ಗಲಭೆಯಿಂದ ಆತಂಕಕ್ಕೊಳಗಾದ ಹೊಸೂರಿನ ಕನ್ನಡಿಗ ಉದ್ಯೋಗಿಗಳು

Update: 2016-09-15 14:25 GMT

ಬೆಂಗಳೂರು, ಸೆ.15: ಕಾವೇರಿ ವಿವಾದವನ್ನು ಮುಂದಿಟ್ಟು ಕೆಲವು ದುಷ್ಕರ್ಮಿಗಳು ಬೆಂಗಳೂರಿನಲ್ಲಿ ಆಗಾಗ ನಡೆಸುತ್ತಿರುವ ಹಿಂಸಾಚಾರದ ಪರಿಣಾಮ ಹೊಸೂರು ಗಡಿಭಾಗದಲ್ಲಿರುವ ಸಾವಿರಾರು ಮಂದಿ ಕನ್ನಡಿಗರು ಆತಂಕವನ್ನು ಎದುರಿಸುತ್ತಿದ್ದಾರೆ.

ಹೊಸೂರು ಗಡಿ ಭಾಗದಲ್ಲಿ ಟಿವಿಎಸ್, ಲೈಲ್ಯಾಂಡ್, ಟೈಟನ್ ಸೇರಿದಂತೆ ಹತ್ತಾರು ಕಂಪೆನಿಗಳಿದ್ದು, ಇವು ತಮಿಳುನಾಡು ಪ್ರದೇಶಕ್ಕೆ ಒಳಪಟ್ಟಿವೆ. ಈ ಕಂಪೆನಿಗಳಲ್ಲಿ ಸಾವಿರಾರು ಮಂದಿ ಉದ್ಯೊಗಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಕೆಲವು ದುಷ್ಕರ್ಮಿಗಳು ಕಾವೇರಿ ಪ್ರಕರಣವನ್ನು ಮುಂದಿಟ್ಟುಕೊಂಡು ಆಗಾಗ ಬೆಂಗಳೂರಿನಲ್ಲಿ ಗಲಭೆ ನಡೆಸುತ್ತಿದ್ದಾರೆ. ಇದರ ಪರಿಣಾಮ ಗಡಿ ಭಾಗದಲ್ಲಿರುವ ರಾಜ್ಯದ ಉದ್ಯೋಗಿಗಳು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಬೆಳಗಾವಿ, ಬಿಜಾಪುರ, ಗುಲ್ಬರ್ಗಾ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಎಲ್ಲ ಭಾಗಗಳಿಂದಲೂ ಸಾವಿರಾರು ಮಂದಿ ಯುವಕರು ಉದ್ಯೋಗವನ್ನರಸಿ ಬಂದವರು ಹೊಸೂರು ಗಡಿ ಭಾಗದಲ್ಲಿ ನೆಲೆಸಿದ್ದಾರೆ. ಕೇವಲ ಉದ್ಯೋಗಕ್ಕಾಗಿ ತಮ್ಮ ಊರುಗಳನ್ನು ತೊರೆದು ಬಂದಿರುವ ಈ ಯುವಕರು, ಕಾವೇರಿ ವಿಷಯದಲ್ಲಿ ಬೆಂಗಳೂರಿನಲ್ಲಿ ನಡೆದ ಗಲಭೆಗಳಿಂದ ಆತಂಕಕ್ಕೆ ಒಳಗಾಗಿದ್ದಾರೆ.

 ಬಂದ್ ಮಾಡುವುದು, ವಾಹನಗಳಿಗೆ ಬೆಂಕಿ ಇಡುವುದು, ಬಸ್‌ಗಳಿಗೆ ಕಲ್ಲು ತೂರುವುದು ನಾಡು, ನುಡಿಯ ರಕ್ಷಣೆಯೆ. ಬೆಂಗಳೂರಿನಲ್ಲಿ ತಮಿಳುನಾಡಿನ ವಾಹನಗಳಿಗೆ ಬೆಂಕಿ ಇಟ್ಟರೆ, ತಮಿಳುನಾಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ನೆಮ್ಮದಿಯಾಗಿ ಬದುಕಲು ಸಾಧ್ಯವೆ. ಇಷ್ಟು ಕನಿಷ್ಠ ಪ್ರಜ್ಞೆ ಇಲ್ಲದವರು ನಾಡಿನ ರಕ್ಷಣೆ ಹೇಗೆ ಮಾಡುತ್ತಾರೆ ಎಂದು ಟಿವಿಎಸ್ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಹುಬ್ಬಳ್ಳಿ ಮೂಲದ ರಮೇಶ್ ಪ್ರಶ್ನಿಸುತ್ತಾರೆ.

ಐಟಿಐ, ಬಿಕಾಂ, ಬಿಸ್ಸಿ ಪದವಿಗಳನ್ನು ಗಳಿಸಿದ್ದರೂ ಉದ್ಯೋಗಕ್ಕಾಗಿ ದೂರದ ಬಿಜಾಪುರದಿಂದ ಇಲ್ಲಿಗೆ ಬರಬೇಕಾದ ಪರಿಸ್ಥಿತಿ ಬಂದಿದೆ. ಕನ್ನಡ ನಾಡಿನಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳು ಯಾವ ಕಾರ್ಯಯೋಜನೆಗಳನ್ನು ರೂಪಿಸಿಕೊಂಡಿವೆ ಎಂಬುದು ಬಹಿರಂಗ ಪಡಿಸಲಿ ಎಂದು ಬಿಜಾಪುರ ಮೂಲದ ದಶರಥ್ ಪ್ರಶ್ನಿಸುತ್ತಾರೆ.

ನಾವಿರುವ ಸ್ಥಳದಲ್ಲಿಯೆ ನಮಗೆ ಕೆಲಸ ಸಿಕ್ಕಿದ್ದರೆ ತಂದೆ, ತಾಯಿ, ಬಂಧು ಬಳಗವನ್ನು ಬಿಟ್ಟು ಇಲ್ಲಿಯವರೆಗೂ ಬರಬೇಕಾಗುತ್ತಿರಲಿಲ್ಲ. ಆದರೆ, ನಮ್ಮ ತಾಲೂಕಿನಲ್ಲಿ ಯಾವುದೆ ಕಂಪೆನಿಗಳಿಲ್ಲದ ಕಾರಣ ಹೊಸೂರು ಗಡಿ ಭಾಗಕ್ಕೆ ಬಂದು ಕೆಲಸ ಮಾಡುತ್ತಿದ್ದೇನೆ. ಆದರೆ, ಕೆಲವು ದುಷ್ಕರ್ಮಿಗಳು ಬೆಂಗಳೂರಿನಲ್ಲಿ ಗಲಭೆ ಮಾಡಿದ್ದರಿಂದ ನಮಗೆ ಇಲ್ಲಿ ಆತಂಕವಾಗಿದೆ.

-ಶಿವಕುಮಾರ್ ಟಿವಿಎಸ್ ಉದ್ಯೋಗಿ(ಹುಬ್ಬಳ್ಳಿ)

ಕನ್ನಡದ ಹೆಸರಿನಲ್ಲಿ ಕೆಲವು ದುಷ್ಕರ್ಮಿಗಳು ಹೊಟ್ಟೆ, ಬಟ್ಟೆಯ ಉದ್ಯೋಗಕ್ಕೂ ಕಲ್ಲು ಹಾಕಲು ಹೊರಟಿದ್ದಾರೆ. ಒಂದು ವೇಳೆ ತಮಿಳುನಾಡಿನ ಕಂಪೆನಿಗಳು ನಮ್ಮನ್ನು ಕೆಲಸದಿಂದ ಹೊರಕ್ಕೆ ದಬ್ಬಿದರೆ ನಮಗೆ ಯಾರ ಕೆಲಸ ಕೊಡುತ್ತಾರೆ?

-ಮಹೇಶ್ ಟಿವಿಎಸ್ ಉದ್ಯೋಗಿ(ಹುಬ್ಬಳ್ಳಿ)

Writer - ಮಂಜುನಾಥ ದಾಸನಪುರ

contributor

Editor - ಮಂಜುನಾಥ ದಾಸನಪುರ

contributor

Similar News