ಈ ಭೂಮಿ ಮನುಷ್ಯನಿಗೆ ಮಾತ್ರ ಸೇರಿಲ್ಲ

Update: 2024-11-05 06:33 GMT

ಸಾಂದರ್ಭಿಕ ಚಿತ್ರ PC: freepik

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ವನ್ಯ ಜೀವಿಗಳ ಸಂರಕ್ಷಣೆಯ ಜೊತೆಗೆ ಕಾಡು ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಘರ್ಷಗಳ ವರದಿಗಳು ಆಗಾಗ ಬರುತ್ತಲೇ ಇವೆ. ಆದರೂ ಕರ್ನಾಟಕದಲ್ಲಿ ವನ್ಯ ಜೀವಿಗಳ ಸಂಖ್ಯೆ ಹೆಚ್ಚುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅದರಲ್ಲೂ ವಿಶೇಷವಾಗಿ ಆನೆ ಮತ್ತು ಹುಲಿಗಳ ಸಂಖ್ಯೆಯನ್ನು ಗಮನಿಸಿದರೆ ಕರ್ನಾಟಕ ಎರಡನೇ ಸ್ಥಾನದಲ್ಲಿ ಇದೆ. ಚಿರತೆಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಒಂದು ದೃಷ್ಟಿಯಿಂದ ಇದು ಹೆಮ್ಮೆ ಪಡಬೇಕಾದ ಸಂಗತಿಯಾದರೂ ಇದರ ಜೊತೆ ಜೊತೆಗೆ ಕೆಲವು ಆತಂಕದ ಸಂಗತಿಗಳು ವರದಿಯಾಗುತ್ತಲೇ ಇವೆ.

ಅರಣ್ಯ ಇಲಾಖೆಯ ದಾಖಲೆಗಳ ಪ್ರಕಾರ ವನ್ಯಜೀವಿಗಳೊಂದಿಗೆ ಮನುಷ್ಯನ ಸಂಘರ್ಷ ತೀವ್ರವಾಗುತ್ತಿದೆ. ಪದೇ ಪದೇ ಪ್ರಾಣಿಗಳ ಹಾವಳಿ ಜಾಸ್ತಿಯಾಗುವುದರ ಜೊತೆಗೆ ಹಾಸನ, ಕೊಡಗು, ಚಾಮರಾಜನಗರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಕಾಡು ಪ್ರಾಣಿಗಳು ಹೊಲಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುತ್ತಿರುವುದು ನಿತ್ಯದ ಸಂಗತಿಯಾಗಿದೆ.

ಅದರಲ್ಲೂ ವಿಶೇಷವಾಗಿ ಪಶ್ಚಿಮ ಘಟ್ಟಗಳ ಬಹುತೇಕ ಎಲ್ಲ ತಾಲೂಕುಗಳಲ್ಲಿ ಕೋತಿ, ಕಾಡು ಹಂದಿ ಮೊದಲಾದ ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಘರ್ಷ ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಚಿಕ್ಕ ಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಕೂಡ ಪ್ರಾಣಿಗಳು ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ.ಇಂತಹ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರತಿನಿತ್ಯವೂ ವರದಿಯಾಗುತ್ತಲೇ ಇವೆ.

ಇಂತಹ ಸುದ್ದಿಗಳು, ‘ಪ್ರಾಣಿಗಳ ಹಾವಳಿ’ ಎಂಬ ತಲೆ ಬರಹದಡಿಯಲ್ಲಿ ಪ್ರಕಟವಾಗುತ್ತಿವೆ. ವಾಸ್ತವ ಸಂಗತಿಯೆಂದರೆ ಯಾರಿಂದ, ಎಲ್ಲಿ ಹಾವಳಿ ಎಂಬುದನ್ನು ವಸ್ತುನಿಷ್ಠವಾಗಿ ಅವಲೋಕಿಸಿದರೆ ಹಲವಾರು ಸಂಗತಿಗಳು ಕಣ್ಣಿಗೆ ಗೋಚರಿಸುತ್ತಿವೆ. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಅನೇಕ ಕಾರಣಗಳಿದ್ದರೂ ಬಹು ಮುಖ್ಯವಾದುದು ವನ್ಯಜೀವಿಗಳು ಸಂಚರಿಸುವ ದಾರಿಯಲ್ಲಿ ಮತ್ತು ವಾಸ ಮಾಡುತ್ತಿರುವ ತಾಣಗಳಲ್ಲಿ ಮನುಷ್ಯರ ಅತಿಕ್ರಮಣ ಜಾಸ್ತಿಯಾಗುತ್ತಿರುವುದು. ಎಲ್ಲಿ ಪ್ರಾಣಿಗಳ ವಾಸ ಸ್ಥಾನವಿದೆಯೋ ಅಂಥಲ್ಲಿ ರಸ್ತೆ, ಕೃಷಿ, ರೆಸಾರ್ಟ್‌ಗಳೆಂದು ಮಾಡಿಕೊಂಡ ಪರಿಣಾಮವಾಗಿ ನೆಲೆ ಕಳೆದುಕೊಂಡ ಮೂಕ ಪ್ರಾಣಿಗಳು ನೆಲೆ ಮತ್ತು ನೀರನ್ನು ಅರಸಿ ಎಲ್ಲೆಲ್ಲೋ ಕಾಣಿಸಿಕೊಳ್ಳುತ್ತಿವೆ.

ಸರಕಾರವೇನೋ ಅಲ್ಲಲ್ಲಿ ಪ್ರಾಣಿಗಳಿಗಾಗಿ ಸಂರಕ್ಷಿತ ವನ್ಯಧಾಮಗಳನ್ನು ಮಾಡುತ್ತಿದ್ದರೂ ಅಂಥಲ್ಲಿ ಕೂಡ ಲಂಟಾನ, ಯುಪಟೊರಿಯಂನಂತಹ ಕಳೆ ಸಸ್ಯಗಳು ಹೆಚ್ಚುತ್ತಿರುವುದರಿಂದ ಸಸ್ಯಾಹಾರಿ ಪ್ರಾಣಿಗಳು ಆಹಾರ ಮತ್ತು ನೀರನ್ನು ಹುಡುಕಿಕೊಂಡು ಅಲೆದಾಡುತ್ತವೆ. ಕಾಡು ಪ್ರಾಣಿಗಳು ತಮ್ಮ ಪ್ರದೇಶ ಬಿಟ್ಟು ಅಲೆದಾಡುತ್ತಿವೆ. ಪ್ರಾಣಿಗಳು ತಮ್ಮ ಗಡಿ ದಾಟಿ ಹೊರಗೆ ಬಾರದಂತೆ ಅನುಕೂಲಸ್ಥ ಗ್ರಾಮೀಣ ಪ್ರದೇಶದ ಕೃಷಿಕರು ತಮ್ಮ ಹೊಲಗಳಿಗೆ ವಿದ್ಯುತ್ ಬೇಲಿಯನ್ನು ಹಾಕಿದ ಪರಿಣಾಮವಾಗಿ ಅಮಾಯಕ ಪ್ರಾಣಿಗಳು ತಂತಿ ಬೇಲಿಗೆ ಬಲಿಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ನೀರು ಮತ್ತು ಆಹಾರಕ್ಕಾಗಿ ಹುಡುಕಿಕೊಂಡು ಹೊರಟರೆ ಗ್ರಾನೈಟ್ ಗಣಿಗಾರಿಕೆ, ವಿದ್ಯುತ್ ಬೇಲಿ ಮತ್ತು ರೆಸಾರ್ಟ್‌ಗಳು, ಹೋಂ ಸ್ಟೇಗಳು ಎದುರಾಗುತ್ತವೆ. ಹೀಗಾಗಿ ಪ್ರಾಣಿಗಳು ಹಾಗೂ ಮನುಷ್ಯರ ನಡುವಿನ ಸಂಘರ್ಷ ನಿತ್ಯದ ಸಂಗತಿಯಾಗಿದೆ.

ಮಾರುಕಟ್ಟೆ ಸಂಸ್ಕೃತಿ ವ್ಯಾಪಿಸುತ್ತಿರುವ ಈ ದಿನಗಳಲ್ಲಿ ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಘರ್ಷ ಅನಿವಾರ್ಯವಾಗುತ್ತಿದೆ. ಇದಕ್ಕೆ ಕೇಂದ್ರ ಸರಕಾರದ ಅರಣ್ಯ ನೀತಿಯೂ ಕಾರಣವಾಗಿದೆ. ಹಾವೂ ಸಾಯಬಾರದು ಮತ್ತು ಕೋಲೂ ಮುರಿಯಬಾರದು ಎಂಬಂತೆ ಇರುವ ಅರಣ್ಯ ನೀತಿ ದೋಷಪೂರಿತವಾಗಿರುವುದೇ ಇದಕ್ಕೆ ಕಾರಣವಾಗಿದೆ.

ನಮ್ಮ ದೇಶದ ವನ್ಯ ಸಂರಕ್ಷಣಾ ನೀತಿ ಅವೈಜ್ಞಾನಿಕ ಮಾತ್ರವಲ್ಲದೆ ಜನವಿರೋಧಿಯಾಗಿದೆ. ಅಷ್ಟೇ ಅಲ್ಲ ಇದು ನಿಸರ್ಗ ವಿರೋಧಿಯಾಗಿದೆ. ಆದ್ದರಿಂದ ಕಾಲ ಬಾಹಿರವಾದ ಅರಣ್ಯ ನೀತಿಯನ್ನು ಕೂಡಲೇ ಬದಲಿಸಬೇಕಾಗಿದೆ ಎಂದು ಡಾ. ಮಾಧವ ಗಾಡ್ಗೀಳ್‌ರಂತಹ ಪರಿಣಿತರು ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಕಾನೂನಿನಲ್ಲಿ ಇರುವ ಲೋಪ ದೋಷಗಳನ್ನು ಪುನರ್ ಪರಿಶೀಲಿಸಬೇಕಾಗಿದೆ.

ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿರುವ ಮಂಗಗಳ ಹಾವಳಿಯನ್ನು ತಡೆಯಲು ಹಿಮಾಚಲ ಪ್ರದೇಶಗಳಲ್ಲಿ ಅವುಗಳ ಸಂತಾನ ನಿಯಂತ್ರಣಕ್ಕಾಗಿ ಸರಕಾರ ಕ್ರಮ ಕೈಗೊಂಡಂತೆ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಮಾರಕವಾಗಿರುವ ಪ್ರಾಣಿಗಳ ಜನನ ನಿಯಂತ್ರಣ ಸಾಧ್ಯವೇ ಎಂಬ ಬಗ್ಗೆ ಸರಕಾರ ಪರಿಶೀಲನೆ ನಡೆಸಬೇಕಾಗಿದೆ.

ಕರ್ನಾಟಕದಲ್ಲಿ ವನ್ಯ ಜೀವಿಗಳು ಮತ್ತು ಮನುಷ್ಯರ ನಡುವಿನ ಸಂಘರ್ಷ ಹೆಚ್ಚುತ್ತಿರುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ ತರಬೇತಿ ಪಡೆದ ಸ್ಥಳೀಯರನ್ನು ಜನ ಜಾಗೃತಿ ಮತ್ತು ಭದ್ರತೆಗೆಂದು ನಿಯೋಜಿಸಬೇಕಾಗಿದೆ. ಈ ಜಗತ್ತು ಕೇವಲ ಮನುಷ್ಯ ಜೀವಿಗಳದ್ದಲ್ಲ. ಈ ಭೂಮಿ ಇರುವೆಯಿಂದ ಆನೆಗಳವರೆಗೆ ಎಲ್ಲ ಪ್ರಾಣಿಗಳು ಹಾಗೂ ಪಕ್ಷಿಗಳ ವಾಸಿಸುವ ತಾಣವಾಗಿದೆ. ಹಾಗಾಗಿ ಸಂಪತ್ತಿಗಾಗಿ ತಮ್ಮ ತಮ್ಮಲ್ಲಿ ಹೊಡೆದಾಡುವ ಮನುಷ್ಯರು ಇಳೆಯ ಮೇಲೆ ಸಕಲ ಜೀವಿಗಳ ಜೊತೆಗೆ ಬದುಕಬೇಕಾಗಿದೆ.

ಪ್ರತೀ ಹನಿ ನೀರು, ಆಹಾರದಲ್ಲಿ ಪ್ರಾಣಿಗಳಿಗೂ ಹಕ್ಕಿದೆ ಎಂಬುದನ್ನು ಮರೆಯಬಾರದು. ಪ್ರಾಣಿಗಳು ಮತ್ತು ಪಕ್ಷಿಗಳ ಜೊತೆಗೆ ಸಹಜವಾಗಿ ಬದುಕುವ ಅನಿವಾರ್ಯತೆಯನ್ನು ಮನುಷ್ಯರು ಅರ್ಥ ಮಾಡಿಕೊಳ್ಳಬೇಕಾಗಿದೆ. ಆದರೆ ಮನುಷ್ಯರಿಂದ ಮನುಷ್ಯರ ಶೋಷಣೆಗೆ ಕಾರಣವಾಗಿರುವ ಲಾಭಕೋರ ಬಂಡವಾಳಶಾಹಿಯನ್ನು ನಿಯಂತ್ರಿಸಿ ಸಕಲ ಜೀವಿಗಳು ಸೌಹಾರ್ದದಿಂದ ಬದುಕುವ ವ್ಯವಸ್ಥೆ ಸೂಕ್ಷ್ಮವಾಗಿದೆ.

ವನ್ಯ ಜೀವಿಗಳ ಪರ ಯೋಜನೆಗಳನ್ನು ಸರಕಾರ ರೂಪಿಸಿರುವುದು ವನ್ಯ ಜೀವಿಗಳ ಸಂರಕ್ಷಣೆಗಾಗಿಯೇ ಹೊರತು ದುಡ್ಡು ದೋಚುವ, ಗಣಿಗಾರಿಕೆ, ರೆಸಾರ್ಟ್‌ಗಳು ಹಾಗೂ ಕಾರ್ಖಾನೆಗಳಿಗಾಗಿ ಅಲ್ಲ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News