ಭಾಗಶಃ ಅಂಧ ಮಮಿತಾ ಬಾಯಿಯ ಅದ್ಭುತ ಸಾಧನೆ
ಕಲಬುರ್ಗಿ, ಜ.24: ಇಪ್ಪತ್ತೊಂದು ವರ್ಷದ ಮಮಿತಾ ಬಾಯಿ ಕೆಪಿಎಸ್ಸಿಯ ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಇದೀಗ ತಮ್ಮ ಪೋಸ್ಟಿಂಗ್ ಗಾಗಿ ಕಾಯುತ್ತಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ ? ಮಮಿತಾ ಶೇ.50ರಷ್ಟು ದೃಷ್ಟಿಹೀನೆ. ಆಕೆಯ ದೃಷ್ಟಿ ದೋಷದ ಸಮಸ್ಯೆ ಅದೆಷ್ಟಿದೆಯೆಂದರೆ ವರ್ಷಗಳುರುಳಿದಂತೆ ಆಕೆ ಸಂಪೂರ್ಣ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ. ದುರಾದೃಷ್ಟವೆಂದರೆ ಆಕೆಯ ಹೆತ್ತವರು ಹಾಗೂ ಕುಟುಂಬ ಸದಸ್ಯರು ಆಕೆಯನ್ನು ಒಂದು ಹೊರೆಯೆಂದೇ ಪರಿಗಣಿಸಿದ್ದಾರೆ.
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬಿಕ್ಕುನಾಯಕ ತಂಡ ಎಂಬ ಗ್ರಾಮದ ಮಮಿತಾ ಹೇಳುವಂತೆ ಆಕೆಯ ದೃಷ್ಟಿ ದೋಷದಿಂದ ಆಕೆಯ ವಿವಾಹ ಮಾಡಿಸುವುದು ಕಷ್ಟವಾಗಲಿದೆಯೆಂಬುದೇ ಆಕೆಯ ಹೆತ್ತವರ ಅತಿ ದೊಡ್ಡ ಚಿಂತೆಯಾಗಿತ್ತು.
ತನ್ನ ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣದ ಬಳಿಕೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಚಿಡುಗುಪ್ಪ ಗ್ರಾಮದಲ್ಲಿರುವ ತನ್ನ ಸೋದರ ಮಾವನ ಮನೆಯಲ್ಲಿದ್ದುಕೊಂಡು ಹೈಸ್ಕೂಲಿಗೆ ಹೋಗಲಾರಂಭಿಸಿದರು. ಆಗ ಆಕೆಯ ಹೆತ್ತವರು ಆಕೆಯ ಮಾವನಿಗೆ ಆಕೆಯ ಜತೆ ಸಂಬಂಧವಿದೆಯೆಂದು ಸುಳ್ಳು ಹೇಳಿ ಆತ ಆಕೆಯನ್ನೇ ವಿವಾಹವಾಗುವಂತೆ ಮಾಡಲು ಪ್ರಯತ್ನಿಸಿದ್ದರು.
ಕೊನೆಗೆ ಬೇಸತ್ತು ಮಮಿತಾ ಯಾದಗಿರಿಗೆ ತೆರಳಿದರೂ, ಆಕೆಯನ್ನು ಮತ್ತೆ ಮನೆಗೆ ಕರೆದುಕೊಂಡು ಬಂದು ಬಂಧಿಯಾಗಿಸಿದ್ದರು. ಮೇ 2015ರಲ್ಲಿ ಬಿಎ ಪರೀಕ್ಷೆಗೆ ಹಾಜರಾಗಲಿದೆಯೆಂದು ಹೇಳಿ ಚಿಡುಗುಪ್ಪಗೆ ಬಂದ ಆಕೆ ಮತ್ತೆ ಮನೆಗೆ ಹಿಂದಿರುಗಿಲ್ಲ.
ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತೆ ಈಶ್ವರಮ್ಮ ಎಂಬವರ ಸಹಾಯದಿಂದ ಆಕೆ ಅಂಧರಿಗಾಗಿನ ಚ್ಯಾರಿಟೇಬಲ್ ಸಂಸ್ಥೆ ಬ್ಲೆಸ್ ಸೊಸೈಟಿ ಸೇರಿ ಕೆಪಿಎಸ್ಸಿ ಪರೀಕ್ಷೆ ತೇರ್ಗಡೆಯಾಗಿದ್ದಾರೆ. ಆದರೆ ದಾಖಲೆ ಪರಿಶೀಲನೆಗಾಗಿ ಕೆಪಿಎಸ್ಸಿಯಿಂದ ಆಕೆಯ ಮನೆಯ ವಿಳಾಸಕ್ಕೆ ಪತ್ರ ರವಾನೆಯಾಗಿದ್ದನ್ನು ಆಕೆಯ ಕುಟುಂಬ ಆಕೆಗೆ ತಿಳಿಸಿರಲೇ ಇಲ್ಲ. ಕೊನೆಗೆ ಸ್ನೇಹಿತೆಯೊಬ್ಬಳಿಂದ ಈ ಬಗ್ಗೆ ತಿಳಿದುಕೊಂಡು ಸಾಮಾಜಿಕ ಕಾರ್ಯಕರ್ತೆಯೊಬ್ಬರ ಮುಖಾಂತರ ಕೆಪಿಎಸ್ಸಿಯನ್ನು ಸಂಪರ್ಕಿಸಿದ್ದರು. ಹಲವಾರು ಕಚೇರಿಗಳನ್ನು ಅಲೆದಾಡಿದ ನಂತರ ಕೆಪಿಎಸ್ಸಿ ಕಾರ್ಯದರ್ಶಿ ಸುಬೋಧ್ ಯಾದವ್ ಅವರ ಮಧ್ಯ ಪ್ರವೇಶದಿಂದ ಎಲ್ಲವೂ ಸುಗಮವಾಗಿ ನಡೆದು ಇದೀಗ ತಮ್ಮ ಪೋಸ್ಟಿಂಗ್ ಗಾಗಿ ಕಾಯುತ್ತಿದ್ದಾರೆ.
ಭವಿಷ್ಯದಲ್ಲಿ ಸಂಪೂರ್ಣ ದೃಷ್ಟಿಹೀನೆಯಾದರೂ ಎಂತಹ ಪರಿಸ್ಥಿತಿಯನ್ನೂ ನಿಭಾಯಿಸಲು ತಾನು ಸಿದ್ಧಳಿದ್ದೇನೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಮಮಿತಾ.
ಕೃಪೆ:thehindu.com