ದೇಶದ ಟಾಪ್ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಕುವೆಂಪು ವಿವಿಗೆ ಸ್ಥಾನ

Update: 2017-04-04 17:54 GMT

ಶಿವಮೊಗ್ಗ, ಎ. 4: ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಪ್ರಕಟಿಸಿರುವ ರಾಷ್ಟ್ರೀಯ ಸಾಂಸ್ಥಿಕ ರ್ಯಾಕಿಂಗ್ ಚೌಕಟ್ಟು (ಎನ್‌ಐಆರ್‌ಎಫ್) ಪಟ್ಟಿಯಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ಸ್ಥಾನ ಪಡೆದಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ಸೋಮವಾರ ಹೊಸದಿಲ್ಲಿಯಲ್ಲಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕರ್ನಾಟಕದ ಸಾಂಪ್ರದಾಯಿಕ ರಾಜ್ಯ ವಿಶ್ವವಿದ್ಯಾನಿಲಯಗಳ ಪೈಕಿ ಮೈಸೂರು ವಿಶ್ವವಿದ್ಯಾನಿಲಯ ಮೊದಲನೆಯ ಸ್ಥಾನ ಪಡೆದಿದ್ದು, ಕುವೆಂಪು ವಿಶ್ವವಿದ್ಯಾನಿಲಯ ಎರಡನೆಯ ಸ್ಥಾನದಲ್ಲಿದೆ. ಮೈಸೂರು ವಿಶ್ವವಿದ್ಯಾನಿಲಯ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ 100ರ ಒಳಗಿನ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೆ, ಕುವೆಂಪು ವಿಶ್ವವಿದ್ಯಾನಿಲಯ 101-150ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಈ ಆಯ್ಕೆಯಲ್ಲಿ ಒಟ್ಟು 3,300ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ಪರಿಗಣಿಸಲಾಗಿದೆ. ಆಯಾ ವಿಶ್ವವಿದ್ಯಾನಿಲಯಗಳು ಬೋಧನೆ, ಕಲಿಕೆ ಮತ್ತು ಸಂಪನ್ಮೂಲ, ಸಂಶೋಧನೆ, ವೃತ್ತಿಪರತೆ, ಸಹಯೋಗ, ಪದವಿ ಬಳಿಕದ ಉದ್ಯೋಗಾವಕಾಶ ಹಾಗೂ ಶಿಕ್ಷಣ ಸಂಸ್ಥೆ ಹೊಂದಿರುವ ಪ್ರಭಾವವನ್ನು ಪರಿಗಣಿಸಿ ರ್ಯಾಂಕ್ ಪಟ್ಟಿಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸ್ಥಾನಗಳನ್ನು ನೀಡಲಾಗಿದೆ. ಈ ಬಗ್ಗೆ ಕುವೆಂಪು ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ. ಜೋಗನ್ ಶಂಕರ್ ಹಾಗೂ ಕುಲಸಚಿವ ಪ್ರೊ.ಬೋಜ್ಯಾ ನಾಯ್ಕ ಹರ್ಷ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News