ಗೊಂದಲಪುರ
ಸೃಜನಶೀಲವಾದ್ದು ಸ್ಥಾವರವಾಗುವುದು ಸಾಧ್ಯವಿಲ್ಲ; ಅದು ಜಂಗಮ. ಜಂಗಮ ಯಾವಾಗಲೂ ನೆನಪಿನಲ್ಲಿರುತ್ತದೆ; ಆದ್ದರಿಂದ ನೆನಪಾಗುತ್ತಿರುತ್ತದೆ. ಅದಕ್ಕೆ ಸಾವಿಲ್ಲದಿರುವುದು ಈ ಕಾರಣದಿಂದಲೇ. 1975ರ ತುರ್ತುಪರಿಸ್ಥಿತಿ ಬರುವ ಮೂರು ವರ್ಷಗಳ ಮೊದಲೇ-ಅಂದರೆ 1972ರಲ್ಲೇ- ಕನ್ನಡದ ಕವಿ ಗೋಪಾಲಕೃಷ್ಣ ಅಡಿಗರು ದಿಲ್ಲಿಯಲ್ಲಿ ಕವನವನ್ನು ಬರೆದರು. ಅದು ಬರಲಿರುವ ತುರ್ತುದುರಂತದ ಭಾಷ್ಯದಂತಿತ್ತು. ರೊಚ್ಚು, ರೋಷ, ನಿರಾಶೆ, ಸಿನಿಕತನ ಇವುಗಳಿಂದಾಗಿ ಈ ಕವನವು ಕಾವ್ಯವಾಗಿ ಅವರ ಇತರ ಅನೇಕ ಉತ್ತಮ ಕವನಗಳ ಸಾಲಿನಲ್ಲಿ ನಿಲ್ಲದಿದ್ದರೂ ತನ್ನ ರಾಜಕೀಯ ಖಡಾಖಂಡಿತತನದಿಂದ, ರಾಜಿಯಾಗಲು ಒಪ್ಪದ ಮನಸ್ಸಿನ ಸ್ಥಿರನೆಲೆಯಿಂದ ಅನೇಕ ಕಾವ್ಯಾಸಕ್ತರ ಕುತೂಹಲ ಮತ್ತು ಮೆಚ್ಚುಗೆಗೂ ಪಾತ್ರವಾಯಿತು. ವರ್ತಮಾನಕ್ಕೆ ತೆರೆಯದ ಕಣ್ಣಿದ್ದೂ ಪ್ರಯೋಜನವಿಲ್ಲ. ಮರಳಿನಲ್ಲಿ ಲಿಂಗವನ್ನು ರಚಿಸಿ ಅದರಡಿ ತನ್ನ ನಿಧಿಯನ್ನು ಬಚ್ಚಿಟ್ಟು ಗಂಗಾ ಸ್ನಾನಕ್ಕೆ ಹೋದವನಿಗೆ ತನ್ನನ್ನು ಅನುಸರಿಸಿದ ಮೂರ್ಖ ಮಂದಿಯಿಂದಾಗಿ ನಿಧಿಯು ನಷ್ಟವಾದ ಕಥೆಯಿದೆ. ಹಾಗೆಯೇ ಅದೆಷ್ಟೇ ಸಂಪನ್ನವಿರಲಿ, ತೀರಾ ವೈಯಕ್ತಿಕವಾದ ಲೀಲಾ ವಿನೋದದಲ್ಲಿ ಮಗ್ನರಾದವರು ತನ್ನನ್ನು ಅನೇಕರು ಅನುಸರಿಸುತ್ತಾರೆಂದು ಬಗೆದರೆ ಕೊನೆಗೆ ಆತ ಸಂಪಾದಿಸಿದ್ದು ಈ ಅನುಕರಣೆಯಿಂದಾಗಿ ನಷ್ಟವಾಗುವ ಸಾಧ್ಯತೆಯೇ ಹೆಚ್ಚು. ಇಂದಿನ ಅನೇಕ ಬರವಣಿಗೆಗಳಲ್ಲಿ ಇದರ ಮೂಲ ಯಾವುದು, ಹರಿಕಾರರು ಯಾರು, ಇದರ ಶ್ರೇಷ್ಠತೆಗೆ (ಹಾಗೊಂದಿದ್ದರೆ) ಕಾರಣರು ಯಾರು ಎಂಬಿತ್ಯಾದಿ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರ ಸಿಗುವುದಿಲ್ಲ. ಏಕೆಂದರೆ ಹಾದಿ ಹಾಕಿಕೊಡುವವರು ಸಾಮಾಜಿಕವಾಗಿ ತನ್ನ ಸುತ್ತಲಿನ ಪ್ರಪಂಚಕ್ಕೆ ಪ್ರಸ್ತುತರಾಗಿರುವುದಿಲ್ಲ. ಹಾಗೆಯೇ ಹಿಂಬಾಲಿಸುತ್ತಿರುವವರು ಯಾರು, ಓಡಿಸುತ್ತಿರುವವರು ಯಾರು ಎಂಬುದೇ ಗೊತ್ತಾಗುವುದಿಲ್ಲ.
ಮನುಷ್ಯನ ನಡೆ-ನುಡಿಗಳ ನಡುವೆ ಎಷ್ಟೇ ವ್ಯತ್ಯಾಸವನ್ನು ಗುರುತಿಸಿದರೂ ಕೊನೆಗೂ ಆತನ ಪ್ರತಿಭೆ-ಪಾಂಡಿತ್ಯವೇ ಆತನನ್ನು ಭವಿಷ್ಯದಲ್ಲಿ ಉಳಿಸುತ್ತದೆಂಬ ನಂಬಿಕೆಯಿದೆ. ಸೂರ್ಯನ ಬೆಳಕು ಕೆರೆಕೊಳ್ಳಗಳ ನೀರಿನಲ್ಲಿ ಪ್ರತಿಫಲಿಸಿದಂತೆಯೇ ಕೊಳಚೆ ನೀರಿನಲ್ಲೂ ಪ್ರತಿಫಲಿಸುತ್ತದೆಯೆಂದು ಹೇಳುತ್ತಾರೆ. ಆದರೆ ನಾವು ನೆನಪಿಡಬೇಕಾದ್ದೆಂದರೆ ಸೂರ್ಯನ ಬೆಳಕಿನ ಪ್ರತಿಫಲನವನ್ನು ನೋಡುವುದಕ್ಕಾಗಿ ಯಾರೂ ಕೊಳಚೆಗೆ ಇಣುಕುವುದಿಲ್ಲವೆಂಬ ವಾಡಿಕೆಯ ಸತ್ಯವನ್ನು. ಆದ್ದರಿಂದ ಯಾರು ನೇರ ನಡೆ-ನುಡಿಗಳನ್ನು ಬದುಕಿನ ಮಾಪನವಾಗಿ ಬಳಸುತ್ತಾರೋ ಅವರನ್ನು ಸಮಾಜ ಹೆಚ್ಚು ಗುರುತು ಹಿಡಿಯುತ್ತದೆ. ಮನುಷ್ಯನ ಚಹರೆ ಉಳಿಯುವುದು ಇಂತಹ ಗುರುತುಗಳಲ್ಲಿ. ಅಂತಹ ನಡೆನುಡಿಗಳು ನಿತ್ಯದ ಸೂರ್ಯನ ಹಾಗೆ ಹೊಸತಾಗಿ ಇತರರ ಬದುಕಿನಲ್ಲಿ ಪ್ರತಿಫಲಿಸುತ್ತದೆ. ಕವಿ ಗೋಪಾಲಕೃಷ್ಣ ಅಡಿಗರ ಕುರಿತು ಆರಂಭದಲ್ಲಿ ಪ್ರಸ್ತಾಪಿಸಿದ್ದು ಈ ಕಾರಣದಿಂದಲೇ.
ಅಡಿಗರು 1971ರ ಲೋಕಸಭಾ ಚುನಾವಣೆಯಲ್ಲಿ ಜನಸಂಘದ ಅಭ್ಯರ್ಥಿಯಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತರು. ಹಾಗೆಂದು ಅವರೆಂದೂ ಜನಸಂಘಿಯಾಗಿರಲಿಲ್ಲ. ಆನಂತರ 1985ರಲ್ಲಿ ಭಾಜಪದ ಅಭ್ಯರ್ಥಿಯಾಗಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತರು. ಆದರೆ ಅವರು ಅಸಲಿ ಭಾಜಪದಂತೆ ಎಂದೂ ಇರಲಿಲ್ಲ. ಅವರು ಪ್ರಗತಿಪರರು; ಸತ್ಯನಿಷ್ಠುರಿ; ವ್ಯವಸ್ಥೆಯನ್ನು ಟೀಕಿಸುತ್ತಲೇ ಬಂದವರು. ಎಡವನ್ನು, ನೆಹರೂರನ್ನು ಬೈಯುತ್ತ ಅದನ್ನೂ (ಎಡ-ಬಲ, ನೆಹರೂ ನಿವೃತ್ತರಾಗುವುದಿಲ್ಲ ಮುಂತಾದ ಕವನಗಳ ಮೂಲಕ) ಕಾವ್ಯವಾಗಿಸಿದವರು. ಒಮ್ಮೆಮ್ಮೆ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲಾಗದೆ ನೊಂದವರು: ಕೇಂದ್ರ ಸಾಹಿತ್ಯ ಅಕಾಡಮಿಯನ್ನು ಟೀಕಿಸಿಯೂ ಅದರ ಪ್ರಶಸ್ತಿಯನ್ನು, ಕನ್ನಡ ಸಾಹಿತ್ಯ ಪರಿಷತ್ತನ್ನು ಟೀಕಿಸಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು, ಪಡೆದವರು. ಆದರೆ ಅವರ ನಿಲುವು ವರ್ತಮಾನದ ಅನೇಕ ಸಾಹಿತಿಗಳಂತೆ ಎಡೆಬಿಡಂಗಿತನದ್ದಾಗಿರದೆ ವ್ಯವಸ್ಥೆಯ ಒಳಗಿದ್ದೇ ಹೋರಾಡಬೇಕೆಂಬ ಸಂಚಾರೀ ನಿಲುವಿನದ್ದಾಗಿತ್ತು. (ಬದುಕು ಮತ್ತು ಬರೆಹದ ನಡುವಣ ವಾಸ್ತವ ಕಂದರವನ್ನು ಅವರು ಅರ್ಥಮಾಡಿಕೊಳ್ಳದಿದ್ದದ್ದು ಅಚ್ಚರಿ ತರುತ್ತದೆಯಾದರೂ ಅವರಲ್ಲಿದ್ದ ವಿದ್ಯಾರ್ಥಿತನವನ್ನು ಸೂಚಿಸುತ್ತದೆ!) ಇಂತಹ ಹೋರಾಟದ ಹಾದಿಯ ಗೊಂದಲವು ಎಲ್ಲ ಸೃಜನಶೀಲರಲ್ಲಿರುತ್ತದೆ. ಅದನ್ನು ಟೀಕಿಸುತ್ತಲೇ ಅಂಥವರು ಗೊಂದಲಮಯ ಸಮಾಜದ ಪಾಡನ್ನು ಹಾಡುತ್ತಾರೆ.
1952ರಲ್ಲಿ ಅಡಿಗರು ‘ಹಿಮಗಿರಿಯ ಕಂದರ’ ಕವನವನ್ನು ಬರೆದರು. 249 ಸಾಲುಗಳ ಈ ಕವನವು ಕನ್ನಡದ ಆಧುನಿಕ ಕಾವ್ಯ ಸಂಪ್ರದಾಯದಲ್ಲಿ ಹೊಸದೊಂದು ಮಾರ್ಗವನ್ನು ಸೃಷ್ಟಿಸಿತ್ತು. ನಿಶ್ಚಿತತೆಯ ಭಯಾನಕ ವಾಸ್ತವವನ್ನು ಆ ಕಾಲಕ್ಕೆ ಈ ಕವನವು ಮೂಡಿಸಿದಂತೆ ಯಾವ ಕವನವೂ ಮೂಡಿಸಿರಲಿಲ್ಲ. 1953ರಲ್ಲಿ ಅಡಿಗರು ಹಿಮಗಿರಿಯ ಕಂದರ ಕವನವನ್ನು ಗಾತ್ರದಲ್ಲೂ ಪಾತ್ರದಲ್ಲೂ ಮೀರಿಸಿದ 420 ಸಾಲುಗಳ ‘ಗೊಂದಲಪುರ’ ಕವನವನ್ನು ಬರೆದರು. ಅಡಿಗರು ಯಾರು? ಅವರನ್ನು ಯಾಕೆ ಓದಬೇಕು? ಎಂದೆಲ್ಲ ಪ್ರಶ್ನಿಸುವವರನ್ನು ಉತ್ತರಿಸಲು ಇಂತಹ ಕವನಗಳನ್ನು ನೆನಪುಮಾಡುವುದು ಅಗತ್ಯ. ಕವನದ ಕುರಿತು ನಾನೇ ಹಿಂದೊಂದು ಸಂದರ್ಭದಲ್ಲಿ ಸ್ಥೂಲವಾಗಿ ಹೀಗೆ ಬರೆದಿದ್ದೆ:
‘‘ಹಿಮಗಿರಿಯ ಕಂದರದ ಭಯಾನಕತೆ ಇಲ್ಲಿಲ್ಲ. ಇದೊಂದು ದೀರ್ಘ ವಿಡಂಬನೆ. ಕೇಡಿಗರ ಮುಖ್ಯ ಧ್ವನಿಯಾಗುವ ಸಮಾಜವೊಂದರ ದುಃಸ್ಥಿತಿ ಇಲ್ಲಿದೆ. ‘ಮೂವತ್ತು ಕೋಟಿ ದೇಗುಲ ಶೂನ್ಯ; ಶೂನ್ಯ ಗರ್ಭಗುಡಿ; ಭಗ್ನ ವಿಗ್ರಹ ಸ್ತಬ್ದ ದೀಪನಾಡಿ; ಅಂಧಕಾಸುರ ಕೆದರಿ ಕೇಶ ಬಾರಿಸುತ್ತಿರುವ ರುಗ್ಣ ಗಂಟೆಯ ನಗ್ನ ಘಂಟಾಮಣಿ!’ ಎಂತಹ ಚಿತ್ರ! ಸಾಮಾಜಿಕ ಕರ್ಕಶ ಹೇಗಿದೆಯೆಂದರೆ ಎಣ್ಣೆ ಗಾಣದಿ ಮರಳನೆರೆವ ಕರಕರದ ಕರೆ; ಬಿಡಿಬಿಡಿಯಾದ ಹಾಗೆ ಇಡಿಯಾದ ಪ್ರತಿಮೆಗಳು ಈ ಕವನದ ತುಂಬ ಇವೆ. ಭಾಷೆಯನ್ನು ಎಷ್ಟು ಸಾಂದ್ರಸುಂದರವಾಗಿ ಬಳಸಬಹುದೆಂಬ ಬಗ್ಗೆ ಈ ಕವನದಲ್ಲೂ ಉದಾಹರಣೆಗಳು ಸಾಕಷ್ಟಿವೆ: ‘ವಾಲಿಯೂಟದ ತಟ್ಟೆ ತಾರೆ ಟಣಟನ ಚಿಮ್ಮಿ ಜಾರಿದಳು ಸುಗ್ರೀವನಡಿಗೆ ಮನೆಗೆ. ಮರಳು ಬಂಗಾರ ಕಣ; ತೊರೆಯೆಲ್ಲ ಹಾಲುಹೊಳೆ, ನೆಲವೆಲ್ಲ ಬರಿ ಭತ್ತ ಗೋಧಿ ರಾಗಿ!’’
‘‘ಒಳಿತಿನ ವಿರುದ್ಧ ಕೆಡುಕು ವಿಜಯ ಸಾಧಿಸುವ ಬಗೆ ಹೇಗೆ? ನಾಶವಾಗದೆ ಇರುವ ಮೂಲಕ. ಇಲ್ಲಿನ ಗೊಂದಲಪುರದ ಗೊಂದಲಾಸುರ ಮಹಾರಾಜನೆಚಿದರೆ ‘ಕೋಟಿ ವಿದ್ಯುದ್ದೀಪಸಮ ವೈಷಮ್ಯ ತೇಜ’. ಈ ನುಡಿಗಟ್ಟಿಗೆ ನಾಶವಿಲ್ಲ. ಹಾಗೆಯೇ ‘ಹತ್ತು ಅವತಾರ ರಂಗೋಲೆ ಕೆಳಗೇ ತೂರಿ ಸತ್ತು ಬದುಕದೆ ಅಸುರ ದರ್ಪ’. ದೈವ ಶಕ್ತಿ ಚಾಪೆಯ ಕೆಳಗೆ ನುಸುಳಿದರೆ ಆಸುರೀ ಶಕ್ತಿ ರಂಗೋಲೆಯ ಕೆಳಗೆ ತೂರಿ ಸತ್ತೂ ಬದುಕಿದೆ. ಅಲ್ಲದೆ ‘ಅವತಾರಿ ಜನಕೆ ತಿಳಿವಳಿಕೆ ಬಹಳಾ ಕಡಿಮೆ, ಕ್ಷಣಭಂಗುರವು ಕೇಕೆ, ಎತ್ತುವರು ಹುಸಿ ಜಯಪತಾಕೆ. ಗೊಂದಲಾಸುರನ ದೃಷ್ಟಿಯಲ್ಲಿ ಇನ್ನೂ ಉಳಿದ ಸಜ್ಜನರು ಸೇಕಡಾ ಏಳರ ಖಳರು’.’’
ಗೊಂದಲಪುರವೆಂಬ ಅರ್ಥಪೂರ್ಣ ಶೀರ್ಷಿಕೆಯಿಂದ ಮೊದಲ್ಗೊಂಡು ಇಡೀ ಕವನದ ಶಿಲ್ಪಒಂದು ಏಕಾಗ್ರತೆಯಿಂದ ಸಾಧಿಸಲ್ಪಟ್ಟಿದೆ.
ಅಡಿಗರೇ ಈ ಕವನದ ಬಗ್ಗೆ ‘‘ಈ ಕವನದಲ್ಲಿಯ ಪ್ರತಿಮೆ, ಪ್ರತೀಕಗಳು, ಚಿತ್ರಗಳು, ಮಾತಿನ ಧ್ವನಿಗಳು, ಇಲ್ಲಿನ ಉದ್ವೇಗಪೂರ್ಣ ಭಾವಚಿತ್ರಗಳು ಹೊಸತನವನ್ನು ಹೊಸರೀತಿಯಲ್ಲೇ ಹೇಳಬೇಕೆಂಬ ಉತ್ಸಾಹವನ್ನು ಕೊಂಚ ಹೆಚ್ಚಾಗಿಯೇ ತೋರಿವೆಯೆನ್ನಬಹುದು’’ ಎಂದು ಅವರ ‘ನೆನಪಿನ ಗಣಿಯಿಂದ’ (ಆತ್ಮಚರಿತ್ರೆಯಲ್ಲಿ) ಹೇಳಿದ್ದಾರೆ. ಸಾಮಾಜಿಕ ಗೊಂದಲಗಳು ಅನಿಶ್ಚಿತತೆಯನ್ನು ನಿರ್ಮಿಸುತ್ತವೆ. ಇಲ್ಲಿನ ಭಯಾನಕತೆ, ವೈಷಮ್ಯ ಇತ್ಯಾದಿಗಳು ಈ ಭೂಮಿಯಲ್ಲಿ ಬದುಕು ನರಕವೇ ಎಂಬ ಭಾವನೆಯನ್ನು ಉಂಟುಮಾಡುತ್ತಿದೆ. ಸತ್ತ ಮೇಲಷ್ಟೇ ಸಂತೋಷ ಸಾಧ್ಯ ಎಂಬುದನ್ನು Call no man happy till he dies ಎಂಬುದು ಸಾಂಕೇತಿಸಿದರೆ ಅದನ್ನೇ ಪರೋಕ್ಷವಾಗಿ ಯಾರಾದರೂ ಸತ್ತಾಗ ಅವರು ಸ್ವರ್ಗಕ್ಕೆ ಹೋದರು ಎನ್ನುತ್ತೇವೆ.
ಕವಿ ಸಮಾಜದ ಅನಭಿಷಿಕ್ತ ಶಾಸಕ ಎಂದು ಆಂಗ್ಲ ಕವಿಯೊಬ್ಬ ಹೇಳಿದ. ಆತ ಹೇಳಿದ ಕಾಲದಲ್ಲಿ ಶಾಸಕರಿಗೂ ಗೌರವವಿತ್ತು. ಅವರು ತಮ್ಮ ನಡೆ ನುಡಿಯನ್ನು ಜಾಗೃತವಾಗಿಟ್ಟಿದ್ದರು. ತನ್ನ ಅನುಯಾಯಿಗಳು ಮಾತ್ರವಲ್ಲ, ಇಡೀ ಸಮಾಜವೇ ತಮ್ಮನ್ನು ಕಾವಲುಕಣ್ಣುಗಳಿಂದ ನೋಡುತ್ತಿದೆ ಎಂಬ ಎಚ್ಚರ ಅವರಿಗಿತ್ತು. ಆದರೆ ಈಗ ಶಾಸಕರನ್ನು ಸಂಶಯದಿಂದಲೇ ನೋಡಬೇಕಾದ ಅನಿವಾರ್ಯತೆಯಿದೆ. ಇಂತಹ ಸಂದರ್ಭ, ಕಾಲದಲ್ಲಿ ಕವಿಯೊಬ್ಬ ಯಾವುದೇ ಕಾಲ-ಸಂದರ್ಭದಲ್ಲೂ ಹೇಳಿದ ಮಾತುಗಳು ಮೆಲುಕು ಹಾಕುವುದಕ್ಕೆ ಯೋಗ್ಯವೂ ಉಚಿತವೂ ಆಗುತ್ತವೆ. ಅನೇಕರು ಶ್ರೇಷ್ಠರು; ಆದರೆ ಮುಖ್ಯರಲ್ಲ. ಇನ್ನು ಅನೇಕರು ಮುಖ್ಯರು; ಆದರೆ ಶ್ರೇಷ್ಠರಲ್ಲ. ಅಡಿಗರು ಶ್ರೇಷ್ಠ ಕವಿಯಾದದ್ದು ಒಂದು ಸತ್ಯವಾದರೆ ಅವರು ಮುಖ್ಯ ಕವಿಯಾದದ್ದು ಇನ್ನೊಂದು ಸತ್ಯ. ಅಡಿಗರು ಈ ಎರಡನ್ನೂ ಸಂಪಾದಿಸಿದ್ದು ಅವರ ಸಮಾಜಮುಖೀ ಧೋರಣೆಯಿಂದ. ಸಾಹಿತಿಗಳಾಗಿ ಈ ಎರಡನ್ನೂ ಸಂಪಾದಿಸಿದವರಲ್ಲಿ ಅಡಿಗರಿಗಿಂತ ಮೊದಲು ಕಾರಂತ, ಕುವೆಂಪು ನೆನಪಾದರೆ, ಆ ನಂತರ ಅನಂತಮೂರ್ತಿ, ಕಾರ್ನಾಡ್ ಮತ್ತು ದೇವನೂರು ನೆನಪಾಗುತ್ತಾರೆ. ಹಾಗಲ್ಲದೇ ಇದ್ದವರಲ್ಲಿ ಹೆಸರಿಸಬಹುದಾದ ಶ್ರೇಷ್ಠರೆಂದರೆ ಮಾಸ್ತಿ, ಬೇಂದ್ರೆ, ಪುತಿನ, ಕೆಎಸ್‌ನ, ಜಿಎಸ್‌ಎಸ್, ಕಣವಿ, ನಿಸಾರ್, ಕಂಬಾರ, ಭೈರಪ್ಪಮುಂತಾದವರು; ಮುಖ್ಯರೆಂದರೆ ಅನಕೃ, ನಿರಂಜನ, ಕಟ್ಟೀಮನಿ, ಸಿದ್ಧಲಿಂಗಯ್ಯ, ಬರಗೂರು, ಮುಂತಾದವರು. (ಹೀಗೆ ವಿಭಾಗಿಸುವುದು ವಾಗ್ವಾದಕ್ಕೆ ಕರೆ ಕೊಟ್ಟಂತೆ ಎಂದು ನನಗೆ ತಿಳಿದಿದೆಯಾದರೂ ಅಷ್ಟು ವಿಸ್ತೃತ ಉದ್ದೇಶ ನನಗಿಲ್ಲ. ಸೀಮಿತ ಗುರುತಿಗಾಗಿ ಮತ್ತು ವಿಭಜಿಸಬಲ್ಲ ಮೌಲ್ಯಗಳಿಗಾಗಿಯಷ್ಟೇ ಹೀಗೆ ಬಳಸಿದ್ದೇನೆ.)
ಇಂದು ನಮ್ಮ ರಾಜಕೀಯ, ಸಾಮಾಜಿಕ ಸ್ಥಿತಿ ತೀರ ಗೊಂದಲಮಯವಾಗಿದೆ. ಪ್ರತಿಯೊಬ್ಬನೂ ರಾಜಕೀಯವಾಗಿ ಜಾಗೃತನಾಗಿದ್ದಾನೆಂದಲ್ಲ. ಮನುಷ್ಯನು ಯಾವುದಾದರೊಂದು ರಾಜಕೀಯ ನಿಲುವನ್ನು ಹೊಂದುವುದು ತಪ್ಪಲ್ಲ. ಆದರೆ ತನ್ನ ಸ್ವಾರ್ಥಕ್ಕೆ, ಸುರಕ್ಷತೆಗೆ ಬೇಕಾಗಿ ನಿರ್ದಿಷ್ಟವಾದ ಯಾವುದೇ ಸಿದ್ಧಾಂತವಿಲ್ಲದೆ ಸಮೂಹ ಸನ್ನಿಗೊಳಗಾದವರಂತೆ ಬದುಕುವುದು ಪ್ರಜ್ಞಾವಂತಿಕೆಯ ಲಕ್ಷಣವಲ್ಲ. ತನ್ನದೇ ಆದ ಯೋಚನೆ, ಮೌಲ್ಯ, ಸಿದ್ಧಾಂತಗಳ ಒಡೆತನಕ್ಕೆ ಎಲ್ಲ ಕಾಲದಲ್ಲೂ ಬೆಲೆಯಿತ್ತು. ಅದನ್ನು ಒಪ್ಪದವರು ಆಳುವವರಾದಾಗ ಅಂತಹ ಯೋಗ್ಯರು ಹುತಾತ್ಮರಾಗುತ್ತಾರೆ; ಒಪ್ಪುವವರಿದ್ದರೆ ಮಹಾತ್ಮರಾಗುತ್ತಾರೆ. (ಮಹಾತ್ಮರಾಗಿಯೂ ಗಾಂಧಿಗೆ ಹುತಾತ್ಮತೆ ತಪ್ಪಲಿಲ್ಲ!) ಅಡಿಗರೇ ತಮ್ಮ ‘ದೆಹಲಿಯಲ್ಲಿ’ ಕವನದಲ್ಲಿ ‘‘ಬಲು ನವುರು, ಬಲು ಸೂಕ್ಷ್ಮ ಆಧುನಿಕ ಹಿಂಸೆ; ಪ್ರಹ್ಲಾದನಿಗೆ ಆತ್ಮಹತ್ಯೆಯ ಚಿಕಿತ್ಸೆ; ಧ್ರುವನಿಗರಮನೆಯಲ್ಲೆ ಜನ್ಮ ಟಾಪು; ಋಷಿಗೆ ಹುಚ್ಚಾಸ್ಪತ್ರೆ, ಕವಿಗೆ ಸಾಪಾಟು;’’ ಎಂದು ಬರೆದಿದ್ದರು. ಹಿನ್ನೆಲೆಯಲ್ಲಿ, ಮೌಲ್ಯಗಳಿಗಾಗಿ ಸದಾ ಹೋರಾಡುತ್ತ, ಭಿನ್ನರಾಗಿ, ವ್ಯವಸ್ಥೆಯ ಸ್ಥಿತ್ಯಂತರಗಳನ್ನು ಗುರುತಿಸಿ, ತನ್ನ ಪೀಠಭದ್ರತೆಯನ್ನು ಗೌಣವಾಗಿಸುವ ಬದುಕೇ ಬದುಕು. ಉಳಿದದ್ದೆಲ್ಲ ಹುಳಿಹುಳುಕು. ನೋವಿನ ಹಲ್ಲಿನ ಕಡೆಗೆ ನಾಲಗೆಯು ಆಗಾಗ ಹೊರಳುತ್ತಿರುತ್ತದಂತೆ. ಇಂದು ದೇಶದಲ್ಲಿರುವ ಸಮಾಜದಲ್ಲಿರುವ ಗೊಂದಲಮಯ ವಾತಾವರಣವನ್ನು ಕಂಡಾಗ ಅಡಿಗರ ಈ ಕವನಗಳು (ಅವನ್ನು ಓದಿದ್ದರೆ) ಮತ್ತು ಅಂತಹ ಸೃಜನಶೀಲ ಕೃತಿಗಳು ಖಂಡಿತಾ ನೆನಪಾಗಬೇಕು. ಓದದೇ ಇದ್ದವರು ಒಮ್ಮೆಯಾದರೂ ಓದಲೇಬೇಕು.