ದಿಲ್ಲಿಯಲ್ಲೂ ಅಮ್ಮನಿಂದ ಚಿನ್ನಮ್ಮ

Update: 2017-02-11 18:35 GMT

ದಿಲ್ಲಿಯಲ್ಲೂ ಅಮ್ಮನಿಂದ ಚಿನ್ನಮ್ಮ
ಜಯಲಲಿತಾ ತಮ್ಮ ಜತೆಗೆ ಇದ್ದಾಗ ದಿಲ್ಲಿಯಲ್ಲಿರುವ ಸಂಸದರು ತಲೆ ಕೆಡಿಸಿಕೊಳ್ಳುತ್ತಿದ್ದ ಏಕೈಕ ವ್ಯಕ್ತಿ ಎಂದರೆ ಜಯಲಲಿತಾ. ಇದು ಈಗ ಕೂಡಾ ಬಹಳಷ್ಟು ಬದಲಾಗಿಲ್ಲ. ಸಂಸತ್ತಿನ ಬಜೆಟ್ ಅಧಿವೇಶನ ಆರಂಭದ ವೇಳೆಗೆ ಎಐಎಡಿಎಂಕೆಯ ಬಳಷ್ಟು ಮಂದಿ ಸಂಸದರು ತಮ್ಮ ಅಂಗಿಯ ಪಾರದರ್ಶಕ ಪಾಕೆಟ್‌ಗಳಲ್ಲಿ ಜಯಲಲಿತಾ ಭಾವಚಿತ್ರವನ್ನು ಒಯ್ಯುತ್ತಿದ್ದಾರೆ. ಅಂತೆಯೇ ಕೆಲವರು ವಿ.ಕೆ.ಶಶಿಕಲಾ ಅವರ ಫೋಟೊ ಕೂಡಾ ಒಯ್ಯುತ್ತಿದ್ದಾರೆ. ಇದನ್ನು ಗಮನಿಸಿದ ಆಡಳಿತ ಪಕ್ಷದ ಕೆಲ ಸಂಸದರು ಹಾಗೂ ಇತರರು ಈ ಬಗ್ಗೆ ಎಐಎಡಿಎಂಕೆ ಸಂಸದರನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ವಿಚಿತ್ರವೆಂದರೆ ಪನ್ನೀರ್ ಸೆಲ್ವಂ ಚಿತ್ರವನ್ನು ಯಾರೂ ಇಟ್ಟುಕೊಂಡಿಲ್ಲ. ಕನಿಷ್ಠ ದಿಲ್ಲಿಯಲ್ಲಾದರೂ ಶಶಿಕಲಾ ಅಧಿಕ ಬೆಂಬಲ ಹೊಂದಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಮಾಯಾವತಿ ಮರೆಯಬೇಡಿ..
ಉತ್ತರ ಪ್ರದೇಶದಲ್ಲಿ ಬಹುತೇಕ ರಾಜಕೀಯ ವಿಶ್ಲೇಷಕರು ಮಾಯಾವತಿಯನ್ನು ಮರೆತಂತಿದೆ. ಆದರೆ ರಾಜಕಾರಣಿಗಳು ಅಷ್ಟರ ಮಟ್ಟಿಗೆ ಮರೆತಿಲ್ಲ. ಇತ್ತೀಚಿನ ದಿನಗಳಲ್ಲಿ ಮಾಯಾವತಿ ಅಚ್ಚರಿಯ ಪ್ರಗತಿ ಸಾಧಿಸಿ, ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಬಿಜೆಪಿ ಹಾಗೂ ಎಸ್ಪಿ- ಕಾಂಗ್ರೆಸ್ ಮೈತ್ರಿಕೂಟಕ್ಕೂ ತಲೆನೋವಾಗಿದೆ. ಬಿಜೆಪಿ ಏಕೈಕ ದೊಡ್ಡಪಕ್ಷವಾಗಿ ಹೊರಹೊಮ್ಮಿ, ಬಿಎಸ್ಪಿ ಉತ್ತಮ ಸಾಧನೆ ಮಾಡಿದರೆ ಉದ್ಭವಿಸಬಹುದಾದ ರಾಜಕೀಯ ಚಿತ್ರಣದ ಬಗ್ಗೆ ದಿಲ್ಲಿಯಲ್ಲಿ ಚರ್ಚೆಗಳು ನಡೆಯುತ್ತಿವೆ. ಸಮಾಜವಾದಿ ಪಕ್ಷಕ್ಕಿಂತ ಅಧಿಕ ಸ್ಥಾನಗಳನ್ನು ಮಾಯಾವತಿ ಪಡೆದರೆ, ಕಾಂಗ್ರೆಸ್ ಆ ಪಕ್ಷವನ್ನು ಬೆಂಬಲಿಸುವ ಸಾಧ್ಯತೆ ಇದೆ ಎಂದೂ ವಿಶ್ಲೇಷಿಸಲಾಗುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಯಾವತಿ ವಿರುದ್ಧ ಹರಿಹಾಯ್ದಿಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಇದಕ್ಕೆ ದನಿಗೂಡಿಸದಿರುವುದು ಈ ಊಹೆಗೆ ಕಾರಣವಾಗಿದೆ. ರಾಹುಲ್‌ಗಾಂಧಿಯವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹುಬ್ಬೇರಿಸಿಕೊಂಡು, ಮಾಯಾವತಿ ಬಗ್ಗೆ ವೈಯಕ್ತಿಕವಾಗಿ ನನಗೆ ಅಪಾರ ಗೌರವ ಇದೆ ಎಂದು ಹೇಳಿದ್ದರು. ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಹೊರಗಿಡುವ ಸಲುವಾಗಿ ಬಿಜೆಪಿ, ಮಾಯಾವತಿಯವರಿಗೆ ಬೆಂಬಲ ನೀಡಿದರೂ ಅಚ್ಚರಿಯಲ್ಲ ಎಂಬ ವಿಶ್ಲೇಷಣೆಯೂ ಕೇಳಿ ಬರುತ್ತಿದೆ. ಚುನಾವಣಾ ಫಲಿತಾಂಶ ಪ್ರಕಟವಾದಾಗ ಮಾಯಾವತಿಯವರಿಗೆ ಎರಡೂ ಕಡೆಯಿಂದಲೂ ಅವಕಾಶ ಸಿಗಲಿದೆ ಎನ್ನುವುದು ಪತ್ರಕರ್ತರ ಅಭಿಪ್ರಾಯ.

ಸಿಧು ಆಕಾಂಕ್ಷೆ
ಪಂಜಾಬ್ ವಿಧಾನಸಭಾ ಚುನಾವಣೆ ಮುಗಿದು, ಫಲಿತಾಂಶಕ್ಕಾಗಿ ಒಂದು ತಿಂಗಳಿಗೂ ಅಧಿಕ ಕಾಲ ಕಾಯಬೇಕಾಗಿದೆ. ಆದರೆ ಪಂಜಾಬ್‌ನಲ್ಲಿ ರಾಜಕೀಯ ಕಸರತ್ತು ಮಾತ್ರ ಮಾಮೂಲಿನಂತೆ ಮುಂದುವರಿದೇ ಇದೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿರುವ ನವ
ಜೋತ್ ಸಿಂಗ್ ಸಿಧು, ಸಂದರ್ಶನ ನೀಡುವುದಲ್ಲಿ ತಲ್ಲೀನರಾಗಿದ್ದಾರೆ ಹಾಗೂ ಶಿರೋಮಣಿ ಅಕಾಲಿದಳಕ್ಕೆ ಮುಟ್ಟಿನೋಡಿಕೊಳ್ಳುವಂಥ ಪೆಟ್ಟು ನೀಡುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ತಮ್ಮ ಸುತ್ತ ಇಮೇಜ್ ನಿರ್ಮಿಸಿಕೊಳ್ಳುವ ಕಸರತ್ತನ್ನೂ ಸಿಧು ನಡೆಸುತ್ತಿದ್ದಾರೆ. ಜತೆಗೆ ತಾವು ಸಿಎಂ ಅಭ್ಯರ್ಥಿ ಎನ್ನುವುದನ್ನು ಪರೋಕ್ಷವಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅಮರೀಂದರ್ ಸಿಂಗ್ ಇಂಥ ಯಾವ ಬೆಳವಣಿಗೆಯೂ ಆಗದು ಎಂಬ ವಿಶ್ವಾಸ ಹೊಂದಿದ್ದು, ತಾವೇ ಸಿಎಂ ಆಗುವುದು ಖಚಿತ ಎಂಬ ವಿಶ್ವಾಸದಲ್ಲಿದ್ದಾರೆ. ಆಮ್ ಆದ್ಮಿ ಪಕ್ಷ ಕೂಡಾ ಪಂಜಾಬ್ ಫಲಿತಾಂಶ ತನ್ನ ಪರವಾಗಿದೆ ಎಂಬ ವಿಶ್ವಾಸದಲ್ಲಿದೆ. ಆದರೆ ಈ ಯಾವ ಅಂಶಗಳ ಬಗ್ಗೆಯೂ ಸಿಧು ತಲೆ ಕೆಡಿಸಿಕೊಂಡಿಲ್ಲ. ಅವರು ಪಕ್ಷದ ಕಾರ್ಯಕರ್ತರ ಜತೆಗೆ ಸಭೆ ಮಾಡುವಲ್ಲಿ ಹಾಗೂ ಕಾಂಗ್ರೆಸ್ ಪಕ್ಷ ದೊಡ್ಡ ಅಂತರದ ಜಯ ಸಾಧಿಸುತ್ತದೆ ಎಂಬ ಲೆಕ್ಕಾಚಾರದಲ್ಲೇ ಇದ್ದಾರೆ. ಇಷ್ಟೆಲ್ಲ ಕಸರತ್ತು ನಡೆಯುತ್ತಿದ್ದರೂ, ಅಂತಿಮ ಫಲಿತಾಂಶಕ್ಕೆ ಕಾಯಲೇಬೇಕು.

ಆದಿತ್ಯನಾಥ್‌ಗೆ ಬುದ್ಧಿಮಾತು
ಬಿಜೆಪಿಯ ಗೋರಖ್‌ಪುರ ಸಂಸದ ಮಹಾಂತ ಆದಿತ್ಯನಾಥ್ ತಮ್ಮನ್ನು ತಾವೇ ಧಾರ್ಮಿಕ ವ್ಯವಹಾರಗಳ ಚಿಂತಕ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಈ ಅತಿ ಕ್ರಿಯಾಶೀಲ, ಮಹತ್ವಾಕಾಂಕ್ಷಿ ಸಂಸದನಿಗೆ ಪಕ್ಷದ ಅಧ್ಯಕ್ಷ ಅಮಿತ್ ಶಾ ನೋಟಿಸ್ ನೀಡಿ ಕರೆಸಿಕೊಂಡು ಕೆಲ ಬುದ್ಧಿಮಾತು ಹೇಳಿದ್ದಾರೆ ಎನ್ನಲಾಗಿದೆ. ಶಾ ತಮ್ಮ ಮಾಮೂಲಿ ಶೈಲಿಯಲ್ಲಿ ಯುವ ಸಂಸದನಿಗೆ, ಉತ್ತರ ಪ್ರದೇಶದ ಸಿಎಂ ಹುದ್ದೆ ಮೇಲೆ ಕಣ್ಣಿಡದಂತೆ ಸೂಚನೆ ನೀಡಿದ್ದಾರೆ. ಆ ವಿಚಾರವನ್ನು ದೇವರಿಗೆ ಬಿಟ್ಟು, ಪಕ್ಷಕ್ಕಾಗಿ ಶ್ರಮಿಸುವಂತೆ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಶಾ ತಮ್ಮದೇ ಪ್ರಕರಣವನ್ನು ಉದಾಹರಿಸಿ, ತಾವೆಂದೂ ಪಕ್ಷದ ಹುದ್ದೆ ಅಥವಾ ಸ್ಥಾನಮಾನಗಳಿಗೆ ಆಕಾಂಕ್ಷೆ ಹೊಂದಿರಲಿಲ್ಲ ಎಂದು ತಿಳಿಸಿದರು. ಕೇವಲ ಕೆಲಸದ ಬಗ್ಗೆ ಮಾತ್ರ ತಲೆ ಕೆಡಿಸಿಕೊಂಡಿದ್ದಾಗಿ ಶಾ ವಿವರಿಸಿದರು. ಆದ್ದರಿಂದ ಆದಿತ್ಯನಾಥ್ ಅವರ ಬಾಯಿಗೆ ಬೀಗ ಬಿದ್ದಿದೆ ಎಂದರೆ ಇದರ ಕೃತಜ್ಞತೆ ಯಾರಿಗೆ ಸಲ್ಲಬೇಕು ಎಂಬ ಬಗ್ಗೆ ಜನರೇ ನಿರ್ಧರಿಸಬೇಕು.

ಉತ್ತರ ಪ್ರದೇಶದಲ್ಲಿ ಹೊಸ ಬಹೂ
ಕಳೆದ ಲೋಕಸಭಾ ಚುನಾವಣೆಯಲ್ಲಿ ಹೇಮಾಮಾಲಿನಿ, ರಾಷ್ಟ್ರೀಯ ಲೋಕದಳದ ಜಯಂತ್ ಚೌಧರಿಯವರನ್ನು ಅಗಾಧ ಅಂತರದಿಂದ ಸೋಲಿಸಿದ್ದರು. ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಮೊಮ್ಮಗನಾಗಿರುವ ಜಯಂತ್ ಅವರಿಗೆ ಇಂದಿಗೂ, ಮಥುರಾ ಕ್ಷೇತ್ರದಿಂದ ಹೇಗೆ ತಮಗೆ ಸೋಲು ಉಂಟಾಯಿತು ಎನ್ನುವುದು ಅರ್ಥವಾಗಿಲ್ಲ. ಏಕೆಂದರೆ ಅದು ಅವರ ಪಕ್ಷದ ಭದ್ರಕೋಟೆ. ಹೇಮಾಮಾಲಿನಿ ಅವರ ಸೌಂದರ್ಯ ಎಲ್ಲ ಬದಲಾವಣೆಗೆ ಕಾರಣವಾಯಿತು ಎನ್ನುವುದು ಅವರ ನಂಬಿಕೆ. ಆದ್ದರಿಂದ ವಿಧಾನಸಭಾ ಚುನಾವಣೆಗೆ ಅವರು ಪತ್ನಿ ಚಾರು ಸಿಂಗ್ ಚೌಧರಿ ಅವರನ್ನು ದೊಡ್ಡ ಪ್ರಮಾಣದಲ್ಲಿ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಅವರು ಸ್ಟಾರ್ ಪ್ರಚಾರಕಿ. ಈ ಭಾಗದಲ್ಲಿ ಜಾಟ್ ಸಮುದಾಯದ ಮತದಾರರು ದೊಡ್ಡ ಪ್ರಮಾಣದಲ್ಲಿದ್ದಾರೆ. ಅವರ ರೋಡ್‌ಶೋಗೆ ದೊಡ್ಡ ಸಂಖ್ಯೆಯ ಬೆಂಬಲಿಗರು ಹಾಜರಾಗುತ್ತಿದ್ದಾರೆ. ಕೆಲವರು ನೆನಪಿಸಿಕೊಳ್ಳುವಂತೆ 2014ರಲ್ಲಿ ಹೇಮಾಮಾಲಿನಿ ಆಕರ್ಷಿಸುತ್ತಿದ್ದಷ್ಟೇ ಬೆಂಬಲಿಗರನ್ನು ಈ ಬಾರಿ ಹೊಸ ಬಹೂ ಆಕರ್ಷಿಸುತ್ತಿದ್ದಾರೆ. ಕಳೆದ ಕೆಲ ವಾರಗಳಲ್ಲಿ ಇವರು ಬಹಳಷ್ಟು ಜಿಲ್ಲೆಗಳಲ್ಲಿ ಪ್ರಚಾರ ಕೈಗೊಂಡಿದ್ದು, ಎಲ್ಲೆಡೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಕೆಲ ವಿಶ್ಲೇಷಕರು ಹೇಳುವಂತೆ ಹೇಮಾ ಅವರು ಗಳಿಸಿದ ಫಲಿತಾಂಶವನ್ನೇ ಈ ಬಾರಿ ಇವರೂ ಪಡೆಯುವ ನಿರೀಕೆ ಇದೆ. ಆದರೆ ವಾಸ್ತವವಾಗಿ ಅವರು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎನ್ನುವುದು ಫಲಿತಾಂಶದ ಬಳಿಕವಷ್ಟೇ ತಿಳಿಯುತ್ತದೆ. ಜಯಂತ್ ಹಾಗೂ ಅವರ ಪತ್ನಿ, ಮತದಾರರ ಮೇಲೆ ಪ್ರಭಾವ ಬೀರುವ ಮೂಲಕ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News