ಬಿ.ಎಸ್.ಯಡಿಯೂರಪ್ಪ - ಕೆ.ಎಸ್.ಈಶ್ವರಪ್ಪ ಕಲಹ : ಜಾಣ ಮೌನಕ್ಕೆ ಶರಣಾದರಾ ಬಿಜೆಪಿಯ ಮುಖಂಡರು?

Update: 2017-01-13 14:23 GMT

ಶಿವಮೊಗ್ಗ, ಜ. 13: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಿಸಿದಂತೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಡುವಿನ ಕಲಹ ತಾರಕಕ್ಕೇರಿದೆ. ಬ್ರಿಗೇಡ್ ಜೊತೆ ಗುರುತಿಸಿಕೊಂಡವರ ವಿರುದ್ಧ ಯಡಿಯೂರಪ್ಪರವರು ’ಉಚ್ಚಾಟನೆ’ಯ ಗದಾ ಪ್ರಹಾರ ನಡೆಸಲಾರಂಭಿಸಿದ್ದಾರೆ. ಮತ್ತೊಂದೆಡೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈಶ್ವರಪ್ಪರವರು ಬ್ರಿಗೇಡ್ ಚಟುವಟಿಕೆಯಲ್ಲಿ ಭಾಗಿಯಾಗಿಯೇ ಸಿದ್ಧ ಎಂದು ಘೋಷಿಸಿದ್ದಾರೆ.

ಈಗಾಗಲೇ ಬಿ.ಎಸ್.ವೈ. ಹಾಗೂ ಕೆ.ಎಸ್.ಇ. ಪರಸ್ಪರ ತೊಡೆ ತಟ್ಟಿ ನಿಂತುಕೊಂಡು ಹಲವು ತಿಂಗಳಾಗುತ್ತ ಬಂದಿದೆ. ಶಿಸ್ತಿನ ಪಕ್ಷದಲ್ಲಿ ಅಶಿಸ್ತು ತಾಂಡವಾಡುತ್ತಿವೆ. ಸಾರ್ವಜನಿಕವಾಗಿಯೂ ಈ ವಿಷಯ ವ್ಯಾಪಕ ಚರ್ಚೆಯಾಗುತ್ತಿದೆ. ಹಾದಿ-ಬೀದಿ ರಂಪವಾಗಿ ಮಾರ್ಪಟ್ಟಿದೆ. ಪಕ್ಷದ ವರ್ಚಸ್ಸಿಗೆ ಸಾಕಷ್ಟು ಧಕ್ಕೆ ಉಂಟು ಮಾಡುತ್ತಿದೆ.
ಆದರೆ ಇಷ್ಟೆಲ್ಲ ನಡೆಯುತ್ತಿದ್ದರೂ ಆ ಪಕ್ಷದ ಪ್ರಭಾವಿ - ಹಿರಿಯ ಮುಖಂಡರು ಮಾತ್ರ ತುಟಿ ಬಿಚ್ಚುತ್ತಿಲ್ಲ. ಯಾರೊಬ್ಬರ ಪರವಾಗಿಯೂ ಮಾತನಾಡುತ್ತಿಲ್ಲ. ಸಮಾಧಾನಗೊಳಿಸುವ ಗೋಜಿಗೂ ಹೋಗುತ್ತಿಲ್ಲ. ಜಾಣ ಮೌನಕ್ಕೆ ಶರಣಾಗಿರುವುದು ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ.
 

ಬಣ ರಾಜಕಾರಣ:

ಬಿಜೆಪಿಯಲ್ಲಿ ಬಣ ರಾಜಕಾರಣ ಮೊದಲಿನಿಂದಲೂ ಇದೆ. ಬಿ.ಎಸ್.ವೈ. ರಾಜ್ಯಾಧ್ಯಕ್ಷರಾದ ನಂತರ ತಮ್ಮ ಬೆಂಬಲಿಗರಿಗೆ ಪಕ್ಷದಲ್ಲಿ ಆದ್ಯತೆ ನೀಡುತ್ತಿದ್ದಾರೆಂಬ ಕಾರಣದಿಂದ ಹಲವು ಹಿರಿಯ ನಾಯಕರು ಮುನಿಸಿಕೊಂಡಿದ್ದಾರೆ. ಪಕ್ಷದ ರಾಷ್ಟ್ರಾಧ್ಯಕ್ಷರು ಹಾಗೂ ಇತರೆ ವರಿಷ್ಠರೊಂದಿಗೆ ಬಿ.ಎಸ್.ವೈ.ರವರು ಉತ್ತಮ ಸಂಬಂಧ ಹೊಂದಿರುವುದರಿಂದ ಹಲವು ಮುಖಂಡರು ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸುವ ಗೋಜಿಗೆ ಹೋಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಪಕ್ಷದ ವೇದಿಕೆಗಳಲ್ಲಿಯೂ ಧ್ವನಿ ಎತ್ತಲು ಸಾಧ್ಯವಾಗದೆ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಈ ನಡುವೆ ಕೆ.ಎಸ್.ಇ.ರವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿ, ಬಿ.ಎಸ್.ವೈ. ವಿರುದ್ದ ನೇರ ತೊಡೆ ತಟ್ಟಲಾರಂಭಿಸಿದ್ದು ವಿರೋಧಿ ಪಾಳೇಯಕ್ಕೆ ವರವಾಗಿ ಪರಿಣಮಿಸಿದ್ದು, ಬಿ.ಎಸ್.ವೈ. ವಿರುದ್ಧ ಧ್ವನಿ ಎತ್ತಲು ವೇದಿಕೆಯೊಂದು ಸಿಕ್ಕಂತಾಗಿದೆ. ಕೆ.ಎಸ್.ಇ. ಮೂಲಕ ಬಿ.ಎಸ್.ವೈ.ಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.

ಈ ಕಾರಣದಿಂದಲೇ ಕೆ.ಎಸ್.ಇ.ಗೆ ಪಕ್ಷದ ಹಲವು ಪ್ರಭಾವಿ ಮುಖಂಡರು ಒಳಗೊಳಗೆ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಬ್ರಿಗೇಡ್ ಚಟುವಟಿಕೆ ನಿಲ್ಲಿಸದಂತೆ ಸೂಚಿಸಿದ್ದಾರೆ. ಹಾಗೆಯೇ ಅವರ ಪರವಾಗಿ ರಾಷ್ಟ್ರೀಯ ಮುಖಂಡರ ಬಳಿ ವಕಾಲತ್ತು ವಹಿಸುತ್ತಿದ್ದಾರೆ. ಜೊತೆಗೆ ಪಕ್ಷದಲ್ಲಿ ಸಮನ್ವಯತೆಯ ಕೊರತೆಯಿದ್ದು, ಬಿ.ಎಸ್.ವೈ.ಗೆ ತಿಳಿ ಹೇಳುವ ಕೆಲಸ ಮಾಡಿ ಎಂದು ವರಿಷ್ಠರಿಗೆ ವುನವಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿಯೇ ಬಿ.ಎಸ್.ವೈ.ರವರು ಕೆ.ಎಸ್.ಇ. ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಹಲವು ಬಾರಿ ಮನವಿ ಮಾಡಿದರೂ ,  ರಾಷ್ಟ್ರೀಯ ಮುಖಂಡರು ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳಲು ಮುಂದಾಗುತ್ತಿಲ್ಲ. ಜೊತೆಗೆ ಕೆ.ಎಸ್.ಇ.ಗೆ ಬ್ರಿಗೇಡ್ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಯಾವುದೇ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡುತ್ತಿಲ್ಲವಾಗಿದೆ ಎಂದು ಆ ಪಕ್ಷದ ಮೂಲಗಳು ಮಾಹಿತಿ ನೀಡುತ್ತಿವೆ.

ಶಕ್ತಿ ಪ್ರದರ್ಶನ:

ಪಕ್ಷದ ಹಲವು ಹಿರಿಯ ಮುಖಂಡರು ತಮ್ಮ ಪರವಾಗಿ ನಿಂತುಕೊಂಡಿರುವುದು ಹಾಗೂ ವರಿಷ್ಠರ ಬಳಿ ತಮ್ಮ ಪರವಾಗಿ ಲಾಬಿ ನಡೆಸುತ್ತಿರುವುದನ್ನು ಮನಗಂಡಿರುವ ಕೆ.ಎಸ್.ಇ.ರವರು ಬಿ.ಎಸ್.ವೈ.ರವರ ಯಾವುದೇ ಎಚ್ಚರಿಕೆಗೂ ಸೊಪ್ಪು ಹಾಕುತ್ತಿಲ್ಲವಾಗಿದೆ. ಬ್ರಿಗೇಡ್ ಪರವಾಗಿ ಮತ್ತಷ್ಟು ಧ್ವನಿ ಏರಿಸಿ ಮಾತನಾಡಲಾರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಬ್ರಿಗೇಡ್ ಸಮಾವೇಶ ಆಯೋಜಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾರವರನ್ನು ಆಹ್ವಾನಿಸುವುದಾಗಿ ಹೇಳಿ, ಬಿ.ಎಸ್.ವೈ.ಗೆ ಟಾಂಗ್ ನೀಡುವ ಕೆಲಸ ನಡೆಸುತ್ತಿದ್ದಾರೆ.

ಬ್ರಿಗೇಡ್‌ಗೆ ಸಂಘಪರಿವಾರದ ಬೆಂಬಲ?
 ಕೆ.ಎಸ್.ಈಶ್ವರಪ್ಪ ಆರಂಭಿಸಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಘ ಪರಿವಾರದ ಮುಖಂಡರು ಕೂಡ ಪರೋಕ್ಷವಾಗಿ ಬೆಂಬಲವಾಗಿ ನಿಂತಿದ್ದಾರೆಂಬ ಮಾತುಗಳು ಬಿಜೆಪಿ ಪಾಳೇಯದಿಂದ ಕೇಳಿಬರುತ್ತಿದೆ. ಈಗಾಗಲೇ ಕೆ.ಎಸ್.ಇ.ರವರು ಬ್ರಿಗೇಡ್‌ನಲ್ಲಿ ತಾವು ಮುಂದುವರಿಯಬೇಕೇ? ಬೇಡವೇ? ಎಂಬುವುದರ ಬಗ್ಗೆ ಗುಪ್ತವಾಗಿ ಸಂಘ ಪರಿವಾರದ ಹಿರಿಯ ಮುಖಂಡರ ಸಲಹೆ-ಸೂಚನೆಗಳನ್ನು ಪಡೆದುಕೊಂಡಿದ್ದಾರೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿಯೇ ಕೆ.ಎಸ್.ಇ.ರವರು ಬಿ.ಎಸ್.ವೈ.ರವರ ತೀವ್ರ ವಿರೋಧ, ಗಂಭೀರ ಸ್ವರೂಪದ ಎಚ್ಚರಿಕೆಯ ನಡುವೆಯೂ ಬ್ರಿಗೇಡ್ ಚಟುವಟಿಕೆಯಲ್ಲಿ ಮುಂದುವರಿಯುವ ನಿರ್ಧಾರ ಮಾಡಲು ಮುಖ್ಯ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಮತ್ತೊಮ್ಮೆ ಚರ್ಚೆಗೆ ಮುಂದಾದ ವರಿಷ್ಠರು...
 ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಮರು ಸ್ಥಾಪಿಸುವ ಚಿಂತನೆಯಲ್ಲಿರುವ ಬಿಜೆಪಿ ರಾಷ್ಟ್ರ ಮುಖಂಡರು, ಪ್ರಸ್ತುತ ಕರ್ನಾಟಕ ಬಿಜೆಪಿಯಲ್ಲಿ ನಡೆಯುತ್ತಿರುವ ಅಹಿತಕರ ಬೆಳವಣಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬ್ರಿಗೇಡ್‌ಗೆ ಸಂಬಂಧಿಸಿದಂತೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಪೂರ್ಣ ಪ್ರಮಾಣದಲ್ಲಿ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ. ಇಷ್ಟರಲ್ಲಿಯೇ ಈ ಇಬ್ಬರೊಂದಿಗೆ ಮಾತುಕತೆ ನಡೆಸಿ ಸಮನ್ವಯತೆ ಮೂಡಿಸಲು ವರಿಷ್ಠರು ನಿರ್ಧರಿಸಿದ್ದಾರೆ ಎಂದು ಆ ಪಕ್ಷದ ಮೂಲಗಳು ಹೇಳುತ್ತಿವೆ.

’ಯಾವುದೇ ಕಾರಣಕ್ಕೂ ಪಕ್ಷ ತೊರೆಯಲ್ಲ...’
 ’ಕೆ.ಎಸ್.ಈಶ್ವರಪ್ಪರವರು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರು ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಶತಃಸಿದ್ದ. ಇದರಲ್ಲಿ ಯಾವುದೇ ಅನುಮಾನ ಬೇಡ. ಅವರು ನಡೆಸುತ್ತಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಪಕ್ಷದ ಹಿರಿಯ ಮುಖಂಡರು, ಸಂಘಪರಿವಾರದ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯ ಪ್ರಶ್ನೆಯಾಗಲಿ, ಅವರನ್ನು ಪಕ್ಷದಿಂದ ಉಚ್ಚಾಟಿಸುವ ಪ್ರಮೇಯವೇ ಉದ್ಭವವಾಗುವುದಿಲ್ಲ. ಇನ್ನಾದರೂ ಬಿ.ಎಸ್.ಯಡಿಯೂರಪ್ಪರವರು ವಾಸ್ತವ ಅರಿತುಕೊಳ್ಳಬೇಕಾಗಿದೆ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಶಿವಮೊಗ್ಗದ ಬಿಜೆಪಿಯ ಹಿರಿಯ ಮುಖಂಡರೂ, ಕೆ.ಎಸ್.ಇ. ಆಪ್ತ ಬೆಂಬಲಿರೊಬ್ಬರು ಅಭಿಪ್ರಾಯಪಡುತ್ತಾರೆ.

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News