ಗೋವುಗಳನ್ನು ಕೊಲ್ಲುವವರ ಕೈಕಾಲುಮುರಿಯುವೆ: ಉ.ಪ್ರ. ಬಿಜೆಪಿ ಶಾಸಕ ವಿಕ್ರಮ್ ಸೈನಿ ಧಮಕಿ

Update: 2017-03-26 13:52 GMT

  ಲಕ್ನೋ,ಮಾ.26: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರವು ಕಸಾಯಿಖಾನೆಗಳಿಗೆ ಮುಚ್ಚುಗಡೆಗೊಳಿಸುತ್ತಿರುವಂತೆಯೇ, ರಾಜ್ಯ ಬಿಜೆಪಿ ಶಾಸಕ ವಿಕ್ರಮ್ ಸೈನಿ ಅವರು ಗೋವುಗಳನ್ನು ಹತ್ಯೆಗೈಯುವವರನ್ನು ಹಾಗೂ ಅವುಗಳನ್ನು ಅಪಮಾನಿಸುವವರ ಕೈಕಾಲುಗಳನ್ನು ಮುರಿದುಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

   ಮುಝಫರ್‌ಪುರ್‌ನಲ್ಲಿ ಉತ್ತರಪ್ರದೇಶದ ನೂತನ ಸಚಿವರಾಗಿ ನೇಮಕವಾಗಿರುವ ಸುರೇಶ್ ರಾಣಾ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ‘‘ ವಂದೇಮಾತರಂ ಹೇಳಲು ಹಿಂಜರಿಯುವವರ ಹಾಗೂ ಭಾರತ್‌ಮಾತಾ ಕೀ ಜೈ ಎನ್ನಲು ನೋವಾಗುತ್ತಿರುವವರ ಮತ್ತು ಗೋವನ್ನು ತಮ್ಮ ತಾಯಿಯೆಂದು ಪರಿಗಣಿದೆ ಅವುಗಳನ್ನು ಹತ್ಯೆಗೈಯುವವರ ಕೈಕಾಲುಗಳನ್ನು ಮುರಿಯವುದಾಗಿ ನಾನು ಭರವಸೆ ನೀಡುತ್ತೇನೆ’’ ಎಂದು ಬೆದರಿಕೆ ಹಾಕಿದ್ದಾರೆ.

 ‘‘ ಈ ಭರವಸೆಯನ್ನು ಈಡೇರಿಸಲು ನಾವು ಸಿದ್ಧರಾಗಿದ್ದೇವೆ. ಇಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಯುವಕಾರ್ಯಕರ್ತರ ತಂಡವೇ ನಮ್ಮ ಬಳಿಯಿದೆ’’ ಎಂದವರು ಹೇಳಿದ್ದಾರೆ. 2013ರ ಮುಝಫರ್‌ನಗರ್ ಕೋಮುಗಲಭೆಯ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಸೈನಿ , ಈ ಹಿಂದೆಯೂ ಹಲವು ಬಾರಿ ತಮ್ಮ ಹೇಳಿಕೆಗಳಿಂದಾಗಿ ವಿವಾದಕ್ಕೀಡಾಗಿದ್ದರು.

ಉತ್ತರಪ್ರದೇಶದ ನೂತನ ಬಿಜೆಪಿ ಸರಕಾರದ ಮುಖ್ಯಮಂತ್ರಿಯಾಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸಿದ ಒಂದೇ ವಾರದ ಬಳಿಕ ರಾಜ್ಯದ ಹಲವಾರು ಕಸಾಯಿಖಾನೆಗಳನ್ನು ಮುಚ್ಚಲಾಗಿದೆ. ಸಂಘಪರಿವಾರ ಬೆಂಬಲಿಗರು ಹಲವಾರು ಮಾಂಸದಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ.ಕಸಾಯಿಖಾನೆಗಳ ಮುಚ್ಚುಗಡೆಯನ್ನು ವಿರೋಧಿಸಿ ರಾಜಧಾನಿ ಲಕ್ನೋದಲ್ಲಿ ಮಾಂಸ ವ್ಯಾಪಾರಿಗಳು ಅನಿರ್ದಿಷ್ಟ ಮುಷ್ಕರ ಆರಂಭಿಸಿದ್ದಾರೆ. ಇದರಿಂದಾಗಿ ಕೋಳಿ ಹಾಗೂ ಆಡು ಮಾಂಸ ಹಾಗೂ ಮೊಟ್ಟೆ ಮಾರಾಟ ಸಂಪೂರ್ಣ ಸ್ಥಗಿತಗೊಂಡಿದೆ ಹಾಗೂ ತರಕಾರಿ ಬೆಲೆಗಳು ಗಗನಕ್ಕೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News