ಲೋಪಗಳ ಮಧ್ಯೆಯೂ ಇಷ್ಟವಾಗುವ ಪುಷ್ಪಕ ವಿಮಾನ

Update: 2017-01-07 18:43 GMT

ಎಸ್.ರವೀಂದ್ರನಾಥ್ ನಿರ್ದೇಶನದ ಪುಷ್ಪಕ ವಿಮಾನ, ದಕ್ಷಿಣ ಕೊರಿಯದ ಹೃದಯಸ್ಪರ್ಶಿ ಚಿತ್ರ ‘ಮಿರಾಕಲ್ಸ್ ಇನ್ ಸೆಲ್ ನಂ.7’ನ ಪಡಿಯಚ್ಚಿನಂತಿದೆ. ಚಿತ್ರದ ಬಹುತೇಕ ಭಾಗಗಳು ಫ್ರೇಮ್‌ನಿಂದ ಫ್ರೇಮ್‌ಗೆ ಮೂಲಚಿತ್ರವನ್ನು ಭಟ್ಟಿಯಿಳಿಸಿದಂತಿದೆ. ಆದರೆ ಕೊರಿಯನ್ ಚಿತ್ರದ ಕಥೆ, ಸನ್ನಿವೇಶ ಹಾಗೂ ಪಾತ್ರಗಳಲ್ಲಿರುವ ಸೂಕ್ಷ್ಮತೆಗಳನ್ನು ಸಮರ್ಥವಾಗಿ ವ್ಯಕ್ತಪಡಿಸುವಲ್ಲಿ ಪುಷ್ಪಕ ವಿಮಾನ ಎಡವಿರುವುದಂತೂ ಸ್ಪಷ್ಟವಾಗಿ ಕಾಣುತ್ತಿದೆ.

ಪುಷ್ಪಕ ವಿಮಾನ ಕನ್ನಡದ ಪ್ರತಿಭಾವಂತ ನಟ ರಮೇಶ್ ಅರವಿಂದ್ ಅವರ 100ನೆ ಚಿತ್ರವೆಂಬ ಕಾರಣಕ್ಕಾಗಿ ಬಿಡುಗಡೆಗೆ ಮೊದಲೇ ಗಮನಸೆಳೆದಿತ್ತು. ಚಿತ್ರದ ಕಥೆಯು ಭಾವಾನಾತ್ಮಕವಾಗಿದ್ದರೂ ರಮೇಶ್ ಆಗಾಗ ನಮ್ಮನ್ನು ನಗಿಸುತ್ತಲೇ ಇರುತ್ತಾರೆ. ತಂದೆ ಮತ್ತು ಮಗಳ ವಾತ್ಸಲ್ಯವನ್ನು ಕಂಡು ಪ್ರೇಕ್ಷಕರ ಕಣ್ಣುಗಳು ತೇವವಾಗುವುದಂತೂ ಖಂಡಿತ.

ಮಾನಸಿಕ ಅಸ್ವಸ್ಥ ತಂದೆ ಅನಂತರಾಮಯ್ಯ (ರಮೇಶ್) ಹಾಗೂ ಆತನ ಮುದ್ದಿನ ಮಗಳು ಪುಟ್ಟು (ಬಾಲನಟಿ ಯುವಿನಾ ಪಾರ್ಥವಿ) ಇಬ್ಬರಿಗೂ ವಿಮಾನವೆಂದರೆ ಪಂಚಪ್ರಾಣ. ತನ್ನ ಮಗಳಿಗೆ ಆಟಿಕೆ ವಿಮಾನವನ್ನು ತೆಗೆದುಕೊಡುವ ಪ್ರಯತ್ನದಲ್ಲಿ ಆತ ಕೊಲೆ ಆರೋಪ ಎದುರಿಸಬೇಕಾಗುತ್ತದೆ. ತನ್ನ ಮಗಳ ವಯಸ್ಸಿನದೇ ಬಾಲಕಿಯನ್ನು ಕೊಂದ ಆರೋಪದಲ್ಲಿ ಆತ ಜೈಲು ಸೇರುತ್ತಾನೆ. ಕಾನೂನು ಹಾಗೂ ನ್ಯಾಯಾಲಯ ಅಮಾಯಕ ಅನಂತರಾಮಯ್ಯನ ಮುಂದೆ ಕುರುಡಾಗುತ್ತದೆ. ಜೈಲಿನಲ್ಲಿರುವ ತನ್ನ ತಂದೆಯನ್ನು ಭೇಟಿಯಾಗುವುದಕ್ಕಾಗಿ ಜೈಲಿನೊಳಗೆ ನುಸುಳುವ ಮಗಳು ಹಾಗೂ ಅದಕ್ಕೆ ಸಹಕೈದಿಗಳು ನೀಡುವ ಸಹಕಾರ, ನ್ಯಾಯಕ್ಕಾಗಿ ಆತ ನಡೆಸುವ ಹೋರಾಟ ಇವೆಲ್ಲವೂ ನಗಿಸುವ ಜೊತೆಗೆ ಭಾವುಕತೆಯನ್ನು ಸೃಷ್ಟಿಸುತ್ತದೆ.

ನಿರ್ದೇಶಕರು ಕಥೆಯಲ್ಲಿ ದೃಶ್ಯರೂಪಕ್ಕಿಂತ ಸಂಭಾಷಣೆಗೆ ಹೆಚ್ಚು ಒತ್ತು ನೀಡಿರುವುದು ಈ ಚಿತ್ರದ ಅತೀ ದೊಡ್ಡ ಮೈನಸ್ ಪಾಯಿಂಟ್ ಆಗಿದೆ. ಇದರ ಬದಲು ಅವರು ತಂದೆ-ಮಗಳ ಬಾಂಧವ್ಯಗಳನ್ನು ಸನ್ನಿವೇಶಗಳ ಮೂಲಕ ಹೆಚ್ಚಾಗಿ ಬಿಂಬಿಸಲು ಯತ್ನಿಸಿದಲ್ಲಿ ಪುಷ್ಪಕ ವಿಮಾನ ಇನ್ನೂ ಹೆಚ್ಚು ಎತ್ತರಕ್ಕೇರಬಹುದಿತ್ತೇನೋ. ಈ ಚಿತ್ರದಲ್ಲಿ ಪಾತ್ರಗಳು ತಮ್ಮ ಸೆಂಟಿಮೆಂಟ್ ದೃಶ್ಯಗಳಲ್ಲಿ ಕಿರುಚುವುದಕ್ಕೇ ಹೆಚ್ಚು ಸೀಮಿತವಾಗಿ ಬಿಡುತ್ತವೆ. ಇಂತಹ ಸಂಭಾಷಣೆಗಳ ಗದ್ದಲದಲ್ಲಿ ಪಾತ್ರಗಳಲ್ಲಿನ ಸೂಕ್ಷ್ಮತೆಗಳು ಕಳೆದುಹೋಗುತ್ತವೆ.

ಚಿತ್ರದ ಕೊನೆಗೆ ರುಚಿತಾ ರಾಮ್, ತಂದೆಯ ಬಗ್ಗೆ ಹೇಳುವ ಮಾತುಗಳು ತುಂಬಾ ನಾಟಕೀಯವಾಗಿ ಮೂಡಿಬಂದಿವೆ. ಜೈಲರ್ (ರವಿಕಾಳೆ) ಪುಟ್ಟುವನ್ನು ದತ್ತು ತೆಗೆದುಕೊಳ್ಳುವ ಸನ್ನಿವೇಶಗಳು ಅಗತ್ಯಕ್ಕೆ ತಕ್ಕಹಾಗೆ ಗಂಭೀರವಾಗಿ ಮೂಡಿಬಂದಿಲ್ಲ. ಇನ್ನು ಜೂಹಿಚಾವ್ಲಾ ಅಭಿನಯದ ಹಿಂದಿಮಿಶ್ರಿತ ‘ಜಿಲ್ಕಾ ಜಿಲ್ಕಾ’ ಹಾಡನ್ನು ಚಿತ್ರದಲ್ಲಿ ಅನಗತ್ಯವಾಗಿ ಸೇರಿಸಲಾಗಿದೆ.ಇದನ್ನು ಬಿಟ್ಟರೆ, ಚರಣ್‌ರಾಜ್ ಸಂಗೀತ ನಿರ್ದೇಶನದ ಇತರ ಹಾಡುಗಳು ಚಿತ್ರಕ್ಕೆ ಫ್ರೆಶ್‌ನೆಸ್ ತುಂಬಿವೆ. ಹಿನ್ನೆಲೆ ಸಂಗೀತ ಕೂಡಾ ಹೃದಯಸ್ಪರ್ಶಿಯಾಗಿದೆ. ಪುಷ್ಪಕ ವಿಮಾನವು ಪ್ರೇಕ್ಷಕರನ್ನು ಸೀಟಿನ ಅಂಚಿನಲ್ಲಿ ತಂದುಕೂರಿಸುವಂತಹ ಥ್ರಿಲ್ಲರ್ ಚಿತ್ರವಲ್ಲದಿದ್ದರೂ, ತಂದೆ-ಮಗಳ ಬಾಂಧವ್ಯದ ಭಾವುಕ ಸನ್ನಿವೇಶಗಳು ನಿಮ್ಮ ಚಿತ್ತವನ್ನು ತೆರೆಯ ಮೇಲಿಂದ ಕದಲದಂತೆ ಮಾಡುವಲ್ಲಿ ಸಫಲವಾಗಿವೆ.

ಅನಂತರಾಮಯ್ಯ ಜೈಲಿನಿಂದ ಪರಾರಿಯಾಗುವ ಯತ್ನದಲ್ಲಿ ಕಾರಿನ ಡಿಕ್ಕಿಯಡಿ ಬಚ್ಚಿಟ್ಟುಕೊಂಡಿರುತ್ತಾನೆ. ಆದರೆ ಜೈಲಿನ ಗೇಟಿನ ಮೇಲೆ ವಿಮಾನ ಹಾರಾಟದ ಸದ್ದು ಕೇಳಿದಾಗ, ರೋಮಾಂಚನಗೊಂಡ ಆತ ಕಾರಿನ ಡಿಕ್ಕಿಯನ್ನು ತೆರೆದು ಸಂಭ್ರಮಿಸುವ ದೃಶ್ಯ ತುಂಬಾ ಸುಂದರವಾಗಿ ಮೂಡಿಬಂದಿದೆ.

ಇನ್ನು ಅಭಿನಯದ ಮಟ್ಟಿಗೆ ಹೇಳುವುದಾದರೆ, ಪ್ರತಿಯೊಬ್ಬ ಕಲಾವಿದರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ತನ್ನ 100ನೆ ಚಿತ್ರದ ಬಗ್ಗೆ ಅಭಿಮಾನಿಗಳು ಇರಿಸಿದ್ದ ಭರವಸೆಯನ್ನು ನಾಯಕನಟ ರಮೇಶ್ ಹುಸಿಗೊಳಿಸಿಲ್ಲ. ಬುದ್ಧಿಮಾಂದ್ಯನ ಪಾತ್ರದಲ್ಲಿ ಅವರ ಅಭಿನಯ ತುಂಬಾ ಚೆನ್ನಾಗಿ ಮೂಡಿಬಂದಿದೆಯಾದರೂ, ಕೆಲವೆಡೆ ಒತ್ತಾಯಪೂರ್ವಕವಾಗಿ ಅವರು ತನ್ನ ಮುಗ್ಧತೆಯನ್ನು ತೋರ್ಪಡಿಸಿಕೊಳ್ಳುತ್ತಿರುವ ಹಾಗೆ ಭಾಸವಾಗುತ್ತದೆ. ಬಾಲನಟಿ ಯುವಿನಾ ಪಾರ್ಥವಿಯ ಪಾತ್ರಕ್ಕೆ ಇನ್ನೂ ಹೆಚ್ಚಿನ ಮುಗ್ಧತೆ ಹಾಗೂ ತುಂಟತನ ತುಂಬಿದ್ದರೆ ಇನ್ನೂ ಒಳ್ಳೆಯದಿತ್ತು. ರವಿಕಾಳೆ ಜೈಲರ್ ಪಾತ್ರಕ್ಕೆ ಜೀವತುಂಬಿದ್ದಾರೆ. ಅನಂತರಾಮಯ್ಯನ ಬೆಳೆದ ಮಗಳು ಪುಟ್ಟು ವಾಗಿ ರುಚಿತಾ ರಾಮ್ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರಾದರೂ, ಚೊಕ್ಕವಾದ ಅಭಿನಯ ನೀಡಿ, ಗಮನಸೆಳೆಯುತ್ತಾರೆ.

ಯುವ ನಿರ್ದೇಶಕ ಎಸ್.ರವೀಂದ್ರನಾಥ್ ಅವರ ಪರಿಶ್ರಮ ಚಿತ್ರದುದ್ದಕ್ಕೂ ಎದ್ದುಕಾಣುತ್ತದೆ.ಅದರೆ ಅವರು ಚಿತ್ರದಲ್ಲಿ ಎಲ್ಲ ಸನ್ನಿವೇಶಗಳನ್ನು ಆಕರ್ಷಕವಾಗಿ ಹಾಗೂ ಸ್ಟೈಲಿಶ್ ಆಗಿ ತೋರಿಸುವ ಹಂಬಲದಿಂದಾಗಿ, ನೈಜತೆ ಮಾಯವಾಗಿಬಿಡುತ್ತದೆ. ಉದಾಹರಣೆಗೆ ಆಟಿಕೆ ವಿಮಾನವನ್ನು ಕೊಂಡುಕೊಳ್ಳಲು ಹಣವನ್ನು ಕೂಡಿಹಾಕುವ ತಂದೆ-ಮಗಳ ಮನೆ, ಪರಿಸರ ಶ್ರೀಮಂತವಾಗಿ ಕಂಡುಬರುತ್ತದೆ. ಜೊತೆಗೆ ಕೈದಿಗಳು ಮೇಜಿನ ಸುತ್ತ ಕುಳಿತು ಉಣ್ಣುವುದು ಇವೆಲ್ಲವೂ ಸಹಜತೆಗೆ ದೂರವಾಗಿದೆ. ಭುವನ್ ಅವರ ಸುಂದರ ಛಾಯಾಗ್ರಹಣವು ಪುಷ್ಪಕವಿಮಾನಕ್ಕೆ ತೋರಣಕಟ್ಟಿದೆ.
ಪುಷ್ಪಕ ವಿಮಾನವು ಮಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸದಂತಹ ಚಿತ್ರವಲ್ಲವೆಂಬುದು ನಿಜ. ಆದರೆ ಹದವಾದ ನಿರೂಪಣೆ, ಭಾವನಾತ್ಮಕ ಸಂಭಾಷಣೆಗಳು ಮತ್ತು ಕಲಾವಿದರ ಉತ್ತಮ ಅಭಿನಯದಿಂದಾಗಿ, ಇದೊಂದು ಸ್ಯಾಂಡಲ್‌ವುಡ್ ಪ್ರೇಕ್ಷಕರಿಗೆ ಹೊಸ ವರ್ಷದ ಒಂದು ಉತ್ತಮ ಕೊಡುಗೆ ಎಂದರೆ ತಪ್ಪಾಗಲಾರದು.

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News