ಹೀಗಾಗಿ ಇತಿಹಾಸಕ್ಕೆ ಸಂಬಂಧಿಸಿದಂತಹ ಸ್ಥಳ ಗಳು, ಪತ್ರಗಳು, ಸನ್ನಿವೇಶಗಳನ್ನು ಸರಿಯಾಗಿ ಸಂಶೋಧನೆ ಮಾಡುವ ಅಭಿಪ್ರಾಯವನ್ನು ತಾಳಬೇಕಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸುಮಾರು 250 ವರ್ಷಗಳಿಗೂ ಹಳೆಯದಾದ ಕಾಗದ ಪತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ, ಸರಕಾರ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಮಹಾರಾಣಿ ಕಾಲೇಜಿನ ಡಾ.ಶಾಂತಕುಮಾರಿ ಮತ್ತಿತರರಿದ್ದರು.
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಟಿಪ್ಪು ಸುಲ್ತಾನ್ ಹಿಂದೂ ವಿರೋಧಿಯಾಗಿದ್ದ, ಕೊಡಗು ಜನತೆಯ ಮೇಲೆ ದಾಳಿ ಮಾಡಿ ಮಾರಣಹೋಮ ನಡೆಸಿದ ಎಂಬ ಇಲ್ಲಸಲ್ಲದ ಆರೋಪಗಳನ್ನು ಬಿತ್ತುತ್ತಿವೆ. ಇಂತಹ ಆರೋಪ ಮಾಡುವವರಿಗೆ ಸರಿಯಾದ ಉತ್ತರ ನೀಡಬೇಕಾದರೆ ಪತ್ರಗಾರದಲ್ಲಿರುವ ದಾಖಲೆಗಳನ್ನು ಪಡೆದು ಅಭ್ಯಸಿಸಬೇಕು.
- ಡಾ.ಪೃಥ್ವಿದತ್ತ ಚಂದ್ರ ಶೋಭಿ, ಪ್ರಾಧ್ಯಾಪಕರು, ಮೈಸೂರು ವಿವಿ