ರೈತರು ರೇಷ್ಮೆ-ಹೈನುಗಾರಿಕೆಯಲ್ಲಿ ತೊಡಗಲಿ: ಸಚಿವ ಮಂಜು

Update: 2017-02-21 17:39 GMT

ದಾವಣಗೆರೆ, ಫೆ.21: ರೇಷ್ಮೆ ಬೆಳೆಗಾರರು, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆ ಇಲ್ಲ. ಹೀಗಾಗಿ, ರೈತರು ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಎ.ಮಂಜು ಕರೆ ನೀಡಿದರು.

ನಗರದ ಪಶು ಆಸ್ಪತ್ರೆಯಲ್ಲಿ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶು ವೈದ್ಯಕೀಯ, ಬೀದರ್ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿ ಮತ್ತು ಬೆಂಗಳೂರು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗಳ ಸಂಯುಕ್ತಾಶ್ರದಲ್ಲಿ ಏರ್ಪಡಿಸಲಾಗಿದ್ದ ನೂತನ ರೆಫರಲ್ ಪ್ರಯೋಗಾಲಯ ಕಟ್ಟಡ ಶಂಕುಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರೇಷ್ಮೆಯಲ್ಲಿ ತಿಂಗಳಿಗೆ ಮತ್ತು ಹಾಲಿನಲ್ಲಿ ವಾರದಲ್ಲಿ ಹಣ ಪಡೆಯುವ ಮೂಲಕ ರೈತರು ಬದುಕನ್ನು ಕಟ್ಟಿಕೊಳ್ಳಬಹುದು. ಆದ್ದರಿಂದ ರೈತರು ತಮ್ಮ ಚಿತ್ತವನ್ನು ಸಿಲ್ಕ್ ಮತ್ತು ಮಿಲ್ಕ್ ನತ್ತ ಹರಿಸಬೇಕೆಂದು ನುಡಿದರು.

ಜಾನುವಾರುಗಳ ನಿಗೂಢ ರೋಗ ಪತ್ತೆಹಚ್ಚಿ ಅದರ ನಿಯಂತ್ರಣಕ್ಕೆ ಚಿಕಿತ್ಸೆ ನೀಡಲು ರಾಜ್ಯದ ಎಲ್ಲಾ ರೈತರಿಗೂ ಅನುಕೂಲವಾಗಬೇಕೆಂಬ ಉದ್ದೇಶದಿಂದ ರಾಜ್ಯದ ಹೃದಯ ಭಾಗವಾಗಿರುವ ದಾವಣಗೆರೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ರೆಫರಲ್ ಪ್ರಯೋಗಾಲಯ ಮಂಜೂರು ಮಾಡಲಾಗಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ರೈತರಿಗೆ ಅನುಕೂಲವಾಗಲಿದೆ. ಇಂದು ಶಂಕುಸ್ಥಾಪನೆಗೊಂಡಿರುವ ಪ್ರಯೋಗಾಲಯದ ಕಟ್ಟಡ ಕಾಮಗಾರಿ ಅದಷ್ಟು ಶೀಘ್ರ ಪೂರ್ಣಗೊಳಿಸಿ ರೈತರ ಅನುಕೂಲಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದರು.

ಹಿಂದೆ ದಿನಕ್ಕೆ 58 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಪ್ರಸ್ತುತ ದಿನಕ್ಕೆ 72 ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ. ಮುಂದೆ ಈ ಪ್ರಮಾಣವನ್ನು 1 ಕೋಟಿ ಲೀಟರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಪ್ರತಿ ಲೀಟರ್‌ಗೆ ರೂ. 5 ಪ್ರೋತ್ಸಾಹ ಧನ ನೀಡಲಾಗುತ್ತಿದೆ. ದೇಶದಲ್ಲಿಯೇ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಎರಡನೆ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಮಾತನಾಡಿ, 5 ಕೋಟಿ ರೂ. ಅನುದಾನದಲ್ಲಿ ಶೀಘ್ರ ರೆಫರಲ್ ಆಸ್ಪತ್ರೆ ನಿರ್ಮಾಣಗೊಂಡು ರೈತರ ಉಪಯೋಗಕ್ಕೆ ದೊರೆಯಲಿದೆ. ಜಾನುವಾರುಗಳಿಗೂ ಸ್ಕ್ಯಾನಿಂಗ್ ಉಪಕರಣದ ಆವಶ್ಯಕತೆ ಇದ್ದು, ಈ ಬಗ್ಗೆ ಆಯುಕ್ತರಲ್ಲಿ ಮಾತನಾಡಲಾಗಿದೆ ಎಂದು ನುಡಿದರು.

ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ನಿರ್ದೇಶಕ ಡಾ. ಎಸ್.ಎಂ. ಬೈರೇಗೌಡ ಸ್ವಾಗತಿಸಿದರು. ಅಪರ ನಿರ್ದೇಶಕ ಎಂ.ಟಿ. ಮಂಜುನಾಥ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಉಮಾ ಎಂ.ಪಿ. ರಮೇಶ್, ಮಹಾನಗರ ಪಾಲಿಕೆ ಪೂಜ್ಯ ಮಹಾಪೌರರಾದ ರೇಖಾ ನಾಗರಾಜ್, ಪಾಲಿಕೆ ಸದಸ್ಯ ದಿನೇಶ್ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಮುದೇಗೌಡರ ಗಿರೀಶ್, ಈರೇಶ ಬಿ. ಅಂಚಟಗೇರಿ, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಎಚ್. ಎಸ್. ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು.


ಬರ ನಿರ್ವಹಣೆಗೆ ತಾಲೂಕಿಗೆ 1.35 ಕೋ. ರೂ. ಅನುದಾನ
ಬರ ನಿರ್ವಹಣೆಗೆ ಪ್ರತಿ ತಾಲೂಕಿನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್‌ ಸಮಿತಿ ರಚಿಸಿ ತಾಲೂಕಿಗೆ 1.35 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಎ. ಮಂಜು ತಿಳಿಸಿದರು.


 ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ನಿರ್ವಹಣೆಗೆ ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂಬುದು ಸುಳ್ಳು. ಈಗಾಗಲೇ ಬರ ನಿರ್ವಹಣೆಗೆ ಪ್ರತಿ ತಾಲೂಕಿಗೆ 1.35 ಕೋಟಿ ರೂ. ಶಾಶ್ವತ ಕುಡಿಯುವ ನೀರು ಒದಗಿಸಲು ಪ್ರತಿ ಜಿಲ್ಲಾ ಪಂಚಾಯತ್‌ಗೆ 70 ಕೋಟಿ ರೂ., 14ನೆ ಹಣಕಾಸು ಯೋಜನೆಯಡಿ 54 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.

ನೀರಿನ ಕೊರತೆ ಇರುವ ಕಡೆಗಳಲ್ಲಿ ನೀರು ಪೂರೈಸಲು 650 ರೂ. ಗಳಂತೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಮೇವು ಸಂಗ್ರಹಣೆಗೆ ತಾಲೂಕಿಗೆ 20 ಲಕ್ಷ ರೂ. ನೀಡಿ ರಾಜ್ಯಾದ್ಯಂತ 95 ಮೇವು ಕೇಂದ್ರ ಸ್ಥಾಪಿಸಿ, 6 ರೂಪಾಯಿಗೆ 1 ಕೆಜಿ ಮೇವು ಖರೀದಿಸಿ 2 ರೂಪಾಯಿಗಳಂತೆ ರೈತರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.


 ರಾಜ್ಯಾದ್ಯಂತ 53 ಗೋಶಾಲೆಗಳನ್ನು ಆರಂಭಿಸಲಾಗಿದ್ದು, ಇನ್ನೂ 101 ಗೋಶಾಲೆ ಸ್ಥಾಪನೆಗೆ ಬೇಡಿಕೆ ಇದೆ. ಗೋಶಾಲೆಯಲ್ಲಿ ಒಣ ಮೇವು ಪುಡಿ ಮಾಡಿ, ರಸ ಮೇವು ತಯಾರಿಸಲಾಗುವುದು ಎಂದರು.


ರಾಜ್ಯದಲ್ಲಿ ಒಟ್ಟು 695 ಪಶು ವೈದ್ಯರ ಕೊರತೆಇದೆ. 550 ಪಶು ವೈದ್ಯರನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಿಕೊಳ್ಳಲು ಸಚಿವ ಸಂಪುಟ ಅನುಮತಿ ನೀಡಿದೆ. 116 ಪಶು ವೈದ್ಯರನ್ನು ಹೈದರಾಬಾದ್ ಕರ್ನಾಟಕಕ್ಕೆ ಕಲ್ಪಿಸಿರುವ ಕಾಯ್ದೆ-37 ಜೆಯ ಪ್ರಕಾರ ಕರ್ನಾಟಕ ಲೋಕಸೇವಾ ಆಯೋಗ ಭರ್ತಿ ಮಾಡಿಕೊಳ್ಳಲಿದೆ.
ಎ. ಮಂಜು ಪಶು ಸಂಗೋಪನೆ,ರೇಷ್ಮೆ ಇಲಾಖೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News